ಭಾನುವಾರ, ಜೂನ್ 23ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಭಾರತ ವನಿತೆಯರು 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದರು.
ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆತಿಥೇಯ ಭಾರತ ಮಹಿಳಾ ತಂಡವು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಇದಕ್ಕೂ ಮುನ್ನ ಮೊದಲೆರಡು ಪಂದ್ಯಗಳನ್ನು ಭಾರತ ತಂಡ ಗೆದ್ದುಕೊಂಡಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಲಾರಾ ವೊಲ್ವಾರ್ಡ್ಟ್ ಅವರ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 215 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು.
216 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಸ್ಮೃತಿ ಮಂಧಾನ ಅವರ ಅದ್ಭುತ 90 ರನ್‌ಗಳ ಶತಕ ವಂಚಿತ ಪ್ರದರ್ಶನದ ಸಹಾಯದಿಂದ 40.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 220 ರನ್ ಗಳಿಸಿ 6 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು.

ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಜೋಡಿ ಮೊದಲ ವಿಕೆಟ್‌ಗೆ 11.5 ಓವರ್‌ಗಳಲ್ಲಿ 61 ರನ್‌ಗಳ ಜೊತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿದರು. ಈ ವೇಳೆ 30 ಎಸೆತಗಳಲ್ಲಿ 4 ಬೌಂಡರಿ ಮೂಲಕ 25 ರನ್ ಗಳಿಸಿ ಔಟಾದರು.
ನಂತರ ಬಂದ ಪ್ರಿಯಾ ಪೂನಿಯಾ 40 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೊದಲೆರಡು ಪಂದ್ಯಗಳಲ್ಲಿ ಶತಕ ಬಾರಿಸಿದ್ದ ಸ್ಮೃತಿ ಮಂಧಾನ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. 83 ಎಸೆತಗಳಲ್ಲಿ 11 ಬೌಂಡರಿ ಸಮೇತ 90 ರನ್ ಗಳಿಸಿ ಕೇವಲ 10 ರನ್‌ಗಳಿಂದ ಹ್ಯಾಟ್ರಿಕ್ ಶತಕ ತಪ್ಪಿಸಿಕೊಂಡರು.

ಈ ಸರಣಿಯಲ್ಲಿ ಸ್ಮೃತಿ ಮಂಧಾನ ಅವರ 343 ರನ್‌ಗಳು ಮಹಿಳಾ ಕ್ರಿಕೆಟ್‌ನಲ್ಲಿ ಮೂರು ಪಂದ್ಯಗಳ ಏಕದಿನ ದ್ವಿಪಕ್ಷೀಯ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳಲ್ಲಿ 335 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ ಅವರ ದಾಖಲೆಯನ್ನು ಸ್ಮೃತಿ ಮಂಧಾನ ಮುರಿದರು.
ನಾಯಕಿ ಹರ್ಮನ್‌ಪ್ರೀತ್ ಕೌರ್ 48 ಎಸೆತಗಳಲ್ಲಿ 2 ಬೌಂಡರಿ ಮೂಲಕ 42 ರನ್ ಗಳಿಸಿ ರನೌಟ್ ಆದರು. ಕೊನೆಯಲ್ಲಿ ಜೆಮಿಮಾ ರೋಡ್ರಿಗಸ್ ಅಜೇಯ 19 ರನ್ ಗಳಿಸಿದರು ಮತ್ತು ರಿಚಾ ಘೋಷ್ ಅಜೇಯ 6 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.

ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಆಯಬೊಂಗ ಖಾಕಾ, ತುಮಿ ಸೆಖುಖುನೆ, ನಾನ್ಕುಲುಲೇಕೋ ಮ್ಲಾಬಾ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ್ದ ಲಾರಾ ವೊಲ್ವಾರ್ಡ್ಟ್ ಮತ್ತು ತಜ್ಮಿನ್ ಬ್ರಿಟ್ಸ್ ಜೋಡಿ ಉತ್ತಮ ಆರಂಭ ನೀಡಿದ್ದರು. ಈ ಜೋಡಿ ಮೊದಲ ವಿಕೆಟ್‌ಗೆ 19.5 ಓವರ್‌ಗಳಲ್ಲಿ 102 ರನ್‌ಗಳ ಜೊತೆಯಾಟ ನಿರ್ಮಿಸಿತ್ತು.
ತಜ್ಮಿನ್ ಬ್ರಿಟ್ಸ್ 38 ರನ್ ಗಳಿಸಿ ಔಟಾದರೆ, ಲಾರಾ ವೊಲ್ವಾರ್ಡ್ಟ್ 61 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ಕೆಳ ಕ್ರಮಾಂಕದಲ್ಲಿ ನಾಡಿನ್ ಡಿ ಕ್ಲರ್ಕ್ 26 ರನ್, ಮೈಕೆ ಡಿ ರಿಡ್ಡರ್ 26 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ನೆರವಾದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ ದೀಪ್ತಿ ಶರ್ಮಾ 10 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಅರುಂಧತಿ ರೆಡ್ಡಿ 10 ಓವರ್‌ಗಳಲ್ಲಿ 36 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಶ್ರೇಯಾಂಕಾ ಪಾಟೀಲ್ ಮತ್ತು ಪೂಜಾ ವಸ್ತ್ರಾಕರ್ ತಲಾ ಒಂದೊಂದು ವಿಕೆಟ್ ತಮ್ಮದಾಗಿಸಿಕೊಂಡರು.