ಭಾನುವಾರ, ಡಿಸೆಂಬರ್ 10ರಂದು ಮುಂಬೈನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ಮಹಿಳಾ ತಂಡವು ಪ್ರವಾಸಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿತು.
ಕೊನೆಯ ಟಿ20 ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ವನಿತೆಯರು, ಮೊದಲೆರಡು ಪಂದ್ಯಗಳನ್ನು ಸೋತ ಕಾರಣ, ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಹಿನ್ನಡೆ ಅನುಭವಿಸಿ ಇಂಗ್ಲೆಂಡ್ ವನಿತೆಯರಿಗೆ ಬಿಟ್ಟುಕೊಟ್ಟರು.

ಭಾನುವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಸೈಕಾ ಇಶಾಕ್ ಮತ್ತು ಶ್ರೇಯಾಂಕಾ ಪಾಟೀಲ್ ತಲಾ ಮೂರು ವಿಕೆಟ್ ಕಬಳಿಸಿದರೆ, ಸ್ಮೃತಿ ಮಂಧಾನ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ತಂಡವು ಇಂಗ್ಲೆಂಡ್ ವಿರುದ್ಧ 5 ವಿಕೆಟ್‌ಗಳ ಜಯ ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ ನಾಯಕಿ ಹೀದರ್ ನೈಟ್ ಅವರ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 126 ರನ್‌ಗಳಿಗೆ ಸರ್ವಪತನ ಕಂಡಿತು.
127 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ಸ್ಮೃತಿ ಮಂಧಾನ ಅವರ ಬ್ಯಾಟಿಂಗ್ ಸಹಾಯದಿಂದ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.
ಇಂಗ್ಲೆಂಡ್ ಮಹಿಳಾ ತಂಡದ ಪರ ನಾಯಕಿ ಹೀದರ್ ನೈಟ್ 42 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 52 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರೆ, ಆ್ಯಮಿ ಜೋನ್ಸ್ 25 ರನ್ ಗಳಿಸಿದರು.

ಭಾರತ ತಂಡದ ಪರ ಸ್ಪಿನ್ನರ್‌ಗಳಾದ ಸೈಕಾ ಇಶಾಕ್ 4 ಓವರ್‌ಗಳಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದರೆ, ಆಫ್-ಬ್ರೇಕ್ ಸ್ಪೆಷಲಿಸ್ಟ್ ಶ್ರೇಯಾಂಕಾ ಪಾಟೀಲ್ 4 ಓವರ್‌ಗಳಲ್ಲಿ 19 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ರೇಣುಕಾ ಸಿಂಗ್ ಮತ್ತು ಅಮನ್‌ಜೋತ್ ಕೌರ್ ತಲಾ ಎರಡು ವಿಕೆಟ್ ತಮ್ಮದಾಗಿಸಿಕೊಂಡರು.
ಇನ್ನು ಭಾರತದ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ ಸ್ಮೃತಿ ಮಂಧಾನ 48 ರನ್ ಮತ್ತು ಜೆಮಿಮಾ ರೋಡ್ರಿಗಸ್ 29 ರನ್ ಗಳಿಸುವ ಮೂಲಕ ಎರಡನೇ ವಿಕೆಟ್‌ಗೆ 57 ರನ್ ಜೊತೆಯಾಟ ನೀಡಿದರು.
ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಇಂಗ್ಲೆಂಡ್‌ನ ಆಲ್‌ರೌಂಡರ್ ನ್ಯಾಟ್ ಸೀವರ್-ಬ್ರಂಟ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.