ಹರ್ಮನ್‌ಪ್ರೀತ್ ಅಮೋಘ ಶತಕ: 1999ರ ಬಳಿಕ ಇಂಗ್ಲೆಂಡ್ ನೆಲದಲ್ಲಿ ಏಕದಿನ ಸರಣಿ ಗೆದ್ದ ಭಾರತ ಮಹಿಳಾ ತಂಡ

ಇಂಗ್ಲೆಂಡ್ ವನಿತಾ ತಂಡದ ವಿರುದ್ಧ ಭಾರತ ವನಿಒತಾ ಪಡೆ ಅಮೋಘ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕ್ಯಾಂಟರ್‌ಬೆರಿಯಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವುದರ ಜೊತೆಗೆ ಸರಣಿಯನ್ನು ಕೂಡ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ 1999 ಬಳಿಕ ಮೊದಲ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ಏಕದಿನ ಸರಣಿಯನ್ನು ಭಾರತ ಮಹಿಳಾ ತಂಡ ಗೆದ್ದಂತಾಗಿದೆ.
ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ ತಂಡ ನಾಯಕಿ ಹರ್ಮನ್‌ಪ್ರೀತ್ ಅಬ್ಬರದ ಪ್ರದರ್ಶನದ ಕಾರಣದಿಂದಾಗಿ ಬರೊಬ್ಬರಿ 333 ರನ್‌ಗಳನ್ನು ಪೇರಿಸುವಲ್ಲಿ ಯಶಸ್ವಿಯಾಗಿತ್ತು. ಭಾರತ ನೀಡಿದ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಮಹಿಳೆಯರು ಯಾವ ಹಂತದಲ್ಲಿಯೂ ಪ್ರತಿರೋಧವೊಡ್ಡುವ ಲಕ್ಷಣ ತೋರಿಸಲೇ ಇಲ್ಲ. ಅಂತಿಮವಾಗಿ 245 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಳ್ಳುವ ಮೂಲಕ 88 ರನ್‌ಗಳ ಬೃಹತ್ ಅಂತರದಿಂದ ಭಾರತಕ್ಕೆ ಶರಣಾಗಿದೆ.

ಭಾರತಕ್ಕೆ ಹರ್ಮನ್ ಶತಕದ ಆಸರೆ
ಮೊದಲಿಗೆ ಬ್ಯಾಟಿಂಗ್ ನಡೆಸಿದ ಭಾರತ ತಂಡದ ಪರವಾಗಿ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಮತ್ತೊಮ್ಮೆ ವೈಫಲ್ಯವನ್ನು ಅನುಭವಿಸಿದ್ದಾರೆ. ಆದರೆ ಸ್ಮೃತಿ ಮಂಧಾನ ಅವರಿಂದ 40 ರನ್‌ಗಳ ಉಪಯುಕ್ತ ಕೊಡುಗೆ ಬಂದಿತು. ಯಸ್ತಿಕಾ ಭಾಟಿಯಾ 26 ರನ್‌ಗಳನ್ನು ಗಳಿಸಿದರು. ನಂತರ ನಾಯಕಿ ಹರ್ಮನ್‌ಪ್ರೀತ್ ಅವರದ್ದೇ ಅಬ್ಬರ. ಇವರಿಗೆ ಭರ್ಜರಿ ಸಾಥ್ ನೀಡಿದ ಹರ್ಲೀನ್ ಡಿಯೋಲ್ ಕೂಡ ಅರ್ಧ ಶತಕ ಸಿಡಿಸಿ ಮಿಂಚಿದರು. ಈ ಜೋಡಿ ಶತಕದ ಜೊತೆಯಾಟ ನೀಡುವ ಮೂಲಕ ಮಿಂಚಿದರು. ಅದರಲ್ಲೂ ನಾಯಕಿ ಹರ್ಮನ್‌ಪ್ರೀತ್ ಕೌರ್ 111 ಎಸೆತಗಳನ್ನು ಎದುರಿಸಿ ಭರ್ಜರಿ 143 ರನ್‌ಗಳನ್ನು ಬಾರಿಸಿದರು. ಈ ಅದ್ಭುತ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡಿತ್ತು.

ಆರಂಭದಿಂದಲೇ ಮುಗ್ಗರಿಸಿದ ಇಂಗ್ಲೆಂಡ್
ಇನ್ನು ಭಾರತ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಮಹಿಳಾ ತಂಡಕ್ಕೆ ಅರಂಭದಿಂದಲೇ ಭಾರತೀಯ ಆಟಗಾರ್ತಿಯರು ಆಘಾತ ನೀಡುತ್ತಾ ಸಾಗಿದರು. ಆದರೆ ಮಧ್ಯಮ ಕ್ರಮಾಂಕ ಸ್ವಲ್ಪ ಮಟ್ಟಿಗೆ ಹೋರಾಟವನ್ನು ನೀಡಿತಾದರೂ ಅದು ಸಾಕಾಗಲಿಲ್ಲ. ಡೇನಿಯಲ್ ವೈಟ್ 65 ರನ್‌ಗಳನ್ನು ಸಿಡಿಸಿ ಮಿಂಚಿದರೆ ನಾಯಕಿ ಆಮಿ ಜೋನ್ಸ್ ಹಾಗೂ ಅಲೆಸ್ ಕ್ಯಾಪ್ಸಿ ತಲಾ 39 ರನ್‌ಗಳ ಕೊಡುಗೆ ನೀಡಿದರು. ಅಂತಿಮವಾಗಿ ಇಂಗ್ಲೆಂಡ್ ತಂಡ ಇನ್ನೂ 34 ಎಸೆತಗಳು ಬಾಕಿಯಿರುವಂತೆಯೇ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 88 ರನ್‌ಗಳ ಅಂತರದಿಂದ ಸೋಲು ಅನುಭವಿಸಿತು. ಬೌಲಿಂಗ್‌ನಲ್ಲಿ ಭಾರತದ ಪರವಾಗಿ ರೇಣುಕಾ ಸಿಂಗ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದು ನಾಲ್ಕು ವಿಕೆಟ್ ಪಡೆದುಕೊಂಡಿದ್ದಾರೆ.

ಇತ್ತಂಡಗಳ ಪ್ಲೇಯಿಂಗ್ XI
ಇಂಗ್ಲೆಂಡ್ ವುಮೆನ್ ಪ್ಲೇಯಿಂಗ್ XI: ಎಮ್ಮಾ ಲ್ಯಾಂಬ್, ಟಮ್ಮಿ ಬ್ಯೂಮಾಂಟ್, ಸೋಫಿಯಾ ಡಂಕ್ಲಿ, ಆಲಿಸ್ ಕ್ಯಾಪ್ಸೆ, ಡೇನಿಯಲ್ ವ್ಯಾಟ್, ಆಮಿ ಜೋನ್ಸ್ (ನಾಯಕಿ & ವಿಕೆಟ್ ಕೀಪರ್), ಫ್ರೇಯಾ ಕೆಂಪ್, ಸೋಫಿ ಎಕ್ಲೆಸ್ಟೋನ್, ಷಾರ್ಲೆಟ್ ಡೀನ್, ಕೇಟ್ ಕ್ರಾಸ್, ಲಾರೆನ್ ಬೆಲ್
ಬೆಂಚ್: ಆಲಿಸ್ ಡೇವಿಡ್ಸನ್ ರಿಚರ್ಡ್ಸ್, ಇಸ್ಸಿ ವಾಂಗ್, ಫ್ರೇಯಾ ಡೇವಿಸ್, ಮಾಯಾ ಬೌಚಿಯರ್
ಇಂಡಿಯಾ ವುಮೆನ್ ಪ್ಲೇಯಿಂಗ್ XI: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಬೆಂಚ್: ಸ್ನೇಹ ರಾಣಾ, ಮೇಘನಾ ಸಿಂಗ್, ಸಬ್ಬಿನೇನಿ ಮೇಘನಾ, ಜೆಮಿಮಾ ರಾಡ್ರಿಗಸ್, ತಾನಿಯಾ ಭಾಟಿಯಾ, ಸಿಮ್ರಾನ್ ಬಹದ್ದೂರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications