Women's Emerging Asia Cup: ಮತ್ತೆ ಮಿಂಚಿದ ಶ್ರೇಯಾಂಕಾ; ಬಾಂಗ್ಲಾ ಮಣಿಸಿ ಏಷ್ಯಾ ಕಪ್ ಗೆದ್ದ ಭಾರತ ವನಿತೆಯರು
ಶ್ವೇತಾ ಸೆಹ್ರಾವತ್ ನಾಯಕತ್ವದ ಭಾರತ ಎ ತಂಡವು ಹಾಂಗ್ ಕಾಂಗ್‌ನಲ್ಲಿ ನಡೆದ 2023ರ ಮಹಿಳಾ ಉದಯೋನ್ಮುಖ ಏಷ್ಯಾ ಕಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತು.
ಬುಧವಾರ, ಜೂನ್ 21ರಂದು ನಡೆದ ಹಾಂಗ್ ಕಾಂಗ್‌ನ ಮೊಂಗ್ ಕಾಕ್‌ನಲ್ಲಿರುವ ಮಿಷನ್ ರೌಂಡ್ ಗ್ರೌಂಡ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಎ ತಂಡವು ಲತಾ ಮೊಂಡಲ್ ನಾಯಕತ್ವದ ಬಾಂಗ್ಲಾದೇಶ ಎ ತಂಡವನ್ನು 31 ರನ್‌ಗಳಿಂದ ಮಣಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 127 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಮಹಿಳಾ ತಂಡ 19.2 ಓವರ್‌ಗಳಲ್ಲಿ 96 ರನ್‌ಗಳಿಗೆ ಸರ್ವಪತನ ಕಂಡಿತು.
ಭಾರತದ ಪರ ಬ್ಯಾಟಿಂಗ್‌ನಲ್ಲಿ ನಾಯಕಿ ಶ್ವೇತಾ ಸೆಹ್ರಾವತ್ 20 ಎಸೆತಗಳಲ್ಲಿ 13 ರನ್ ಮತ್ತು ಉಮಾ ಚೆಟ್ರಿ 20 ಎಸೆತಗಳಲ್ಲಿ 22 ರನ್ ಗಳಿಸಿದರು.
ಈ ಜೋಡಿ ಮೊದಲ ವಿಕೆಟ್‌ಗೆ 5.1 ಓವರ್‌ಗಳಲ್ಲಿ 28 ರನ್ ಜೊತೆಯಾಟ ನೀಡಿದರು. ಬಳಿಕ ಶ್ವೇತಾ ಸೆಹ್ರಾವತ್ ನಹಿದಾ ಅಕ್ಟರ್‌ಗೆ ವಿಕೆಟ್ ನೀಡಿದರೆ, ಉಮಾ ಚೆಟ್ರಿ ಅವರು ರಬೇಯಾ ಖಾನ್ ಎಸೆತದಲ್ಲಿ ಔಟಾದರು.
ನಂತರ ಬಂದ ವೃಂದಾ ದಿನೇಶ್ ಮತ್ತು ಕನಿಕಾ ಅಹುಜಾ ಅವರ ಬ್ಯಾಟಿಂಗ್ ಪ್ರದರ್ಶನ ಭಾರತದ ಸ್ಕೋರ್ ಹೆಚ್ಚಿಸಲು ನೆರವಾಯಿತು. ವೃಂದಾ ದಿನೇಶ್ 29 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸಮೇತ 36 ರನ್ ಗಳಿಸಿ, ಶ್ರೀಲಂಕಾದ ಸುಲ್ತಾನಾ ಖಾತುನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.
ಆ ಬಳಿಕ ಕನಿಕಾ ಅಹುಜಾ 23 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ ಅಜೇಯ 30 ರನ್ ಗಳಿಸಿದರು. ಕೊನೆಯಲ್ಲಿ ಟಿಟಾಸ್ ಸಧು 8 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ಎ ಮಹಿಳಾ ತಂಡದ ಪರ ನಹಿದಾ ಅಕ್ಟರ್ 4 ಓವರ್‌ಗಳಲ್ಲಿ 13 ರನ್ ನೀಡಿ 2 ವಿಕೆಟ್ ಪಡೆದರೆ, ಸುಲ್ತಾನಾ ಖಾತುನ್ 4 ಓವರ್‌ಗಳಲ್ಲಿ 30 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಸಂಜಿದಾ ಅಕ್ಟರ್ ಮೇಘಲಾ ಮತ್ತು ರಬೆಯಾ ಖಾನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಬೌಲಿಂಗ್‌ನಲ್ಲಿ ಮತ್ತೆ ಜಾದೂ ಮಾಡಿದ ಕನ್ನಡತಿ ಶ್ರೇಯಾಂಕಾ ಪಾಟೀಲ್
ಭಾರತ ಮಹಿಳಾ ತಂಡ ನೀಡಿದ 128 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ ದಿಲಾರಾ ಅಕ್ಟರ್ ಅವರ ರೂಪದಲ್ಲಿ ಆರಂಭಿಕ ವಿಕೆಟ್ ಕಳೆದುಕೊಂಡಿತು. ಆ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಇದ್ದರು. 13 ಓವರ್‌ಗಳಾಗಿದ್ದಾಗ ಬಾಂಗ್ಲಾದೇಶ ಮಹಿಳಾ ತಂಡ 66 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಆಗ ಮಳೆಯು ಕೆಲಕಾಲ ಆಟವನ್ನು ಸ್ಥಗಿತಗೊಳಿಸಿತ್ತು.
ಆಟದ ಪುನರಾರಂಭದ ಬಳಿಕ, ಭಾರತ ಎ ಮಹಿಳಾ ತಂಡವು ಎದುರಾಳಿ ತಂಡಕ್ಕೆ ಯಾವುದೇ ಅವಕಾಶ ನೀಡಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ ಮಹಿಳಾ ತಂಡ 19.2 ಓವರ್‌ಗಳಲ್ಲಿ 96 ರನ್‌ಗಳಿಗೆ ಆಲೌಟ್ ಆಯಿತು.
ಕನ್ನಡತಿ ಹಾಗೂ ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ್ ಬ್ಯಾಟಿಂಗ್‌ನಲ್ಲಿ ಯಾವುದೇ ರನ್ ಗಳಿಸಲು ವಿಫಲರಾದರು. ಆದರೆ ಬೌಲಿಂಗ್‌ನಲ್ಲಿ 4 ಓವರ್‌ಗಳಲ್ಲಿ 13 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಮತ್ತೊಮ್ಮೆ ಮಿಂಚಿದರು. ಒಟ್ಟಾರೆ ಪಂದ್ಯಾವಳಿಯಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅಗ್ರ ವಿಕೆಟ್-ಟೇಕರ್ ಎನಿಸಿದರು.
ಇನ್ನು ಮನ್ನತ್ ಕಶ್ಯಪ್ ಕೂಡ ಕರಾರುವಾಕ್ಕಾಗಿ ಬೌಲಿಂಗ್ ಮಾಡಿದ್ದು, 4 ಓವರ್‌ಗಳಲ್ಲಿ 20 ರನ್‌ಗಳಿಗೆ 3 ವಿಕೆಟ್ ಕಬಳಿಸಿದರು. ಇನ್ನು ಕನಿಕಾ ಅಹುಜಾ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಟಿಟಾಸ್ ಸಧು 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications