IND W Vs AUS W T20: ಆಸ್ಟ್ರೇಲಿಯಾ ವಿರುದ್ಧ ರೋಚಕ ಜಯ ಸಾಧಿಸಿದ ನಂತರ ಸ್ಮೃತಿ ಮಂದಾನ ಪ್ರತಿಕ್ರಿಯೆ

ಡಿಸೆಂಬರ್ 11 ರಂದು ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ ಸೂಪರ್ ಓವರ್ ನಲ್ಲಿ ರೋಚಕ ಜಯ ಸಾಧಿಸಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೆ ಸುಮಾರು 47 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸಾಕ್ಷಿಯಾದರು.
ಕಿಕ್ಕಿರಿದ ಅಭಿಮಾನಿಗಳ ಬೆಂಬಲ ಪಡೆದುಕೊಂಡ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ನಂತರ ಸೂಪರ್ ಓವರ್ ನಲ್ಲಿ ಸ್ಮೃತಿ ಮಂದಾನ ಸ್ಫೋಟಕ ಆಟದ ನೆರವಿನಿಂದ ಗೆಲುವು ಸಾಧಿಸಿತು.
ಪಂದ್ಯ ಮುಕ್ತಾಯಗೊಂಡ ನಂತರ ಮಾತನಾಡಿದ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂದಾನ ಭಾರತ ತಂಡದ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ನಿರೀಕ್ಷೆಗೂ ಮೀರಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿ ಭಾರತ ಮಹಿಳಾ ತಂಡಕ್ಕೆ ಬೆಂಬಲ ನೀಡಿದ್ದು ಆಟಗಾರರಿಗೆ ರೋಮಾಂಚಕ ಅನುಭವ ನೀಡಿದೆ.
5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 188 ರನ್‌ಗಳ ಬೃಹತ್ ಗುರಿಯನ್ನು ಭಾರತಕ್ಕೆ ನೀಡಿತು.
ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತ, ಸ್ಮೃತಿ ಮಂದಾನ 49 ಎಸೆತಗಳಲ್ಲಿ 79 ರನ್‌ಗಳನ್ನು ಗಳಿಸುವ ಮೂಲಕ ಆಸರೆಯಾದರು. ನಂತರ ರಿಚಾ ಘೋಷ್ 13 ಎಸೆತಗಳಲ್ಲಿ ಅಜೇಯ 26 ರನ್ ಬಾರಿಸಿದರೆ, ದೇವಿಕಾ ವೈದ್ಯ 5 ಎಸೆತಗಳಲ್ಲಿ ಅಜೇಯ 11 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಈ ವರ್ಷದಲ್ಲಿ ಆಸ್ಟ್ರೇಲಿಯಾಗೆ ಮೊದಲ ಸೋಲು
ಪಂದ್ಯ ಟೈ ಆದ ನಂತರ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಒಂದು ವಿಕೆಟ್ ಕಳೆದುಕೊಂಡು 20 ರನ್ ಗಳಿಸಿತು. ರಿಚಾ ಘೋಷ್ ಮೊದಲೇ ಎಸೆತದಲ್ಲಿ ಸಿಕ್ಸ್ ಹೊಡೆದು ಎರಡನೇ ಎಸೆತದಲ್ಲಿ ಔಟ್ ಆದರು, ನಂತರ ಕ್ರೀಸ್‌ಗೆ ಬಂದ ಮಂದಾನ 3 ಎಸೆತಗಳಲ್ಲಿ 13 ರನ್ ಗಳಿಸಿದರು. ನಂತರ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 16 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು. ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ 5 ಪಂದ್ಯಗಳ ಸರಣಿ 1-1 ರಲ್ಲಿ ಸಮಬಲಗೊಂಡಿದೆ.
2022ರ ವರ್ಷದಲ್ಲಿ ಇದುವರೆಗೂ ಸೋಲನ್ನೇ ಕಾಣದ ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ಈ ವರ್ಷದ ಮೊದಲ ಸೋಲಿನ ರುಚಿ ತೋರಿಸಲು ಭಾರತದ ವನಿತೆಯರು ಯಶಸ್ವಿಯಾದರು. ಈ ರೋಚಕ ಪಂದ್ಯಕ್ಕೆ ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು.

