
ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್‌ನಲ್ಲಿ ಸೋತು ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಳಿಸಿದ್ದು ಆಸ್ಟ್ರೇಲಿಯಾ ತಂಡ 6ನೇ ಬಾರಿಗೆ ಚಾಂಪಿಯನ್ ಎನಿಸಿಕೊಳ್ಳುವ ಮೂಲಕ ದಾಖಲೆ ಬರೆದಿದೆ. ಈ ಮಧ್ಯೆ ಐಸಿಸಿ 2024ರ ಮಹಿಳಾ ವಿಶ್ವಕಪ್ ವಿಚಾರವಾಗಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. 2024ರ ಮಹಿಳಾ ಟಿ20 ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದಿರುವ 8 ತಂಡಗಳನ್ನು ಐಸಿಸಿ ಪ್ರಕಟಿಸಿದೆ.
10 ತಂಡಗಳ ಟೂರ್ನಮೆಂಟ್ ಆಗಿದ್ದು ಪ್ರತಿ ಗುಂಪಿನ ಅಗ್ರ ಮೂರು ತಂಡಗಳು ನೇರವಾಗಿ ಸ್ಥಾನವನ್ನು ಪಡೆಯುತ್ತದೆ. ಅಲ್ಲದೆ ಅಗ್ರ 6 ತಂಡಗಳನ್ನು ಹೊರತುಪಡಿಸಿ ಉಳಿದವುಗಳ ಪೈಕಿ ಅಗ್ರ ತಂಡ ಹಾಗೂ ಆತಿಥೇಯ ತಂಡ ನೇರವಾಗಿ ಅರ್ಹತೆಯನ್ನು ಪಡೆಯುತ್ತದೆ.
ಹೀಗಾಗಿ ಈ ಬಾರಿಯ ವಿಶ್ವಕಪ್‌ನ ಮೊದಲನೇ ಗುಂಪಿನ ತಂಡಗಳ ಪೈಕಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ನೇರವಾಗಿ ಅರ್ಹತೆ ಪಡೆದುಕೊಂಡಿದೆ. ಇನ್ನು ಎರಡನೇ ಗುಂಪಿನಲ್ಲಿ ಇಂಗ್ಲೆಂಡ್ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಅರ್ಹತೆ ಪಡೆದುಕೊಂಡಿದೆ. ಪಾಕಿಸ್ತಾನ ತಂಡ ಕೂಡ ನೇರವಾಗಿ ಅರ್ಹತೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉಳಿದ ಎರಡು ತಂಡಗಳು ಅರ್ಹತಾ ಸುತ್ತಿನ ಮೂಲಕ ವಿಶ್ವಕಪ್‌ಗೆ ಅರ್ಹತೆಯನ್ನು ಸಂಪಾದಿಸಲಿದೆ.
ಇನ್ನು ಈ ಬಾರಿಯ ಮಹಿಳಾ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಶ್ರೀಲಂಕಾ ಹಾಗೂ ಐರ್ಲೆಂಡ್ ತಂಡಗಳು ನೇರವಾಗಿ ಅರ್ಹತೆ ಪಡೆಯಲು ವಿಫಲವಾಗಿದೆ. ಶ್ರೀಲಂಕಾ 8ನೇ ಸ್ಥಾನವನ್ನು ಪಡೆದುಕೊಂಡಿದ್ದರೆ ಐರ್ಲೆಂಡ್ 10ನೇ ಸ್ಥಾನವನ್ನು ಪಡೆದುಕೊಂಡಿದೆ.
2023ರ ಮಹಿಳಾ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ತಮ್ಮ ದಾಖಲೆಯ ಆರನೇ ಪ್ರಶಸ್ತಿಯನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 2010, 2012, ಮತ್ತು 2014 ಮತ್ತು 2018, 2020 ಮತ್ತು 2023 ರಲ್ಲಿ ಸತತ ಮೂರು ಗೆಲುವುಗಳನ್ನು ಹೊಂದಿರುವ ಆಸ್ಟ್ರೇಲಿಯಾ ಎರಡನೇ ಬಾರಿಗೆ ಹ್ಯಾಟ್ರಿಕ್ ಗೆಲುವುಗಳೊಂದಿಗೆ ಐತಿಹಾಸಿಕ ಸಾಧನೆ ಮಾಡಿದಂತಾಗಿದೆ.