ಭಾರತ vs ಜಿಂಬಾಬ್ವೆ: ಸಿಕಂದರ್ ರಾಜಾ ಕೆಚ್ಚೆದೆಯ ಹೋರಾಟ: ಸೋಲಿನ ದವಡೆಯಿಂದ ಪಾರಾದ ಭಾರತ!

ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯ ರೋಚಕವಾಗಿ ಅಂತ್ಯಕಂಡಿದೆ. ಮೊದಲ ಎರಡು ಪಂದ್ಯಗಳಲ್ಲಿ ಭಾರತಕ್ಕೆ ಸುಲಭವಾಗಿ ಶರಣಾಗಿದ್ದ ಜಿಂಬಾಬ್ವೆ ತಂಡ ಅಂತಿಮ ಪಂದ್ಯದಲ್ಲಿ ಭಾರೀ ಪೈಪೋಟಿ ನೀಡಿದ್ದು ಗೆಲುವಿನ ಸನಿಹಕ್ಕೆ ತಲುಪಿತ್ತು. ಆದರೆ ಅಂತಿಮ ಹಂತದಲ್ಲಿ ಎಡವಿದ ಜಿಂಬಾಬ್ವೆ ತಂಡ ಭಾರತಕ್ಕೆ ಶರಣಾಗಿದೆ. ಈ ಮೂಲಕ ಭಾರತ ಏಕದಿನ ಸರಣಿಯನ್ನು ವೈಟ್‌ವಾಶ್ ಮೂಲಕ ವಶಕ್ಕೆ ಪಡೆದಿದೆ.
ಜಿಂಬಾಬ್ವೆ ತಂಡದ ಅನುಭವಿ ಆಟಗಾರ ಸಿಕಂದರ್ ರಾಜಾ ನೀಡಿದ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಜಿಂಬಾಬ್ವೆ ಭಾರತ ತಂಡ ನಿರೀಕ್ಷಿಸಿರದ ಪೈಪೋಟಿಯನ್ನು ನೀಡಿತು. ಏಕಾಂಗಿ ಹೋರಾಟವನ್ನು ನಡೆಸಿದ ಸಿಕಂದರ್ ರಾಜಾ ಶತಕವನ್ನು ಸಿಡಿಸಿ ಮುನ್ನುಗ್ಗಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. 13 ರನ್‌ಗಳ ಅಂತರದಿಂದ ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ.

ಭಾರತಕ್ಕೆ ನೆರವಾದ ಗಿಲ್ ಚೊಚ್ಚಲ ಶತಕ
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ ಉತ್ತಮ ಪ್ರದರ್ಶನ ನೀಡಿತು. ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಕಣಕ್ಕಿಳಿದು ಧವನ್ 40 ರನ್ ಕಲೆಹಾಕಿದರೆ, ಕೆಎಲ್ ರಾಹುಲ್ 30 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಬ್‌ಮನ್ ಗಿಲ್ 97 ಎಸೆತಗಳಲ್ಲಿ 130 ರನ್ ಸಿಡಿಸಿ ತಮ್ಮ ಚೊಚ್ಚಲ ಶತಕ ಸಿಡಿಸಿದ್ದಾರೆ. ಈ ಮೂಲಕ ಗಿಲ್ ಹೊಸ ಮೈಲಿಗಲ್ಲನ್ನು ನೆಟ್ಟರು.

