ಇಂಗ್ಲೆಂಡ್ 'ಸಿಂಹ'ಗಳ ಎದುರು ಸೋತ ಭಾರತದ ಯುವ ಪ್ರತಿಭೆಗಳು


ಡೆರ್ಬಿ, ಜೂನ್ 23: ಮೂರು ದೇಶಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 'ಎ' ತಂಡವು ಆತಿಥೇಯ ಇಂಗ್ಲೆಂಡ್ ಲಯನ್ಸ್ ತಂಡದ ವಿರುದ್ಧ ಸೋಲು ಕಂಡಿದೆ.
ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಆಟವಾಡಿದ್ದ ಭಾರತ 'ಎ' ತಂಡದ ಯುವ ಪ್ರತಿಭೆಗಳು, ಶುಕ್ರವಾರ ಇಂಗ್ಲೆಂಡ್ ಬೌಲರ್‌ಗಳ ಎದುರು ಮಂಕಾದರು. ಬೌಲಿಂಗ್‌ನಲ್ಲಿಯೂ ಅವರ ಸಾಮರ್ಥ್ಯ ಕಂಡುಬರಲಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಯುವ ಆಟಗಾರರ ತಂಡ ಎಡಗೈ ಸ್ಪಿನ್ನರ್ ಲಿಯಾನ್ ಡಾಸನ್ ದಾಳಿಗೆ ತತ್ತರಿಸಿ 46.3 ಓವರ್‌ಗಳಲ್ಲಿ ಕೇವಲ 232 ರನ್‌ಗಳಿಗೆ ಆಲೌಟ್ ಆಯಿತು.
ಸಾಧಾರಣ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಲಯನ್ಸ್ ತಂಡಕ್ಕೆ ಭಾರತದ ಬೌಲರ್‌ಗಳು ಸವಾಲಾಗಿ ಕಾಣಿಸಲೇ ಇಲ್ಲ. ನಿಕ್ ಗುಬ್ಬಿನ್ಸ್ ಅವರ ಶತಕದ ನೆರವಿನಿಂದ 41.5 ಓವರ್‌ಗಳಲ್ಲಿಯೇ 3 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.
ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಆಟಗಾರರಾದ ಮಯಂಕ್ ಅಗರ್ವಾಲ್ ಮತ್ತು ಪೃಥ್ವಿ ಶಾ 6ರ ಸರಾಸರಿಯಲ್ಲಿ ರನ್ ಪೇರಿಸಿದರೂ, ಹತ್ತು ಓವರ್‌ಗಳು ಮುಗಿಯುವುದರ ಒಳಗೆ ಇಬ್ಬರೂ ಪೆವಿಲಿಯನ್ ಹಾದಿ ಹಿಡಿದರು.
ಶುಬ್ನಮ್ ಗಿಲ್ ಉತ್ತಮ ಆರಂಭ ಪಡೆದರೂ ದೀರ್ಘ ಕಾಲ ಕ್ರೀಸ್‌ನಲ್ಲಿ ಉಳಿಯಲಿಲ್ಲ. ಈ ಹಂತದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಮತ್ತು ವಿಕೆಟ್ ಕೀಪರ್ ರಿಷಬ್ ಪಂತ್ ಉತ್ತಮ ಜತೆಯಾಟ ನೀಡಿದರು. ನಾಲ್ಕನೆಯ ವಿಕೆಟ್‌ಗೆ ಈ ಜೋಡಿ 51 ರನ್ ಸೇರಿಸಿತು.
ಆದರೆ, ತಂಡದ ಮೊತ್ತ 148 ರನ್ ಆಗಿದ್ದಾಗ 42 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್, ಡಾಸನ್ ಬೌಲಿಂಗ್‌ನಲ್ಲಿ ಸ್ಟಂಪ್ ಆಗಿ ನಿರ್ಗಮಿಸಿದರು. ಅದರ ನಂತರ ಎಸೆತದಲ್ಲೇ ವಿಜಯ್ ಶಂಕರ್ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.
ಕೃಣಾಲ್ ಪಾಂಡ್ಯ, ರಿಷಬ್ ಪಂತ್ ಮತ್ತು ಕೆ., ಗೌತಮ್ ಸಾಲಾಗಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಕ್ಷರ್ ಪಟೇಲ್ ಮತ್ತು ಬೌಲರ್ ದೀಪಕ್ ಚಾಹರ್ ತಂಡದ ಮೊತ್ತವನ್ನು 232ರವರೆಗೂ ಕೊಂಡೊಯ್ದರು.
ಆರಂಭದಲ್ಲಿಯೇ ಟಾಮ್ ಕೊಹ್ಲೆರ್ ಕ್ಯಾಡ್ಮೋರ್ ಅವರ ವಿಕೆಟ್ ಕಳೆದುಕೊಂಡರೂ, ಚೇತರಿಸಿಕೊಂಡ ಇಂಗ್ಲೆಂಡ್ ಲಯನ್ಸ್ ಭಾರತದ ಸ್ಪಿನ್ನರ್‌ಗಳನ್ನು ಸಲೀಸಾಗಿ ಎದುರಿಸಿದರು.
ನಿಕ್ ಗುಬ್ಬಿನ್ಸ್ ಅಜೇಯ 128 (132) ಮತ್ತು ಸ್ಯಾಮ್ ಹೈನ್ 54 (68) ಎರಡನೆಯ ವಿಕೆಟ್‌ಗೆ 134 ರನ್‌ಗಳ ಜತೆಯಾಟ ನೀಡಿದರು. ಲಿಯಾಮ್ ಲಿವಿಂಗ್‌ಸ್ಟೋನ್ 27 (24) ಕೊನೆಯಲ್ಲಿ ಅಲ್ಪ ಕಾಣಿಕೆ ನೀಡಿದರು.
ಶನಿವಾರ ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ತಂಡವು ವೆಸ್ಟ್ ಇಂಡೀಸ್ 'ಎ' ತಂಡದೊಂದಿಗೆ ಸೆಣಸಲಿದೆ. ಭಾರತ 'ಎ' ತಂಡವು ಸೋಮವಾರ ವೆಸ್ಟ್ ಇಂಡೀಸ್ 'ಎ' ಜತೆ ಮುಖಾಮುಖಿಯಾಗಲಿದೆ.
ಸಂಕ್ಷಿಪ್ತ ಸ್ಕೋರ್
ಭಾರತ: 232/10 (46.3): ರಿಷಬ್ ಪಂತ್ 64, ಶ್ರೇಯಸ್ ಅಯ್ಯರ್ 42, ಶುಭ್‌ಮನ್ ಗಿಲ್ 37, ಅಕ್ಷರ್ ಪಟೇಲ್ 25. ಲಿಯಾಮ್ ಡಾಸನ್ 30/4, ಟಾಮ್ ಹೆಲ್ಮ್ 33/3.
ಇಂಗ್ಲೆಂಡ್: ನಿಕ್ ಗುಬ್ಬಿನ್ಸ್ ಅಜೇಯ 128, ಸ್ಯಾಮ್ ಹೈನ್ 54, ಲಿಯಾಮ್ ಲಿವಿಂಗ್‌ಸ್ಟೋನ್ 27, ಶಾರ್ದೂಲ್ ಠಾಕೂರ್ 30/2, ಅಕ್ಷರ್ ಪಟೇಲ್ 40/1.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications