Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನಾವ್ ರೆಡಿ: ರೋಹಿತ್ ಕ್ಯಾಪ್ಟನ್, ಗಿಲ್‌ಗೆ ಉಪನಾಯಕ ಪಟ್ಟ
ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ಮುಂದಾಳತ್ವದಲ್ಲಿ ಮುಂಬೈನ ಬಿಸಿಸಿಐ ಕಚೇರಿಯಲ್ಲಿ ನಡೆದ ಸಭೆಯ ಬಳಿಕ, ಭಾರತ ತಂಡವನ್ನು ಪ್ರಕಟಿಸಲಾಗಿದೆ. ಫೆಬ್ರವರಿ 19 ರಿಂದ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜನೆ ಮಾಡಲಿದೆ. ಈ ಟೂರ್ನಿಯಲ್ಲಿ ಭಾರತ ಸಹ ಭಾಗವಹಿಸಲಿದ್ದು, ಭಾರತದ ಪಂದ್ಯಗಳು ಯುಎಇನಲ್ಲಿ ನಡೆಯಲಿದೆ.
ನಿರೀಕ್ಷೆಯಂತೆ ಟೀಮ್ ಇಂಡಿಯಾವನ್ನು ಐಸಿಸಿಯ ಮೆಗಾ ಇವೆಂಟ್‌ನಲ್ಲಿ ರೋಹಿತ್ ಶರ್ಮಾ ಮತ್ತೊಮ್ಮೆ ಮುನ್ನಡೆಸಲಿದ್ದಾರೆ. ವಿರಾಟ್ ಕೊಹ್ಲಿ ಅವರಿಗೆ ಬಿಸಿಸಿಐ ಮತ್ತೊಂದು ಕೊನೆಯ ಚಾನ್ಸ್ ನೀಡಿದೆ. ಉಳಿದಂತೆ ಈಗಾಗಲೇ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ಮಿಂಚಿದ ಆಟಗಾರರಿಗೆ ಮಣೆ ಹಾಕಲಾಗಿದೆ. ವಿಶೇಷ ಎಂದರೆ ಟೀಮ್ ಇಂಡಿಯಾದ ಸ್ಪಿಂಗ್ ಕಿಂಗ್ ಮೊಹಮ್ಮದ್ ಶಮಿ ಬಹು ತಿಂಗಳುಗಳ ಬಳಿಕ ಮೈದಾನಕ್ಕೆ ಇಳಿಯಲಿದ್ದಾರೆ. ಹಾಗಿದ್ದರೆ ಭಾರತ ತಂಡದ ಸಂಯೋಜನೆ ಹೇಗಿದೆ ಇಲ್ಲಿದೆ ವರದಿ.

ಗಿಲ್‌ಗೆ ಉಪನಾಯಕನ ಪಟ್ಟ
ಟೀಮ್ ಇಂಡಿಯಾದ ಭರವಸೆಯ ಆಟಗಾರ ಶುಭಮನ್ ಗಿಲ್ ಹೆಗಲಿಗೆ ಹೊಸ ಜವಾಬ್ದಾರಿಯನ್ನು ನೀಡಲಾಗಿದೆ. ಗಿಲ್ ಅವರಿಗೆ ತಂಡದ ಉಪನಾಯಕ ಎಂದು ಘೋಷಿಸಲಾಗಿದೆ. ಇವರು ಚಾಂಪಿಯನ್ಸ್ ಟ್ರೋಫಿ ವೇಳೆ ಉಪನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಚೊಚ್ಚಲ ಅವಕಾಶ
ಟೀಮ್ ಇಂಡಿಯಾದ ಪರ ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿರುವ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಅವರಿಗೆ ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡುವ ಅವಕಾಶವನ್ನು ನೀಡಲಾಗಿದೆ.
ಟೀಮ್ ಇಂಡಿಯಾದ ಪರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರಿಗೆ ಏಕದಿನ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಇವರು ಈಗಾಗಲೇ ಭಾರತದ ಪರ 8 ಏಕದಿನ ಪಂದ್ಯಗಳನ್ನು ಆಡಿದ್ದು 12 ವಿಕೆಟ್ ಕಬಳಿಸಿದ್ದಾರೆ.
ನಾಲ್ಕು ಸ್ಪಿನ್ ಬೌಲರ್ಸ್
ಭಾರತ ತಂಡದಲ್ಲಿ ನಾಲ್ವರು ಸ್ಪಿನ್ ಬೌಲರ್‌ಗಳಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ರವೀಂದ್ರ ಜಡೇಜಾ ಸೇರಿದ್ದಾರೆ. ರವೀಂದ್ರ ಜಡೇಜಾ ಅವರ ಮೇಲೆ ಬಿಸಿಸಿಐ ಒಲವು ತೋರಿದ್ದು, ಮತ್ತೊಂದು ಅವಕಾಶ ನೀಡಿದೆ. ಇನ್ನು ಗಾಯದಿಂದ ಚೇತರಿಸಿಕೊಂಡಿರುವ ಕುಲ್‌ದೀಪ್ ಯಾದವ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಸಿರಾಜ್‌ಗೆ ಇಲ್ಲ ಅವಕಾಶ
ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಮೊಹಮ್ಮದ್ ಸಿರಾಜ್ ಅವರಿಗೆ ಅವಕಾಶ ಲಭಿಸಿಲ್ಲ. ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ವೇಗದ ಬೌಲರ್‌ಗಳ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಯಶಸ್ವಿ ಜೈಸ್ವಾಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications