IND vs ENG Test: ಭಾರತ ಮೊದಲ ದಿನ "ಶುಭ" ಆರಂಭ
ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಶುಭಮನ್ ಗಿಲ್ ಬಾರಿಸಿದ ಶತಕದ ನೆರವಿನಿಂದ ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಆಂಡರ್ಸನ್-ತೆಂಡೂಲ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ದಿನದಾಟದ ಗೌರವವನ್ನು ತನ್ನದಾಗಿಸಿಕೊಂಡಿದೆ. ಗಿಲ್ ಪಡೆ ಮೊದಲ ಇನಿಂಗ್ಸ್‌ನಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗೆ 359 ರನ್ ಸಿಡಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಭರ್ಜರಿಯಾಗಿತ್ತು. ಈ ವೇಳೆ ಟೀಮ್ ಇಂಡಿಯಾದ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಅಮೋಘ ಬ್ಯಾಟಿಂಗ್ ನಡೆಸಿತು. ಆರಂಭದ ಮೊದಲ ಗಂಟೆ ಎಚ್ಚರಿಕೆಯಿಂದ ಬ್ಯಾಟ್ ಮಾಡಿದ ಜೋಡಿ ಅಬ್ಬರಿಸಿತು. ಈ ಜೋಡಿ ಮೊದಲ ವಿಕೆಟ್‌ಗೆ 24,5 ಓವರ್‍ಗಳಲ್ಲಿ 91 ರನ್ ಸೇರಿಸಿತು. ಸೊಗಸಾಗಿ ಆಡುತ್ತಿದ್ದ ರಾಹುಲ್ 8 ಬೌಂಡರಿ ಸೇರಿದಂತೆ 42 ರನ್ ಬಾರಿಸಿ ಔಟ್ ಆದರು.

ಪದಾರ್ಪಣೆ ಮಾಡುವ ಅವಕಾಶವನ್ನು ಪಡೆದ ಸಾಯಿ ಸುದರ್ಶನ್ ಖಾತೆ ತೆರೆಯಲಿಲ್ಲ. ಇವರಿಗೆ ಬೆನ್ ಸ್ಟೋಕ್ಸ್ ಖೆಡ್ಡಾ ತೋಡಿದರು. ಮೂರನೇ ವಿಕೆಟ್‌ಗೆ ಆರಂಭಿಕ ಯಶಸ್ವಿ ಜೈಸ್ವಾಲ್ ಅವರನ್ನು ಸೇರಿಕೊಂಡ ನಾಯಕ ಶುಭಮನ್ ಗಿಲ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಸಹ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಇಂಗ್ಲೆಂಡ್ ವೇಗದ ಬೌಲರ್‍ಗಳು ವಿಫಲರಾದರು.
ಯಶಸ್ವಿ, ಗಿಲ್ ಜೋಡಿ ಮೂರನೇ ವಿಕೆಟ್‌ಗೆ 164 ಎಸೆತಗಳಲ್ಲಿ 129 ರನ್ ಸೇರಿಸಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಬೆನ್ ಸ್ಟೋಕ್ಸ್ ಸಫಲರಾದರು. ಆರಂಭಿಕ ಯಶಸ್ವಿ 159 ಎಸೆತಗಳಲ್ಲಿ 16 ಬೌಂಡರಿ, 1 ಸಿಕ್ಸರ್ ಸಹಾಯದಿಂದ 101 ರನ್ ಸಿಡಿಸಿ ಔಟ್ ಆದರು.
ಇಂಗ್ಲೆಂಡ್‌ನಲ್ಲಿ ಮೊದಲ ಶತಕ
25 ವರ್ಷದ ಶುಭಮನ್ ಗಿಲ್ ಹೊಸ ಯುಗದ ಆರಂಭವನ್ನು ಮಾಡಿದರು. ಟೆಸ್ಟ್ ನಾಯಕನಾಗಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಶುಭಮನ್ ಗಿಲ್ ಅಮೋಘ ಬ್ಯಾಟಿಂಗ್ ನಡೆಸಿದರು. ಈ ಮೂಲಕ ಇಂಗ್ಲೆಂಡ್‌ನಲ್ಲಿ ಶುಭಮನ್ ಗಿಲ್ ಮೊದಲ ಶತಕ ಬಾರಿಸಿ ಮಿಂಚಿದರು. ಇದು ಶುಭಮನ್ ಗಿಲ್ ಅವರ ಬ್ಯಾಟ್‌ನಿಂದ ಬಂದ ಆರನೇ ಶತಕವಾಗಿದೆ. ಅಲ್ಲದೆ ನಾಯಕನಾಗಿ ಬಾರಿಸಿದ ಮೊದಲ ಶತಕ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಿಷಭ್ ಪಂತ್ ಅಜೇಯ ಅರ್ಧಶತಕ
ನಾಲ್ಕನೇ ವಿಕೆಟ್‌ಗೆ ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ ಜೋಡಿ ಸಹ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 198 ಎಸೆತಗಳಲ್ಲಿ ಅಜೇಯ 138 ರನ್ ಸೇರಿಸಿತು. ಉಪನಾಯಕ ರಿಷಭ್ ಪಂತ್ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 65 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇನ್ನು ನಾಯಕ ಗಿಲ್ ಅಜೇಯ 127 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಕಪ್ಪು ಪಟ್ಟಿ ಕಟ್ಟಿದ್ದು ಏಕೆ?
ಉಭಯ ತಂಡಗಳು ಟಾಸ್ ಬಳಿಕ ರಾಷ್ಟ್ರಗಾನದ ಮೊದಲು ಅಹಮದಾಬಾದ್ ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸಲು ಒಂದು ನಿಮಿಷ ಮೌನ ಆಚರಿಸಿದರು. ಜೂನ್ 12 ರಂದು ಸಂಭವಿಸಿದ ಈ ವಿಮಾನ ಅಪಘಾತದಲ್ಲಿ ಇದುವರೆಗೆ ಒಟ್ಟು 241 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕಾಗಿ ಭಾರತ ಹಾಗೂ ಇಂಗ್ಲೆಂಡ್ ತಂಡದ ಆಟಗಾರರು ತೋಳಿಗೆ ಪಟ್ಟಿ ಕಟ್ಟಿಕೊಂಡು ಮೈದಾನಕ್ಕೆ ಇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications