ತುಂಬಾ ದಿನಗಳಿಂದ ಶತಕ ಬಾರಿಸಿಲ್ಲ: ಕೊಹ್ಲಿ ಕಳಪೆ ಫಾರ್ಮ್ ಕುರಿತು ಕೊನೆಗೂ ಮೌನ ಮುರಿದ ರೋಹಿತ್!

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಕಳೆದೆರಡು ದಿನಗಳ ಕಾಲ ನಡೆದ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗುವುದಕ್ಕೂ ಮುನ್ನಾ ದಿನ ಫೆಬ್ರವರಿ 11ರ ಶುಕ್ರವಾರದಂದು ಗುಜರಾತಿನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ 96 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದು ವೈಟ್ ವಾಷ್ ಸಾಧನೆ ಮಾಡಿತು.
ಹೀಗೆ ರೋಹಿತ್ ಶರ್ಮಾ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಮುನ್ನಡೆಸಿದ ಮೊದಲನೇ ಸರಣಿಯಲ್ಲಿ ವೈಟ್ ವಾಷ್ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ ನಂತರ ಭಾರತ ಟಿ ಟ್ವೆಂಟಿ ತಂಡದ ಪೂರ್ಣಾವಧಿ ನಾಯಕನಾಗಿ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಆ ಸರಣಿಯಲ್ಲಿಯೂ ಕೂಡ ಇದೇ ರೀತಿಯ ವೈಟ್ ವಾಷ್ ಸಾಧನೆಯನ್ನು ಮಾಡಿದ್ದರು. ಹೀಗೆ ರೋಹಿತ್ ಶರ್ಮಾ ಭಾರತ ಸೀಮಿತ ಓವರ್ ತಂಡಗಳ ನಾಯಕತ್ವವನ್ನು ವಹಿಸಿಕೊಂಡು ಕಣಕ್ಕಿಳಿದ ಚೊಚ್ಚಲ ಸರಣಿಗಳಲ್ಲಿ ವೈಟ್ ವಾಷ್ ಸಾಧನೆ ಮಾಡಿ ಸದ್ದು ಮಾಡುತ್ತಿದ್ದಾರೆ.
ಇನ್ನು ಭಾರತ ಏಕದಿನ, ಟಿ ಟ್ವೆಂಟಿ ಹಾಗೂ ಟೆಸ್ಟ್ ಈ ಮೂರೂ ತಂಡಗಳ ನಾಯಕತ್ವವನ್ನು ಕಳೆದುಕೊಂಡು ಸದ್ಯ ಓರ್ವ ಆಟಗಾರನಾಗಿ ಮಾತ್ರ ತಂಡದಲ್ಲಿರುವ ವಿರಾಟ್ ಕೊಹ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಹೌದು, ವಿರಾಟ್ ಕೊಹ್ಲಿ ಶತಕ ಸಿಡಿಸಿ 2 ವರ್ಷಗಳೇ ಕಳೆದಿದ್ದು, ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ ಹಾಗೂ ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂಬ ಅಭಿಪ್ರಾಯಗಳನ್ನು ಹಲವಾರು ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡದೇ ಇದ್ದ ರೋಹಿತ್ ಶರ್ಮಾ ಇದೀಗ ನಾಯಕನಾಗಿರುವ ಕಾರಣದಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ತೃತೀಯ ಪಂದ್ಯ ಮುಗಿದ ನಂತರ ಪಾಲ್ಗೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಕುರಿತಾದ ಪ್ರಶ್ನೆಯನ್ನು ಎದುರಿಸಿದರು. ಈ ಪ್ರಶ್ನೆಗೆ ಉತ್ತರಿಸಿರುವ ರೋಹಿತ್ ಶರ್ಮಾ ಈ ಕೆಳಕಂಡಂತೆ ಟಾಂಗ್ ನೀಡಿದ್ದಾರೆ.

ಪತ್ರಕರ್ತ ಕೇಳಿದ ಪ್ರಶ್ನೆಗೆ ಚಾಟಿ ಬೀಸಿದ ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ ಸಾಲುಸಾಲು ಕಳಪೆ ಪ್ರದರ್ಶನವನ್ನು ನೀಡುತ್ತಿದ್ದು ಆತ್ಮ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆ ಎದುರಿಸಿದ ರೋಹಿತ್ ಶರ್ಮಾ ತಮ್ಮದೇ ಆದ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ. ವಿರಾಟ್ ಕೊಹ್ಲಿಗೆ ವಿಶ್ವಾಸ ಪಡೆದುಕೊಳ್ಳಬೇಕಾದ ಅಗತ್ಯವಿದೆ? ನೀವೇನು ಮಾತಾಡುತ್ತಿದ್ದೀರಿ ಎಂದು ರೋಹಿತ್ ಶರ್ಮಾ ಪತ್ರಕರ್ತನ ಪ್ರಶ್ನೆಯನ್ನು ಕೇಳಿ ನಕ್ಕಿದ್ದಾರೆ. ಆತ ಶತಕ ಬಾರಿಸದೇ ಇರುವುದು ಸಮಸ್ಯೆಯಲ್ಲ ಎಂದು ನಾನು ಭಾವಿಸುತ್ತೇನೆ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸರಣಿಯಲ್ಲಿ 3 ಪಂದ್ಯಗಳ ಪೈಕಿ 2 ಅರ್ಧಶತಕಗಳನ್ನು ಕೊಹ್ಲಿ ಬಾರಿಸಿದ್ದಾರೆ. ಕೊಹ್ಲಿ ಫಾರ್ಮ್ ವಿಷಯದಲ್ಲಿ ನನಗೆ ಯಾವುದೇ ರೀತಿಯ ತಪ್ಪು ಕಾಣಿಸುತ್ತಿಲ್ಲ ಮತ್ತು ಟೀಮ್ ಮ್ಯಾನೇಜ್‌ಮೆಂಟ್ ಕೂಡ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಉತ್ತರಿಸಿದ್ದಾರೆ. ಹೀಗೆ ಉತ್ತರ ನೀಡಿರುವ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದು ತನ್ನ ಮತ್ತು ಕೊಹ್ಲಿ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವವರಿಗೆ ನಯವಾಗಿಯೇ ಟಾಂಗ್ ನೀಡಿದ್ದಾರೆ.

ತೃತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯ
ಇನ್ನು ಟೀಮ್ ಇಂಡಿಯಾ ದಿಗ್ವಿಜಯ ಸಾಧಿಸಿದ ವೆಸ್ಟ್ ಇಂಡೀಸ್ ವಿರುದ್ಧ ತೃತೀಯ ಏಕದಿನ ಪಂದ್ಯದಲ್ಲಿ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ 2 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟ್ ಆಗಿದ್ದರು. ಅಲ್ಜಾರಿ ಜೋಸೆಫ್ ಎಸೆತದಲ್ಲಿ ಶಾಯ್ ಹೋಪ್‌ಗೆ ಕ್ಯಾಚ್ ನೀಡಿದ ವಿರಾಟ್ ಕೊಹ್ಲಿ ಡಕ್ ಔಟ್ ಆಗಿ ನಿರಾಸೆ ಮೂಡಿಸಿದ್ದರು. ಅಷ್ಟು ಮಾತ್ರವಲ್ಲದೇ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ 8 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ದ್ವಿತೀಯ ಏಕದಿನ ಪಂದ್ಯದಲ್ಲಿ 18 ರನ್ ಗಳಿಸುವಲ್ಲಿ ಮಾತ್ರ ಶಕ್ತರಾಗಿದ್ದರು. ಹೀಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಪೂರ್ತಿ ಮಂಕಾಗಿರುವ ವಿರಾಟ್ ಕೊಹ್ಲಿ ಮುಂಬರುವ ಟಿ ಟ್ವೆಂಟಿ ಸರಣಿಯಲ್ಲಿ ಮತ್ತೆ ಅಬ್ಬರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಕೊಹ್ಲಿ ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ ಎಂದ ಶಾಸ್ತ್ರಿ
ಇತ್ತ ರೋಹಿತ್ ಶರ್ಮ ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿ ಆತನ ಫಾರ್ಮ್ ಯಾವುದೇ ರೀತಿಯ ಸಮಸ್ಯೆಯನ್ನು ಹೊಂದಿಲ್ಲ ಎಂಬ ಹೇಳಿಕೆಯನ್ನು ನೀಡಿದರೆ, ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಕುರಿತು ಮಾತನಾಡಿದ್ದ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಎದುರಿಸುತ್ತಿದ್ದು ಆತನಿಗೆ ವಿಶ್ರಾಂತಿಯ ಅಗತ್ಯವಿದೆ, ಹೀಗಾಗಿ ಆತ ಮೂರ್ನಾಲ್ಕು ತಿಂಗಳು ಕ್ರಿಕೆಟ್‌ನಿಂದ ದೂರ ಉಳಿಯುವುದು ಉತ್ತಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications