ಭಾನುವಾರ, ಜೂನ್ 16ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಭಾರತ ವನಿತೆಯರು 143 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ ಸ್ಮೃತಿ ಮಂಧಾನ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಕಲೆಹಾಕಿತು.
266 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ 37.4 ಓವರ್‌ಗಳಲ್ಲಿ ಕೇವಲ 122 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ ತಂಡದ ಮಾರಕ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ಮಹಿಳೆಯರು ನಿರುತ್ತರರಾಗಿದ್ದರು. ಎರಡನೇ ಪಂದ್ಯ ಜೂನ್ 19ರಂದು ನಡೆಯಲಿದೆ.
ಭಾರತದ ಸ್ಪಿನ್ನರ್‌ಗಳಾದ ಆಶಾ ಶೋಭನಾ ಮತ್ತು ದೀಪ್ತಿ ಶರ್ಮಾ ನೇತೃತ್ವದ ಬೌಲಿಂಗ್ ದಾಳಿ ಮತ್ತು ಸ್ಮೃತಿ ಮಂಧಾನ ಅವರ ಭರ್ಜರಿ ಶತಕದ ಪ್ರಯತ್ನದಿಂದ ಭಾರತ ಮಹಿಳಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 143 ರನ್‌ಗಳ ಬೃಹತ್ ಗೆಲುವು ಸಾಧಿಸಿತು.
ಸ್ಮೃತಿ ಮಂಧಾನ ತಮ್ಮ ಆರನೇ ಏಕದಿನ ಶತಕವನ್ನು 127 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 117 ರನ್ ಗಳಿಸಿ ನಿಧಾನಗತಿಯ ಎಂ ಚಿನ್ನಸ್ವಾಮಿ ಪಿಚ್‌ನಲ್ಲಿ ಸ್ಪರ್ಧಾತ್ಮಕ 265 ರನ್‌ಗಳ ಮೊತ್ತ ಗಳಿಸಲು ಭಾರತ ತಂಡಕ್ಕೆ ನೆರವಾದರು.

ಚೊಚ್ಚಲ ಏಕದಿನ ಪಂದ್ಯವಾಡಿದ ಲೆಗ್ ಸ್ಪಿನ್ನರ್ ಆಶಾ ಶೋಭನಾ 21 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಅತ್ಯುತ್ತಮ ಪ್ರದರ್ಶನವನ್ನು ನೀಡಿದರು. ಇನ್ನು ದೀಪ್ತಿ ಶರ್ಮಾ 10 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಇದರಿಂದ ಭಾರತದ ಬೌಲರ್‌ಗಳು ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳನ್ನು 122 ರನ್‌ಗಳಿಗೆ ಆಲೌಟ್ ಮಾಡಲು ಸಹಾಯ ಮಾಡಿದರು.
ಭಾರತ ಮಹಿಳಾ ತಂಡದ ಬ್ಯಾಟಿಂಗ್ ಆರಂಭಿಸಿದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ 15 ರನ್‌ಗಳ ಮಾತ್ರ ಜೊತೆಯಾಟ ನೀಡಿದರು. ಶಫಾಲಿ ವರ್ಮಾ 7 ರನ್ ಗಳಿಸಿ ಔಟಾದರೆ, ನಂತರ ಬಂದ ದಯಾಳನ್ ಹೇಮಲತಾ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಬಳಿಕ ನಾಯಕಿ ಹರ್ಮನ್‌ಪ್ರೀತ್ ಕೌರ್ 10 ರನ್, ಜೆಮಿಮಾ ರೋಡ್ರಿಗಸ್ 17 ರನ್, ರಿಚಾ ಘೋಷ್ 3 ರನ್, ದೀಪ್ತಿ ಶರ್ಮಾ 37 ರನ್, ಪೂಜಾ ವಸ್ತ್ರಾಕರ್ 31 ರನ್, ರಾಧಾ ಯಾದವ್ 6 ರನ್ ಮತ್ತು ಆಶಾ ಶೋಭನಾ 8 ರನ್ ಗಳಿಸಿ ತಂಡದ ಮೊತ್ತವನ್ನು 260ರ ಗಡಿ ದಾಟಿಸಿದರು.
ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಅಯಬೊಂಗ ಖಾಕಾ 10 ಓವರ್‌ಗಳಲ್ಲಿ 47 ರನ್ ನೀಡಿ 3 ವಿಕೆಟ್ ಪಡೆದರೆ, ಮಸಬಟಾ ಕ್ಲಾಸ್ 10 ಓವರ್‌ಗಳಲ್ಲಿ 51 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಅನ್ನೇರಿ ಡೆರ್ಕ್ಸೆನ್, ನಾನ್ಕುಲುಲೇಕೋ ಮ್ಲಾಬಾ, ನೊಂದುಮಿಸೋ ಶಂಗಾಸೆ ತಲಾ ಒಂದೊಂದು ವಿಕೆಟ್ ಪಡೆದರು.
ಆ ಬಳಿಕ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಭಾರತೀಯ ಮಹಿಳಾ ತಂಡದ ಬೌಲರ್‌ಗಳ ಮಾರಕ ದಾಳಿಗೆ ಪ್ರತಿರೋಧ ಒಡ್ಡಲು ವಿಫಲರಾದರು. ಆರಂಭಿಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಸಂಪೂರ್ಣ ವಿಫಲರಾದರು.
ಭಾರತ ಪರ ಬೌಲಿಂಗ್‌ನಲ್ಲಿ ಆಶಾ ಶೋಭನಾ 8.4 ಓವರ್‌ಗಳಲ್ಲಿ 21 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ದೀಪ್ತಿ ಶರ್ಮಾ 6 ಓವರ್‌ಗಳಲ್ಲಿ 10 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್ ಮತ್ತು ರಾಧಾ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.