290 ರನ್‌ಗಳ ಗುರಿ ನೀಡಿದ ಭಾರತ
ಇನ್ನುಳಿದಂತೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ 50 ರನ್ ಬಾರಿಸಿ ರನ್ ಔಟ್ ಆದರು. ಹೀಗೆ ತಂಡದ ಈ ನಾಲ್ವರು ಆಟಗಾರರು ಉತ್ತಮ ರನ್ ಕಲೆಹಾಕಿದರೆ ನಂತರ ಕಣಕ್ಕಿಳಿದ ಯಾವುದೇ ಆಟಗಾರ ಕೂಡ ಇಪ್ಪತ್ತು ರನ್ ತಲುಪಲು ಸಾಧ್ಯವಾಗಲಿಲ್ಲ. ದೀಪಕ್ ಹೂಡಾ 1 ರನ್, ಸಂಜು ಸ್ಯಾಮ್ಸನ್ 15 ರನ್, ಅಕ್ಷರ್ ಪಟೇಲ್ 1 ರನ್, ಶಾರ್ದೂಲ್ ಠಾಕೂರ್ 9 ರನ್, ದೀಪಕ್ ಚಹರ್ ಅಜೇಯ 1 ರನ್ ಹಾಗೂ ಕುಲ್‌ದೀಪ್ ಯಾದವ್ ಅಜೇಯ 2 ರನ್ ಕಲೆಹಾಕಿದರು. ಜಿಂಬಾಬ್ವೆ ಪರ ಬ್ರಾಡ್ ಇವಾನ್ಸ್ 5 ವಿಕೆಟ್ ಪಡೆದರೆ, ನ್ಯೌಚಿ ಹಾಗೂ ಸಿಕಂದರ್ ರಾಜಾ ತಲಾ ಒಂದೊಂದು ವಿಕೆಟ್ ಪಡೆದರು.

ಏಕಾಂಗಿಯಾಗಿ ಹೋರಾಡಿದ ಸಿಕಂದರ್ ರಾಜಾ
ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಮಿಂಚಿದ್ದ ಸಿಕಂದರ್ ರಾಜಾ ಭಾರತದ ವಿರುದ್ಧದ ಅಂತಿಮ ಪಂದ್ಯದಲ್ಲಿಯೂ ಅಮೋಘ ಪ್ರದರ್ಶನ ನಿಡಿದ್ದು ಭರ್ಜರಿ ಶತಕ ಸಿಡಿಸಿದರು. 95 ಎಸೆತಗಳನ್ನು ಎದುರಿಸಿದ ರಾಜಾ ಭರ್ಜರಿ 115 ರನ್‌ಗಳನ್ನು ಗಳಿಸಿದರು. ಅವರಿಗೆ ಸಾಥ್ ನೀಡಿದ ಸೀನ್ ವಿಲಿಯಮ್ಸ್ 45 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಅಂತಿಮ ಹಂತದವರೆಗೂ ಹೋರಾಡಿದ ಸಿಕಂದರ್ ರಾಜಾ ತಂಡದ ಮೊತ್ತ 275 ರನ್‌ಗಳಿದ್ದಾಗ 9 ವಿಕೆಟ್ ರೂಪದಲ್ಲಿ ಫೆವಿಲಿಯನ್‌ಗೆ ಸೇರಿಕೊಂಡರು. ಈ ಮೂಲಕ ಜಿಂಬಾಬ್ವೆ ತಂಡದ ಹೋರಾಟ ಅಂತ್ಯವಾಯಿತು. ಅಂತಿಮವಾಗಿ 276 ರನ್‌ಗಳಿಗೆ ಆಲೌಟ್ ಆದ ಜಿಂಬಾಬ್ವೆ 13 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.

ಜಿಂಬಾಬ್ವೆ ಮತ್ತು ಭಾರತ ತಂಡದ ಆಡುವ 11ರ ಬಳಗ
ಭಾರತ: ಶಿಖರ್ ಧವನ್, ಶುಬ್‌ಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ದೀಪಕ್ ಚಹಾರ್, ಅವೇಶ್ ಖಾನ್
ಜಿಂಬಾಬ್ವೆ: ತಕುದ್ಜ್ವಾನಾಶೆ ಕೈಟಾನೊ, ಇನೊಸೆಂಟ್ ಕೈಯಾ, ಟೋನಿ ಮುನ್ಯೊಂಗಾ, ರೆಗಿಸ್ ಚಕಬ್ವಾ (ನಾಯಕ/ ವಿಕೆಟ್ ಕೀಪರ್), ಸಿಕಂದರ್ ರಜಾ, ಸೀನ್ ವಿಲಿಯಮ್ಸ್, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯಾಯುಚಿ, ರಿಚರ್ಡ್ ನ್ಗರವ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications