ಭಾರತ vs ಶ್ರೀಲಂಕಾ: ಮೂವರಲ್ಲಿ ಯಾರನ್ನು ಆರಿಸುತ್ತಾರೆ ರೋಹಿತ್? ರೋಹಿತ್‌ಗೆ ತಲೆನೋವಾದ ಆ ಮೂವರು!

ಸದ್ಯ ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧದ ಟಿ ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಈಗಾಗಲೇ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ ಮುಕ್ತಾಯಗೊಂಡಿದ್ದು, 3 ಪಂದ್ಯಗಳ ಈ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳಲ್ಲಿಯೂ ಜಯ ಗಳಿಸಿದ ಟೀಮ್ ಇಂಡಿಯಾ ಪ್ರವಾಸಿ ಶ್ರೀಲಂಕಾಗೆ ವೈಟ್ ವಾಷ್ ಬಳಿದು ಸಾಧನೆ ಮಾಡಿದೆ. ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧ ಸಾಲು ಸಾಲು ವೈಟ್ ವಾಷ್ ಸಾಧನೆ ಮಾಡುತ್ತಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.
ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ಪೂರ್ಣಾವಧಿ ನಾಯಕನಾದ ನಂತರ ಆಡಿರುವ ಎಲ್ಲಾ ಪಂದ್ಯಗಳಲ್ಲಿಯೂ ಜಯ ಸಾಧಿಸಿರುವ ರೋಹಿತ್ ಶರ್ಮಾ ಇದೀಗ ಶ್ರೀಲಂಕಾ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿ ಮೂಲಕ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾಗಿ ತನ್ನ ಪಯಣವನ್ನು ಆರಂಭಿಸಲಿದ್ದಾರೆ. ಹೀಗೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ರೋಹಿತ್ ಶರ್ಮಾ ಪೂರ್ಣಾವಧಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಲಿರುವ ಮೊದಲನೇ ಟೆಸ್ಟ್ ಸರಣಿ ಎನಿಸಿಕೊಂಡಿದ್ದರೆ, ಈ ಸರಣಿಯ ಮೊದಲನೇಯ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿ ಆಡಲಿರುವ ನೂರನೇ ಟೆಸ್ಟ್ ಪಂದ್ಯ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದು, ಟೂರ್ನಿ ಮೇಲೆ ಕ್ರೇಜ್ ಹೆಚ್ಚಾಗುವುದಕ್ಕೆ ಕಾರಣವಾಗಿದೆ.
ಹೀಗೆ ಸಾಕಷ್ಟು ಕುತೂಹಲ ಮತ್ತು ವಿಶೇಷತೆಯನ್ನು ಹೊಂದಿರುವ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಮೊದಲನೇ ಟೆಸ್ಟ್ ಪಂದ್ಯ ಮಾರ್ಚ್ 4ರಂದು ಆರಂಭವಾಗಲಿದ್ದು ಮೊಹಾಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಟೀಮ್ ಇಂಡಿಯಾ ತನ್ನ ಕೊನೆಯ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತ ನಂತರ ತಂಡದಲ್ಲಿದ್ದ ಪ್ರಮುಖ ಆಟಗಾರರಾದ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ ಹಾಗೂ ವೃದ್ಧಿಮಾನ್ ಸಹಾ ಸ್ಥಾನ ಕಳೆದುಕೊಂಡಿದ್ದು, ಸದ್ಯ ಶ್ರೀಲಂಕಾ ವಿರುದ್ಧದ ಈ ಸರಣಿ ಮೂಲಕ ಯುವ ಕ್ರಿಕೆಟಿಗರಿಗೆ ಹೆಚ್ಚು ಅವಕಾಶ ಸಿಗಲಿವೆ. ಸದ್ಯ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಯಾವ ಆಟಗಾರನನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಬೇಕು ಎಂಬ ಆಯ್ಕೆ ರೋಹಿತ್ ಶರ್ಮಾ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದು, ಈ ಕೆಳಕಂಡ ಮೂವರು ಆಟಗಾರರಲ್ಲಿ ರೋಹಿತ್ ಶರ್ಮಾ ಯಾರಿಗೆ ಮೂರನೇ ಕ್ರಮಾಂಕದ ಅವಕಾಶವನ್ನು ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಶುಬ್ಮನ್ ಗಿಲ್
