
ಆಡುವ ಆಯ್ಕೆ ನನ್ನ ಕೈಯಲ್ಲಿಲ್ಲ
ಎರಡನೇ ಪಂದ್ಯದಲ್ಲಿ ನೀಡಿದ ಅದ್ಭುತ ಪ್ರದರ್ಶನದ ಬಳಿಕ ಶ್ರೇಯಸ್ ಐಯ್ಯರ್ ಪ್ರತಿಕ್ರಿಯೆ ನೀಡಿದ್ದಾರೆ. "ತಂಡದಲ್ಲಿ ಆಡುವುದು ನನ್ನ ಕೈಯಲ್ಲಿ ಇಲ್ಲ. ಹಾಗಾಗಿ ನಾನು ಸಾಕಷ್ಟು ಕಠಿಣ ಅಭ್ಯಾಸವನ್ನು ನಡೆಸುವ ಮೂಲಕ ಉತ್ತಮವಾದ ಸಿದ್ಧತೆ ನಡೆಸಿ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ಈ ಮೂಲಕ ಹೆಚ್ಚಿನ ಅವಕಾಶ ಪಡೆಯುವಂತೆ ಮಾಡಬೇಕು. ಈ ಪಂದ್ಯದಲ್ಲಿ ಹಾಗೂ ಈ ಹಿಂದಿನ ಪಂದ್ಯದಲ್ಲಿಯೂ ನಾನು ಅದನ್ನು ಮಾಡಿದ್ದೇನೆ. ನನ್ನ ದೇಶವನ್ನು ಪ್ರತಿನಿಧಿಸುವ ಅವಕಾಶ ನನಗೆ ದೊರೆತಿರುವುದು ಎಲ್ಲದಕ್ಕಿಂತ ದೊಡ್ಡ ಸಂಗತಿ. ಮೈದಾನಕ್ಕೆ ಇಳಿದಾಗ ನಾನು ನನ್ನ ಶ್ರೇಕಡಾ 100ರಷ್ಟು ಕೊಡುಗೆ ನೀಡುತ್ತಿದ್ದೇನೆ ಹಾಗೂ ಮೈದಾನ ತೊರೆಯುವಾಗ ನನ್ನಲ್ಲಿ ತೃಪ್ತಿಯಿರುತ್ತದೆ" ಎಂದಿದ್ದಾರೆ ಶ್ರೇಯಸ್ ಐಯ್ಯರ್.

ಪರಿಶ್ರಮಕ್ಕೆ ಬೆಲೆಯಿದೆ
ಮುಂದುವರಿದು ಮಾತನಾಡಿದ ಶ್ರೇಯಸ್ ಐಯ್ಯರ್ "ಕಠಿಣ ಪರಿಶ್ರಮಕ್ಕೆ ಯಾವಾಗಲೂ ಬೆಲೆಯಿದೆ. ಇದು ನೀವು ಪಂದ್ಯಗಳಾಚೆಗೆ ನೀವು ಏನು ಮಾಡುತ್ತೀರಿ ಎಂಬುದರ ಪ್ರತಿಬಿಂಬವಾಗಿರುತ್ತದೆ. ಪಿಚ್‌ಗಳು ಹಾಗೂ ಪರಿಸ್ಥಿತಿಗಳು ಬದಲಾಗುತ್ತಿರುವ ಕಾರಣ ನಾನು ಸಾಕಷ್ಟು ಕಠಿಣ ಪರಿಶ್ರಮವನ್ನು ಪಡುತ್ತಿದ್ದೇನೆ. ಅಲ್ಲದೆ ಯಾವಾಗಲೂ ಸಮರ್ಥವಾಗಿದ್ದು ನಮಗೆ ನಾವೇ ಸ್ಪೂರ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಕಠಿಣ ಪರಿಶ್ರಮ ಪಡಬೇಕು ಈ ಮೂಲಕ ನಮ್ಮ ಕೈಯಿಂದ ನಿಯಂತ್ರಿಸಬಹುದಾದದ್ದನ್ನು ನಿಯಂತ್ರಿಸಬೇಕು" ಎಂದಿದ್ದಾರೆ ಶ್ರೇಯಸ್ ಐಯ್ಯರ್.

3ನೇ ಕ್ರಮಾಂಕದಲ್ಲಿ ಆಡುವುದೇ ಮಜಾ ಎಂದ ಐಯ್ಯರ್
ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿರುವ ಕಾರಣ ಶ್ರೇಯಸ್ ಐಯ್ಯರ್ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದು ಅದನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಕೊಹ್ಲಿ ಮರಳಿದಾಗ ಈ ಕ್ರಮಾಂಕವನ್ನು ಕೊಹ್ಲಿ ಮರಳಿ ಪಡೆಯುವ ಸಾಧ್ಯತೆಯೇ ಹೆಚ್ಚಿದೆ. ಆದರೆ ಮೂರನೇ ಕ್ರಮಾಂಕದಲ್ಲಿ ಆಡುವ ವಿಚಾರವಾಗಿ ಮಾತನಾಡಿದ ಐಯ್ಯರ್ ಈ ಕ್ರಮಾಂಕದಲ್ಲಿ ಆಡುವುದು ಮಜವಾದ ಸಂಗತಿ ಎಂದಿದ್ದಾರೆ. "ಅದು ಬ್ಯಾಟಿಂಗ್ ನಡೆಸಲು ಅತ್ಯಂತ ಮಜವಾದ ಕ್ರಮಾಂಕವಾಗಿದೆ. ನಾನು ಅದನ್ನು ಬಹಳವಾಗಿ ಆನಂದಿಸುತ್ತಿದ್ದೇನೆ. ಶೀಘ್ರವಾಗಿ ವಿಕೆಟ್ ಕಳೆದುಕೊಂಡಾಗ ಕಠಿಣ ಸಂದರ್ಭದಲ್ಲಿ ಬ್ಯಾಟಿಂಗ್ ನಡೆಸುವ ಅವಕಾಶ ದೊರೆಯುವ ಕಾರಣ ಉತ್ತಮ ಕ್ರಮಾಂಕವಾಗಿದೆ. ಹೊಸ ಚೆಂಡನ್ನು ಎದುರಿಸಿ ಇನ್ನಿಂಗ್ಸ್ ಬೆಳೆಸಬೇಕಿದೆ" ಎಂದಿದ್ದಾರೆ ಶ್ರೇಯಸ್ ಐಯ್ಯರ್.

ವಿಕೆಟ್ ಕಳೆದುಕೊಂಡ ಬಗ್ಗೆ ಬೇಸರ
ಇನ್ನು ಈ ಪಂದ್ಯದಲ್ಲಿ ಶ್ರೇಯಸ್ ಐಯ್ಯರ್ ಜವಾಬ್ಧಾರಿಯುತವಾಗಿ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಆದರೆ 63 ರನ್‌ಗಳಿಸಿದ್ದ ಸಂದರ್ಭದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಈ ಮೂಲಕ ಐಯ್ಯರ್ ಇನ್ನಿಂಗ್ಸ್ ಅಂತ್ಯವಾಯಿತು. ಹೀಗಾಗಿ ಶ್ರೇಯಸ್ ಐಯ್ಯರ್ ತಾವು ವಿಕೆಟ್ ಕಳೆದುಕೊಂಡ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಮುಂದಿನ ಪಂದ್ಯದಲ್ಲಿ ತಾನು ಶತಕಗಳಿಸಲು ಸಾಧ್ಯವಾಗಬಹುದು ಎಂದುಕೊಂಡಿದ್ದೇನೆ ಎನ್ನುವ ಮೂಲಕ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ ಶ್ರೇಯಸ್ ಐಯ್ಯರ್.

ಅಕ್ಷರ್ ಪಟೇಲ್ ಸಾಹಸ
ವಿಂಡೀಸ್ ನೀಡಿದ 312 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡ ಸಾಧಾರಣ ಆರಂಭವನ್ನು ಪಡೆಯಿತು. ನಾಯಕ ಧವನ್ ನಿಧಾನಗತಿಯ ಬ್ಯಾಟಿಂಗ್ ನಡೆಸಿ 13 ರನ್‌ಗಳಿಗೆ ಔಟಾದರು. ಆದರೆ ಬಳಿಕ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಐಯ್ಯರ್ ಆರಂಭಿಕ ಆಟಗಾರ ಗಿಲ್ ಜೊತೆಗೆ ಸೇರಿಕೊಂಡು ಸ್ಕೋರ್ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಗಿಲ್ 43 ರನ್‌ಗಳಿಸಿದರೆ ಶ್ರೇಯಸ್ ಐಯ್ಯರ್ 63 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ಸಂಜು ಸ್ಯಾಮ್ಸನ್ ಹಾಗೂ ಅಕ್ಷರ್ ಪಟೇಲ್ ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು ಇಬ್ಬರು ಕೂಡ ತಮ್ಮ ಚೊಚ್ಚಲ ಏಕದಿನ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. ಅಕ್ಷರ್ ಪಟೇಲ್ ಈ ಪಂದ್ಯದಲ್ಲಿ ಭಾರತದ ಪರವಾಗಿ ಆಲ್‌ರೌಂಡರ್ ಪ್ರದರ್ಶನ ನೀಡುವ ಮೂಲಕ ಪಂದ್ಯದ ಹೀರೋ ಆಗಿದ್ದಾರೆ. ಬ್ಯಾಟಿಂಗ್‌ನಲ್ಲಿ 35 ಎಸೆತಗಳಲ್ಲಿ 64 ರನ್ ಸಿಡಿಸುವ ಮೂಲಕ ಅಜೇಯವಾಗುಳಿದು ಗೆಲುವಿನ ದಡ ಸೇರಿಸಿದರೆ ಬೌಲಿಂಗ್‌ನಲ್ಲಿಯೂ 9 ಓವರ್‌ಗಳಲ್ಲಿ 40 ರನ್‌ಗಳಿಗೆ 1 ವಿಕೆಟ್ ಪಡೆದುಕೊಂಡರು. ಈ ಪ್ರದರ್ಶನಕ್ಕೆ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.


Click it and Unblock the Notifications












