ಧರ್ಮಶಾಲಾ: ಸಂಘಟಿತ ಆಟದ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಮೂರನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 8 ವಿಕೆಟ್‌ಗಳಿಂದ ಮಣಿಸಿ, 5 ಪಂದ್ಯಗಳ ಟಿ20 ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ.
118 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಅಬ್ಬರದ ಬ್ಯಾಟಿಂಗ್‌ಗೆ ಒತ್ತು ನೀಡಿದರು. ಈ ಜೋಡಿ ಪವರ್‌ಪ್ಲೇನಲ್ಲಿ ಅಬ್ಬರದ ಆಟ ಪ್ರದರ್ಶಿಸಿತು. ಈ ಜೋಡಿ ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 60 ರನ್ ಸೇರಿಸಿತು. ಈ ವೇಳೆ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಅಭಿಷೇಕ್ ಶರ್ಮಾ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಇವರು 18 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 35 ರನ್ ಬಾರಿಸಿ ಔಟ್ ಆದರು. ಟೀಮ್ ಇಂಡಿಯಾ ಈ ಗೆಲುವಿನಲ್ಲಿ ಭಾರತದ ಬೌಲರ್‌ಗಳ ಸಂಘಟಿತದ ಪ್ರದರ್ಶನ ಕಂಡು ಬಂದಿತು.

ಮೂರನೇ ಟಿ20 ಪಂದ್ಯದಲ್ಲಿ ತಮ್ಮ ಮೇಲೆ ಎದ್ದಿದ್ದ ಟೀಕೆಗಳಿಗೆ ಉತ್ತರ ನೀಡುವ ಪ್ರಯತ್ನವನ್ನು ಮಾಡಿದ್ದ ಶುಭಮನ್ ಗಿಲ್, ಲಯ ಕಂಡುಕೊಳ್ಳುವಲ್ಲಿ ವಿಫಲರಾದರು. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದರು. ಇವರು 5 ಬೌಂಡರಿ ನೆರವಿನಿಂದ 28 ರನ್ ಸಿಡಿಸಿದರು. ಶುಭಮನ್ ಗಿಲ್, ಮಾರ್ಕೊ ಜಾನ್ಸನ್ ಅವರ ಲೆಂಗ್ತ್ ಎಸೆತಕ್ಕೆ ಬೋಲ್ಡ್ ಆದರು.
ಭಾನುವಾರ ನಡೆದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶವನ್ನು ತಿಲಕ್ ವರ್ಮಾ ಪಡೆದರು. ಇವರು ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ತಿಲಕ್ ವರ್ಮಾ 3 ಬೌಂಡರಿ ನೆರವಿನಿಂದ ಅಜೇಯ 26 ರನ್ ಸಿಡಿಸಿದರು. ಸೂರ್ಯಕುಮಾರ್ ಯಾದವ್ (12) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಆಲ್‌ರೌಂಡರ್ ಶಿವಂ ದುಬೆ ಅಜೇಯ 10 ರನ್ ಕಲೆ ಹಾಕಿದರು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಕಳಪೆಯಾಗಿತ್ತು. ತಂಡದ ಮೊತ್ತ 7 ರನ್ ಆಗಿದ್ದಾಗ ಟಾಪ್ ಆರ್ಡರ್‌ನ ಮೂರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ನಾಲ್ಕನೇ ವಿಕೆಟ್‌ಗೆ ಐಡನ್ ಮಾರ್ಕ್ರಾಮ್ ಹಾಗೂ ಟ್ರಿಸ್ಟನ್ ಸ್ಟಬ್ಸ್ (9) ಜೋಡಿ ಕೊಂಚ ಆಧಾರವಾಯಿತು. ಕೆಳ ಕ್ರಮಾಂಕದಲ್ಲಿ ಡೊನೊವನ್ ಫೆರೀರಾ 20 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಒಂದು ಕಡೆಯಲ್ಲಿ ವಿಕೆಟ್‌ಗಳು ಬೀಳುತ್ತಾ ಇದ್ದರೂ ನಾಯಕ ಐಡನ್ ಮಾರ್ಕ್ರಾಮ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 46 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 61 ರನ್ ಸಿಡಿಸಿ ಔಟ್ ಆದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟ್ ಆಯಿತು.
ಭಾರತದ ಪರ ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ ರನ್‌ಗಳನ್ನು ನೀಡದೆ ತಲಾ 2 ವಿಕೆಟ್ ಕಬಳಿಸಿದರು. ಕುಲ್‌ದೀಪ್ ಯಾದವ್, ಹರ್ಷಿತ್ ರಾಣಾ ಇಬ್ಬರೂ ಎರಡು ವಿಕೆಟ್ ಪಡೆದರು.