ಅಭಿಮಾನಿಗಳಿಗೆ ಮಂದಾನ ಧನ್ಯವಾದ
"ಈ ಪಂದ್ಯ ನೋಡಲು ಆಗಮಿಸಿದ ಎಲ್ಲರಿಗೂ ಧನ್ಯವಾದಗಳು, ಇದೊಂದು ಅದ್ಭುತ ವಾತಾವರಣವಾಗಿತ್ತು! ನಮಗೆ ಬೆಂಬಲ ನೀಡಲು ಬರುವ ಎಲ್ಲ ಕ್ರೀಡಾಪ್ರೇಮಿಗಳನ್ನು ನಾವೆಲ್ಲರೂ ಪ್ರೀತಿಸುತ್ತೇವೆ. ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಅಭಿಮಾನಿಗಳ ಬೆಂಬಲದಿಂದ ಗೆಲುವು ಸಾಧಿಸಲು ಸಾಧ್ಯವಾಯಿತು." ಎಂದು ಮಂದಾನ ಪಂದ್ಯದ ಬಳಿಕ ಸಂತಸ ವ್ಯಕ್ತಪಡಿಸಿದರು.
ಮುಂದಿನ ಪಂದ್ಯಗಳಲ್ಲಿ ಕೂಡ ಅಭಿಮಾನಿಗಳು ಇದೇ ರೀತಿ ನಮಗೆ ಬೆಂಬಲ ನೀಡಬೇಕು ಎಂದು ಮಂದಾನ ಮನವಿ ಮಾಡಿದ್ದಾರೆ. ಅಭಿಮಾನಿಗಳ ಬೆಂಬಲದೊಂದಿಗೆ ಮುಂದಿನ ದಿನಗಳಲ್ಲಿ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಮಂದಾನ ಕುಟುಂಬವೂ ಪಂದ್ಯ ನೋಡಲು ಹಾಜರು
ಸ್ಮೃತಿ ಮಂದಾನ ಅವರ ಕುಟುಂಬ ಮತ್ತು ಆಪ್ತ ಸ್ನೇಹಿತರು ಮುಂಬೈನಲ್ಲಿ ನೆಲೆಸಿದ್ದಾರೆ. ತನ್ನ ತವರಿನ ಪ್ರೇಕ್ಷಕರ ಮುಂದೆ ಆಡುವುದು ಯಾವಾಗಲೂ ವಿಶೇಷವಾಗಿದೆ. ಭಾನುವಾರ ನಡೆದ ಪಂದ್ಯಕ್ಕೆ ಅವರ ಕುಟುಂಬ ಮತ್ತು ಆಪ್ತ ಸ್ನೇಹಿತರು ಕ್ರೀಡಾಂಗಣಕ್ಕೆ ಆಗಮಿಸಿದರು.
ತನ್ನ ಕುಟುಂಬ, ಸ್ನೇಹಿತರು, ಅಭಿಮಾನಿಗಳ ಮುಂದೆ ಉತ್ತಮ ಪ್ರದರ್ಶನ ನೀಡುವುದು ಮಂದಾನ ಅವರ ಖುಷಿಯನ್ನು ಹೆಚ್ಚಿಸಿದೆ. "ನಾವು ಬಹಳ ಸಮಯದ ನಂತರ ಮುಂಬೈನಲ್ಲಿ ಆಡಿದ್ದೇವೆ, 2018-19 ರಲ್ಲಿ ನಾವು ಇಲ್ಲಿ ಕೊನೆಯ ಬಾರಿಗೆ ಆಡಿದ್ದೇವೆ. ನನ್ನ ಪೋಷಕರು ಮತ್ತು ಕೆಲವು ಆಪ್ತರು ಇಲ್ಲಿದ್ದರು ಆದ್ದರಿಂದ ಇದು ವಿಶೇಷ ಭಾವನೆಯಾಗಿದೆ." ಎಂದು ಮಂದಾನ ಹೇಳಿದರು.
ಡಿಸೆಂಬರ್ 14 ರಂದು ಬುಧವಾರ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಮೂರನೇ ಟಿ20 ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications