ಭಾನುವಾರ, ಜನವರಿ 7ರಂದು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ 2ನೇ ಟಿ20 ಪಂದ್ಯದಲ್ಲಿ ಆತಿಥೇಯ ತಂಡದ ವಿರುದ್ಧ ಪ್ರವಾಸಿ ತಂಡ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು ಮತ್ತು ಮೂರು ಪಂದ್ಯಗಳ ಸರಣಿಯಲ್ಲಿ 1-1 ಅಂತರದ ಸಮಬಲಗೊಂಡಿವೆ.
ಇನ್ನು ಪಂದ್ಯ ವೀಕ್ಷಿಸಲು ಡಿವೈ ಪಾಟೀಲ್ 42,000ಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸಿದ್ದರು. ಎರಡು ಸೂಪರ್ ಪವರ್ ತಂಡಗಳ ನಡುವಿನ ಟಿ20 ಪಂದ್ಯಕ್ಕೆ ದಾಖಲೆಯ ಹಾಜರಾತಿಯೊಂದಿಗೆ ಪಂದ್ಯವು ಎಲೈಟ್ ಪಟ್ಟಿಗೆ ಸೇರಿಕೊಂಡಿತು. ಇದು ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಗಳಿಗೆ ಕಂಡ ಹೆಚ್ಚಿನ ಹಾಜರಾತಿಯಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ಪಂದ್ಯಕ್ಕೂ ಇದೇ ರೀತಿಯ ಜನ ಸೇರಿದ್ದರು.
ಭಾನುವಾರ ನಡೆದ ಪಂದ್ಯವನ್ನು ವೀಕ್ಷಿಸಲು ಎಲ್ಲಾ ವಯೋಮಾನದ ಅಭಿಮಾನಿಗಳು ನೆರೆದಿದ್ದರಿಂದ "ಇಂಡಿಯಾ, ಇಂಡಿಯಾ' ಎಂಬ ಹರ್ಷೋದ್ಗಾರಗಳು ಸ್ಟ್ಯಾಂಡ್‌ಗಳಾದ್ಯಂತ ಪ್ರತಿಧ್ವನಿಸುತ್ತಿದ್ದವು. ಈ ಟಿ20 ಪಂದ್ಯಕ್ಕೆ ಅಧಿಕೃತ ಹಾಜರಾತಿ 42, 618 ಆಗಿತ್ತು.
ಇನ್ನು ಆಸ್ಟ್ರೇಲಿಯಾ ತಂಡವು ಸುಧಾರಿತ ಬೌಲಿಂಗ್ ಪ್ರದರ್ಶನದೊಂದಿಗೆ ಬಂದಿತು ಮತ್ತು ಉತ್ತಮ ಫಾರ್ಮ್‌ನಲ್ಲಿದ್ದ ಭಾರತೀಯ ತಂಡವನ್ನು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 130 ರನ್‌ಗಳಿಗೆ ನಿರ್ಬಂಧಿಸಿತು.

ಎಲ್ಲಿಸ್ ಪೆರ್ರಿಯ 300ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ಎರಡನೇ ಓವರ್‌ನಲ್ಲಿ ಶಫಾಲಿ ವರ್ಮಾ ಅವರ ವಿಕಟ್ ಅನ್ನು ಕಳೆದುಕೊಂಡಿತು. ಈ ವೇಳೆ ಸ್ಮೃತಿ ಮಂಧಾನ ಉತ್ತಮವಾಗಿ ಕಾಣುತ್ತಿದ್ದರು. ಆದರೆ ಭಾರತ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಹೋಯಿತು.
ಜೆಮಿಮಾ ರೋಡ್ರಿಗಸ್ 9 ಎಸೆತಗಳಲ್ಲಿ 13 ರನ್ ಗಳಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು 12 ಎಸೆತಗಳಲ್ಲಿ 6 ರನ್ ಗಳಿಸಿದರು. ಭಾರತ 11ನೇ ಓವರ್‌ನಲ್ಲಿ 4 ವಿಕೆಟ್‌ಗೆ 54 ರನ್ ಗಳಿಸಿತು. ಆಗ ರಿಚಾ ಘೋಷ್ ಮತ್ತು ದೀಪ್ತಿ ಶರ್ಮಾ 6ನೇ ವಿಕೆಟ್‌ಗೆ 33 ರನ್‌ಗಳ ಜೊತೆಯಾಟ ನೀಡಿದರು.
ಇನ್ನು ಮಹಿಳಾ ಟಿ20 ಪಂದ್ಯಗಳಲ್ಲಿ 1000 ರನ್ ಮತ್ತು 100ಕ್ಕೂ ಅಧಿಕ ವಿಕೆಟ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ದೀಪ್ತಿ ಶರ್ಮಾ ಮೊದಲ ಐತಿಹಾಸಿಕ ಸಾಧನೆ ಮಾಡಿದರು.
ದೀಪ್ತಿ ಶರ್ಮಾ ಇತ್ತೀಚಿನ ದಿನಗಳಲ್ಲಿ ವೈಟ್-ಬಾಲ್ ಪಂದ್ಯಗಳ ಡೆತ್ ಓವರ್‌ಗಳಲ್ಲಿ ಅವರ ಸ್ಟ್ರೈಕ್ ರೇಟ್‌ಗಾಗಿ ಭಾರೀ ಸದ್ದು ಮಾಡುತ್ತಿದ್ದಾರೆ. ಒಂದೆರಡು ಡಾಟ್ ಬಾಲ್‌ಗಳ ಹೊರತಾಗಿಯೂ, ದೀಪ್ತಿ ಶರ್ಮಾ ಅವರು ಭಾರತ ಸ್ಪರ್ಧಾತ್ಮಕ ಮೊತ್ತ ಗಳಿಸಲು ನಿರ್ಣಾಯಕ 30 ರನ್‌ಗಳನ್ನು ಬಾರಿಸಿದರು.
ಗಮನಾರ್ಹವಾಗಿ, ಫೆಬ್ರವರಿ 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ, ದೀಪ್ತಿ ಶರ್ಮಾ ತನ್ನ 100ನೇ ಟಿ20 ವಿಕೆಟ್ ಪಡೆದರು. ತನ್ನ ಸಹ ಆಟಗಾರ್ತಿ ಪೂನಮ್ ಯಾದವ್ ಅವರ 98 ವಿಕೆಟ್‌ಗಳನ್ನು ಮೀರಿಸಿದರು ಮತ್ತು ಈ ಮೈಲಿಗಲ್ಲನ್ನು ತಲುಪಿದ ಮೊದಲ ಭಾರತೀಯರಾದರು.
ದೀಪ್ತಿ ಶರ್ಮಾ ಸಾಧನೆ ಕೇವಲ ಭಾರತೀಯ ಮಹಿಳಾ ಕ್ರಿಕೆಟ್‌ಗೆ ಸೀಮಿತವಾಗಿರದೆ, ಅವರು ಇದೀಗ ಪುರುಷರ ಮತ್ತು ಮಹಿಳಾ ಕ್ರಿಕೆಟ್‌ನಾದ್ಯಂತ ಟಿ20 ಸ್ವರೂಪದಲ್ಲಿ ಭಾರತದ ಪರ ವಿಕೆಟ್ ಮತ್ತು ರನ್‌ಗಳ ಪಟ್ಟಿಯನ್ನು ಮುನ್ನಡೆಸುತ್ತಿದ್ದಾರೆ.