
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮುಂದಿನ ಗುರುವಾರ ಲಕ್ನೋದಲ್ಲಿ ಸರಣಿಯ ಮೊದಲ ಪಂದ್ಯ ನಡೆಯಲಿದ್ದು ಈ ಸರಣಿಯಲ್ಲಿ ಭಾಗಿಯಾಗಲಿರುವ ಭಾರತೀಯ ಆಟಗಾರರ ಸ್ಕ್ವಾಡ್ ಈಗಾಗಲೇ ಲಕ್ನೋ ತಲುಪಿದ್ದು ಸರಣಿಗೆ ಸಜ್ಜಾಗಿದೆ. ಲಕ್ನೋ ತಲುಪಿರುವ ಫೊಟೋಗಳನ್ನು ಟೀಮ್ ಇಂಡಿಯಾ ಬ್ಯಾಟರ್ ಸೂರ್ಯಕುಮಾರ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿ ಮೊದಲಿಗೆ ಟೆಸ್ಟ್ ಸರಣಿಯೊಂದಿಗೆ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಆಸ್ಟ್ರೇಲಿಯಾಗೆ ಟಿ20 ಸರಣಿಯನ್ನಾಡಲು ತೆರಳಿದ್ದ ಶ್ರೀಲಂಕಾ ತಂಡ ಬಯೋಬಬಲ್ ಬದಲಾವಣೆಗೆ ಸುಲಭವಾಗಲಿದೆ ಎಂಬ ಕಾರಣಕ್ಕೆ ಮೊದಲು ಟಿ20 ಸರಣಿ ಆಯೋಜನೆಗೆ ಮನವಿ ಮಾಡಿಕೊಂಡಿತ್ತು. ಇದನ್ನು ಪುರಸ್ಕರಿಸಿರುವ ಬಿಸಿಸಿಐ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಹೀಗಾಗಿ ಮೊದಲ ಪಂದ್ಯ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಫೆಬ್ರವರು 24ರಂದು ಟಿ20 ಸರಣಿಯೊಂದಿಗೆ ಆರಂಭವಾಗಲಿದೆ. ನಂತರ ಧರ್ಮಶಾಲಾದಲ್ಲಿ ಫೆಬ್ರವರಿ 26 ಹಾಗೂ 27ರಂದು ಉಳಿದ ಎರಡು ಪಂದ್ಯಗಳು ನಡೆಯಲಿದೆ.
ಟಿ20 ಸರಣಿಯ ಬಳಿಕ ಭಾರತ ಹಾಗೂ ಶ್ರೀಲಂಕಾ ತಂಡಗಳು ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದ್ದು ಎರಡು ಪಂದ್ಯಗಳ ಸರಣಿ ಇದಾಗಿದೆ. ಇದು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23ರ ಭಾಗವಾಗಿದೆ. ಮೊಹಾಲಿಯಲ್ಲಿ ಮೊದಲ ಟೆಸ್ಟ್ ಪಂದ್ಯ ಮಾರ್ಚ್ 4-8ರವರೆಗೆ ನಡೆಯಲಿದ್ದು ಎರಡನೇ ಪಂದ್ಯ ಬೆಂಗಳೂರಿನಲ್ಲಿ ಮಾರ್ಚ್ 12-16ರ ವರೆಗೆ ನಡೆಯಲಿದೆ. ಈ ಪಂದ್ಯ ಅಹರ್ನಿಶಿಯಾಗಿ ನಡೆಯಲಿದೆ.
ಇನ್ನು ಶ್ರೀಲಂಕಾ ವಿರುದ್ಧಧ ಟಿ20 ಸರಣಿಯಿಂದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್‌ಗೆ ವಿಶ್ರಾಂತಿಯನ್ನು ನೀಡಲಾಗಿದೆ. ಈ ಇಬ್ಬರು ಕೂಡ ಟೆಸ್ಟ್ ಸರಣಿಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ರವೀಂದ್ರ ಜಡೇಜಾ, ಜಸ್ಪ್ರೀತ್ ಬೂಮ್ರಾ ಕಮ್‌ಬ್ಯಾಕ್ ಮಾಡಿದ್ದಾರೆ.
ಇನ್ನು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ತಂಡ ಕೂಡ ಶೀಘ್ರದಲ್ಲಿಯೇ ಲಕ್ನೋ ತಲುಪಲಿದೆ. ಆಸ್ಟ್ರೇಲಿಯಾ ಸರಣಿಯ ಬಯೋಬಬಲ್‌ನಿಂದ ಶ್ರೀಲಂಕಾ ತಂಡದ ಆಟಗಾರರ ಭಾರತ ಸರಣಿಯ ಬಯೋಬಬಲ್‌ಗೆ ವರ್ಗಾವಣೆಯಾಗಲಿದೆ. ಹೀಗಾಗಿ ಕನಿಷ್ಠ ಕ್ವಾರಂಟೈನ್‌ನೊಂದಿಗೆ ಆಟಗಾರರು ಸರಣಿಗೆ ಸಜ್ಜಾಗಲಿದ್ದಾರೆ. ಟಿ20 ಸರಣಿಯಲ್ಲಿ ಭಾಗಿಯಾಗಲಿರುವ 18 ಆಟಗಾರರ ಬಳಗವನ್ನು ಇಂದು ಸೋಮವಾರ ಶ್ರೀಲಂಕಾ ಕ್ರಿಕೆಟ್ ಮಂಡಳಿ ಘೋಷಣೆ ಮಾಡಿದೆ.
ಭಾರತ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಸಂಜು ಸ್ಯಾಮ್ಸನ್, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅವೇಶ್ ಖಾನ್
ಶ್ರೀಲಂಕಾ ಸ್ಕ್ವಾಡ್: ದಸುನ್ ಶನಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕ (ಉಪನಾಯಕ), ದಿನೇಶ್ ಚಾಂಡಿಮಾಲ್, ದನುಷ್ಕ ಗುಣತಿಲಕ, ಕಮಿಲ್ ಮಿಶ್ರಾ, ಜನಿತ್ ಲಿಯಾನಗೆ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಲಹಿರು ಎಫ್ ಕುಮಾರ, ದುಷ್ಮಂತ ಚಮೀರ, ಲಹಿರು ಎಫ್ ಕುಮಾರ, ಮಹೇಶ್ ತೀಕ್ಷಣ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ಆಶಿಯನ್ ಡೇನಿಯಲ್