
ಆಸ್ಟ್ರೇಲಿಯಾ ಎ ಹಾಗೂ ಭಾರತ ಎ ತಂಡಗಳ ಮಧ್ಯೆ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಅಭ್ಯಾಸ ಪಂದ್ಯ ನಡೆಯುತ್ತಿದೆ. ಎರಡನೇ ದಿನದಾಟದಲ್ಲಿ ಭಾರತ ತಂಡ 247 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಇದನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೂ ಭಾರತೀಯ ಬೌಲರ್‌ಗಳು ಬಿಸಿ ಮುಟ್ಟಿಸಿದರು.
ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್‌ಗೆ ಇಳಿದ ಆರಂಭದಲ್ಲಿ ಭಾರತೀಯ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದರು. ಇಬ್ಬರು ಆರಂಭಿಕ ಆಟಗಾರರು 5 ರನ್ ಆಗುವಷ್ಟರಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೂಡ ಹೇಳಿಕೊಳ್ಳುವಂತಾ ಜೊತೆಯಾಟವನ್ನು ನೀಡುವಲ್ಲಿ ವಿಫಲರಾದರು.
ಆದರೆ ಕ್ಯಾಮರೂನ್ ಗ್ರೀನ್ ಮಾತ್ರ ಟೀಮ್ ಇಂಡಿಯಾ ಬೌಲರ್‌ಗಳನ್ನು ಕಾಡಲು ಆರಂಭಿಸಿದರು. ಮಾತ್ರವಲ್ಲದೆ ಟೀಮ್ ಇಂಡಿಯಾ ದಾಳಿಯನ್ನು ಅದ್ಭುತವಾಗಿ ಎದುರಿಸಿದ ಅವರು ಶತಕವನ್ನೂ ಪೂರೈಸಿದ್ದಾರೆ. ಆರನೇ ವಿಕೆಟ್‌ಗೆ ಟಿಮ್ ಪೈನ್ ಜೊತೆಗೆ ಸೇರಿ ಶತಕದ ಜೊತೆಯಾಟವನ್ನೂ ನೀಡಿದ್ದಾರೆ. ಕ್ಯಾಮರೂನ್ ಗ್ರೀನ್ 114 ರನ್ ಗಳಿಸಿ ಅಜೇಯವಾಗುಳಿದರೆ ಪೈನ್ 44 ರನ್ ಗಳ ಕೊಡುಗೆಯನ್ನು ನೀಡಿದರು.
ಕ್ಯಾಮರೂನ್ ಗ್ರೀನ್ ನೀಡಿದ ಈ ಅದ್ಭುತ ಆಟದಿಂದಾಗಿ ಆಸ್ಟ್ರೇಲಿಯಾ ಎ ತಂಡ ಭಾರತ ಎ ತಂಡದ ವಿರುದ್ಧ ಮುನ್ನಡೆಯನ್ನು ಪಡೆದುಕೊಳ್ಳಲು ಕಾರಣವಾಗಿದೆ. ಭಾರತೀಯ ಬೌಲರ್‌ಗಳನ್ನು ದಿನವಿಡೀ ಕಾಡಿದ ಗ್ರೀನ್ ವಿಕೆಟ್ ಪಡೆಯಲು ಭಾರತೀಯ ಬೌಲರ್‌ಗಳು ವಿಫಲರಾಗಿದ್ದಾರೆ. ಸದ್ಯ ಆಸ್ಟ್ರೇಲಿಯಾ ಎ ತಂಡ 286 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಆಟವನ್ನು ಕಾಯ್ದಿರಿಸಿದೆ.
ಭಾರತ ಎ ತಂಡದ ಪರವಾಗಿ ಉಮೇಶ್ ಯಾದವ್ 3 ವಿಕೆಟ್ ಕಿತ್ತು ಬೌಲಿಂಗ್ ವಿಭಾಗದಲ್ಲಿ ಮಿಂಚಿದ್ದಾರೆ. ಮೊಹಮ್ಮದ್ ಸಿರಾಜ್ ಹಾಗೂ ಆರ್ ಅಶ್ವಿನ್ ತಲಾ ಎರಡು ವಿಕೆಟ್ ಪಡೆದಿದ್ದಾರೆ. ಎರಡನೇ ದಿನದಂತ್ಯಕ್ಕೆ ಆಸ್ಟ್ರೇಲಿಯಾ 39 ರನ್‌ಗಳ ಅಲ್ಪ ಮುನ್ನಡೆಯನ್ನು ಪಡೆದುಕೊಂಡಿದ್ದು 2 ವಿಕೆಟ್ ಆಸಿಸ್ ಕೈಯ್ಯಲ್ಲಿದೆ.