
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಬಗ್ಗೆ ಗೊಂದಲಗಳು ಮುಂದುವರಿಸಿದೆ. ಕ್ವೀನ್ಸ್‌ಲ್ಯಾಂಡ್‌ನಲ್ಲಿ ಕಠಿಣ ಕ್ವಾರಂಟೈನ್ ನಿಯಮವಿರುವ ಕಾರಣ ಟೀಮ್ ಇಮಡಿಯಾ ಆಟಗಾರರು ಬ್ರಿಸ್ಬೇನ್‌ಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವರದಿಗಳು ಬಂದಿತ್ತು. ಈ ಬಗ್ಗೆ ಕ್ವೀನ್ಸ್‌ಲ್ಯಾಂಡ್ ಸರ್ಕಾರ ಕೂಡ ತನ್ನ ಕಠಿಣ ನಿರ್ಧಾರವನ್ನು ಪ್ರಕಟಿಸಿತ್ತು.
ಇದರ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ನಿಕ್ ಹಾಕ್ಲೆ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಟೀಮ್ ಇಂಡಿಯಾ ಬ್ರಿಸ್ಬೇನ್ ಟೆಸ್ಟ್‌ಗೆ ಇರುವ ಕಠಿಣ ಕ್ವಾರಂಟೈನ್ ಅನ್ನು ಒಪ್ಪಿಕೊಂಡಿದೆ ಎಂದು ನಿಕ್ ಹೇಳಿಕೆಯನ್ನು ನೀಡಿದ್ದಾರೆ. ಭಾರತ ಬ್ರಿಸ್ಬೇನ್‌ನಲ್ಲಿ ಟೆಸ್ಟ್ ಆಡುವುದನ್ನು ನಿರಾಕರಿಸುತ್ತಿದೆ ಎಂಬ ಸುದ್ದಿ ಹರಿದಾಡಿದ ಮರುದಿನ ಈ ಹೇಳಿಕೆಯನ್ನು ನಿಕ್ ಹಾಕ್ಲೆ ನೀಡಿದ್ದಾರೆ.
ಸಿಡ್ನಿಯ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ನಿಕ್ ಹಾಕ್ಲೆ ಟೀಮ್ ಇಂಡಿಯಾ ಆಟಗಾರರು ಬ್ರಿಸ್ಬೇನ್‌ಗೆ ತೆರಳಲು ನಿರಾಕರಿಸುತ್ತಿರುವ ಸಂಗತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ನಾವು ಬಿಸಿಸಿಐ ಜೊತೆಗೆ ನಿರಂತರವಾಗಿ ಮಾತನಾಡುತ್ತಿದ್ದೇವೆ. ಬಿಸಿಸಿಐ ಬೆಂಬಲವಾಗಿದ್ದು ಔಪಚಾರಿಕವಾಗಿ ಯಾವುದೇ ಬೇಡಿಕೆಯನ್ನು ಹೊಂದಿಲ್ಲ. ಈ ಹಿಂದೆ ನಿರ್ಧರಿಸಿದಂತೆಯೇ ಎರಡೂ ತಂಡಗಳು ಆಡಲು ಬಯಸಿದೆ" ಎಂದಿದ್ದಾರೆ ಹಾಕ್ಲೆ.
ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾ ತಂಡದ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಗಳ ಕೊರೊನಾ ವೈರಸ್ ಪರೀಕ್ಷೆಯ ವರದಿ ಬಂದಿದ್ದು ಎಲ್ಲರ ವರದಿಯೂ ನೆಗೆಟಿವ್ ಆಗಿದೆ. ಹೀಗಾಗಿ ಅಂದುಕೊಂಡಂತೆಯೇ ಸೋಮವಾರದಂದು ಆಸ್ಟ್ರೆಲಿಯಾ ಹಾಗೂ ಟೀಮ್ ಇಂಡಿಯಾ ಆಟಗಾರರು ಮೆಲ್ಬರ್ನ್‌ನಿಂದ ಮೂರನೇ ಟೆಸ್ಟ್ ನಡೆಯಲಿರುವ ಸಿಡ್ನಿಗೆ ತೆರಳಲಿದ್ದಾರೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳು ಈಗಾಗಲೇ ಮುಕ್ತಾಯವಾಗಿದೆ. ಆಸ್ಟ್ರೇಲಿಯಾ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದ್ದರೆ ಮೆಲ್ಬರ್ನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ಅದ್ಭುತ ಗೆಲುವು ದಾಖಲಿಸುವ ಮೂರಕ ಸರಣಿಯನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.