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಗಾಯದ ಸಮಸ್ಯೆಗೆ ಒಳಗಾದ ಶುಬ್ಮನ್ ಗಿಲ್ ನಂತರ ನಡೆದ ಸರಣಿಗಳಿಂದ ಹೊರಗುಳಿದಿದ್ದರು. ಸದ್ಯ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಶುಬ್ಮನ್ ಗಿಲ್ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಾರಾ ಎಂಬ ಪ್ರಶ್ನೆಯನ್ನು ಮೂಡಿದೆ. ಶುಬ್ಮನ್ ಗಿಲ್ ತಾನಾಡಿರುವ 57 ಪ್ರಥಮ ದರ್ಜೆ ಇನ್ನಿಂಗ್ಸ್ ಪೈಕಿ 44 ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದು, ಭಾರತ ಎ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಶುಬ್ಮನ್ ಗಿಲ್ ಆಟವನ್ನು ತುಂಬಾ ಹತ್ತಿರದಿಂದ ಕಂಡಿದ್ದಾರೆ. ಇನ್ನು ಶುಬ್ಮನ್ ಗಿಲ್ ಅವರನ್ನು ಭಾರತದ ಮೂರನೇ ಕ್ರಮಾಂಕದ ಆಟಗಾರನನ್ನಾಗಿ ಕಣಕ್ಕಿಳಿಸುವತ್ತ ಟೀಮ್ ಮ್ಯಾನೇಜ್‌ಮೆಂಟ್ ಚಿಂತನೆ ನಡೆಸುತ್ತಿದ್ದು, ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಈ ಆಯ್ಕೆಗೆ ತಲೆಯಾಡಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಶ್ರೇಯಸ್ ಐಯ್ಯರ್
ನ್ಯೂಜಿಲೆಂಡ್ ವಿರುದ್ಧ ಕಾನ್ಪುರದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶ್ರೇಯಸ್ ಅಯ್ಯರ್ ತಾನಾಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ಶತಕ ಸಿಡಿಸಿ ಅಬ್ಬರಿಸಿದ್ದರು. ಹೀಗೆ ಚೊಚ್ಚಲ ಪಂದ್ಯದಲ್ಲಿಯೇ ಶತಕ ಸಿಡಿಸಿದ್ದ ಶ್ರೇಯಸ್ ಅಯ್ಯರ್ ಅನಾರೋಗ್ಯದ ಕಾರಣದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಂಡಿದ್ದರು ಹಾಗೂ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ 204 ರನ್ ಕಲೆಹಾಕಿ ಸರಣಿಶ್ರೇಷ್ಠ ಎನಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಕೂಡ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಲ್ಲ ಆಟಗಾರನಾಗಿದ್ದು ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಹನುಮ ವಿಹಾರಿ
ವಿದೇಶಿ ನೆಲದಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಹನುಮ ವಿಹಾರಿ ಆಡುವ ಬಳಗದಲ್ಲಿ ಅವಕಾಶವನ್ನು ಪಡೆದುಕೊಳ್ಳುತ್ತಿದ್ದರು. ಚೇತೇಶ್ವರ್ ಪೂಜಾರ ರೀತಿಯೇ ಹೆಚ್ಚು ಸಮಯದವರೆಗೆ ನೆಲಕಚ್ಚಿ ನಿಂತು ವಿಕೆಟ್ ಕಾಪಾಡಿಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿರುವ ಹನುಮ ವಿಹಾರಿ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಆಟಗಾರನ ರೇಸ್‌ನಲ್ಲಿದ್ದು, ಆಡುವ ಬಳಗದಲ್ಲಿ ಅವಕಾಶ ಪಡೆದುಕೊಳ್ಳಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
ಹೀಗೆ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ಹನುಮ ವಿಹಾರಿ ಈ ಮೂವರು ಆಟಗಾರರಲ್ಲಿ ಯಾರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲು ರೋಹಿತ್ ಶರ್ಮಾ ಆಯ್ಕೆ ಮಾಡುತ್ತಾರೆ ಎಂಬುದು ಸದ್ಯ ಕುತೂಹಲ ಹುಟ್ಟುಹಾಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications