ಈ ಒಂದು ಕಾರಣಕ್ಕೆ ಟೀಮ್ ಇಂಡಿಯಾ ವಿಶ್ವದ ಅತ್ಯುತ್ತಮ ತಂಡವಾಗಿ ನಿಂತಿದೆ ಎಂದ ಬ್ರಾಡ್ ಹಾಗ್

ಭಾರತ ಕ್ರಿಕೆಟ್ ತಂಡ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದು ಹರಿಣಗಳ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಇತ್ತಂಡಗಳ ನಡುವೆ ಡಿಸೆಂಬರ್ 26ರ ಬಾಕ್ಸಿಂಗ್ ಡೇನಂದು ಸೆಂಚೂರಿಯನ್ ಕ್ರೀಡಾಂಗಣದಲ್ಲಿ ಆರಂಭವಾದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 113 ರನ್‌ಗಳ ಬೃಹತ್ ಗೆಲುವನ್ನು ದಾಖಲಿಸಿತು. ಈ ಮೂಲಕ ಭಾರತ ತಂಡ ಸೆಂಚುರಿಯನ್ ಕ್ರೀಡಾಂಗಣದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯ ಗೆಲ್ಲುವುದರ ಮೂಲಕ ಸೆಂಚೂರಿಯನ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯವೊಂದನ್ನು ಗೆದ್ದ ಏಷ್ಯಾದ ಮೊದಲ ತಂಡ ಎಂಬ ಐತಿಹಾಸಿಕ ದಾಖಲೆಯನ್ನು ಬರೆಯಿತು.
ಹೀಗೆ ಗಬ್ಬಾ, ಓವಲ್ಸ್, ಲಾರ್ಡ್ಸ್ ಮತ್ತು ಸೆಂಚುರಿಯನ್ ರೀತಿಯ ಕಠಿಣ ಕ್ರೀಡಾಂಗಣಗಳಲ್ಲಿ ಟೀಮ್ ಇಂಡಿಯಾ ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದರ ಮೂಲಕ ಕೆಟ್ಟ ದಾಖಲೆಗಳನ್ನು ಅಳಿಸಿ ಹಾಕಿ ತನ್ನ ವಿಜಯ ಪತಾಕೆಯನ್ನು ಹಾರಿಸಿತು. ಹೌದು, ಯಾವ ಕ್ರೀಡಾಂಗಣಗಳಲ್ಲಿ ಗೆಲ್ಲಲಾಗುವುದಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿತ್ತೋ ಅದೇ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಗೆದ್ದು ತೋರಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.
ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯವನ್ನು ಗೆದ್ದಿರುವ ಟೀಮ್ ಇಂಡಿಯಾ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆಲ್ಲುವ ತವಕದಲ್ಲಿದೆ. ಹಾಗೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಇದುವರೆಗೂ ಆಡಿರುವ ಯಾವುದೇ ಟೆಸ್ಟ್ ಪಂದ್ಯದಲ್ಲಿಯೂ ಕೂಡ ಸೋತಿಲ್ಲ ಎಂಬ ಉತ್ತಮ ಹಿನ್ನೆಲೆಯನ್ನು ಹೊಂದಿದ್ದು ಈ ಪಂದ್ಯದಲ್ಲಿ ಅದೇ ರೀತಿ ಜಯ ಸಾಧಿಸಿದರೆ ಸರಣಿಯನ್ನು ಕೈವಶ ಪಡಿಸಿಕೊಳ್ಳುವುದರ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ದಾಖಲೆಯನ್ನು ಬರೆಯಲಿದೆ. ಈ ಕುರಿತಾಗಿ ಮಾತನಾಡಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಟೀಮ್ ಇಂಡಿಯಾವನ್ನು ವಿಶ್ವದ ಅತ್ಯುತ್ತಮ ತಂಡ ಎಂದು ಹೊಗಳಿದ್ದು ಈ ಕೆಳಕಂಡಂತೆ ಕಾರಣಗಳನ್ನು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಇನ್ನೊಂದು ಪಂದ್ಯ ಗೆದ್ದರೂ ಸಾಕು
"ಟೀಮ್ ಇಂಡಿಯಾ ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಗೆದ್ದಿದೆ. ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧ ಉಳಿದಿರುವ 2 ಟೆಸ್ಟ್ ಪಂದ್ಯಗಳಲ್ಲಿ ಯಾವುದಾದರೊಂದು ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದರೆ ಸರಣಿಯನ್ನು ಕೈವಶ ಮಾಡಿಕೊಳ್ಳುವುದರ ಮೂಲಕ ಸದ್ಯಕ್ಕೆ ವಿಶ್ವ ಕ್ರಿಕೆಟ್‍ನ ಅತ್ಯುತ್ತಮ ತಂಡ ಎನಿಸಿಕೊಳ್ಳಲಿದೆ. 2000ದಲ್ಲಿ ಆಸ್ಟ್ರೇಲಿಯಾ ಹಾಗೂ 70 ಮತ್ತು 80ನೇ ದಶಕದಲ್ಲಿ ವೆಸ್ಟ್ ಇಂಡೀಸ್ ವಿಶ್ವ ಕ್ರಿಕೆಟ್‍ನಲ್ಲಿ ಮೆರೆಯುತ್ತಿದ್ದ ರೀತಿ ಟೀಮ್ ಇಂಡಿಯಾ ಮೆರೆಯಲಿದೆ" ಎಂದು ಬ್ರಾಡ್ ಹಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾ ಪ್ರವಾಸ ಕೈಗೊಂಡ ಕಡೆಯೆಲ್ಲಾ ಗೆಲ್ಲುತ್ತಾ ಬರುತ್ತಿರುವ ಅತ್ಯುತ್ತಮ ತಂಡ
ಇನ್ನೂ ಮುಂದುವರಿದು ಟೀಮ್ ಇಂಡಿಯಾ ಕುರಿತು ಮಾತನಾಡಿರುವ ಬ್ರಾಡ್ ಹಾಗ್ ಟೀಮ್ ಇಂಡಿಯಾ ಪ್ರವಾಸ ಕೈಗೊಂಡ ಕಡೆಯೆಲ್ಲ ಗೆಲ್ಲುತ್ತಾ ಬರುತ್ತಿರುವ ಅತ್ಯುತ್ತಮ ತಂಡವಾಗಿದೆ ಎಂದು ಕೊಂಡಾಡಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿರುವ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ನೆಲದಲ್ಲಿ ಹರಿಣಗಳನ್ನು ಸೋಲಿಸಲು ಮುಂದಾಗುತ್ತಿದ್ದು ಅತ್ಯುತ್ತಮ ತಂಡವಾಗಿದೆ ಎಂದು ಶ್ಲಾಘಿಸಿದ್ದಾರೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಇದುವರೆಗೂ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ ಟೀಮ್ ಇಂಡಿಯಾ
ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಒಟ್ಟು 7 ಬಾರಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದ ಟೀಮ್ ಇಂಡಿಯಾ ಯಾವುದೇ ಬಾರಿ ಕೂಡ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ ಇದೀಗ ಎಂಟನೇ ಬಾರಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಚೊಚ್ಚಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿದ್ದು ಉಳಿದಿರುವ 2 ಪಂದ್ಯಗಳ ಪೈಕಿ ಯಾವುದಾದರೊಂದು ಪಂದ್ಯವನ್ನು ಗೆದ್ದರೂ ಸರಣಿಯನ್ನು ಕೈವಶ ಪಡಿಸಿಕೊಳ್ಳಲಿದ್ದು ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲನೇ ಬಾರಿಗೆ ಟೆಸ್ಟ್ ಸರಣಿಯನ್ನು ಗೆದ್ದ ದಾಖಲೆಯನ್ನು ಬರೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications