ನಾಳೆಯಿಂದ ಭಾರತಕ್ಕೆ ಏಕದಿನ ಸರಣಿ ಪರೀಕ್ಷೆ ಶುರು

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಗೆದ್ದುಕೊಂಡಿರುವ ಭಾರತ ತಂಡ ಗುರುವಾರದಿಂದ ಏಕದಿನ ಪಂದ್ಯಗಳ ಸವಾಲಿಗೆ ಒಡ್ಡಿಕೊಳ್ಳಲಿದೆ.
ಹುಮ್ಮಸ್ಸಿನಲ್ಲಿರುವ ಭಾರತಕ್ಕೆ ಗುರುವಾರದಿಂದ ಏಕದಿನ ಸರಣಿ ಸವಾಲು
ನಾಟ್ಹಿಂಗ್‌ಹ್ಯಾಮ್, ಜುಲೈ 11: ಇಂಗ್ಲೆಂಡ್ ವಿರುದ್ಧದ ಟಿ20ಯಲ್ಲಿ ಅವಿಸ್ಮರಣೀಯ ಆಟವಾಡಿದ ಭಾರತ ತಂಡ ಗುರುವಾರದಿಂದ ಏಕದಿನ ಪಂದ್ಯಗಳ ಸವಾಲಿಗೆ ಒಡ್ಡಿಕೊಳ್ಳಲಿದೆ.
ಇತ್ತೀಚೆಗೆ ತನ್ನ ನೆಲದಲ್ಲಿ ಆಸ್ಟ್ರೇಲಿಯಾ ತಂಡವನ್ನು 5-0ಯಿಂದ ವೈಟ್ ವಾಷ್ ಮಾಡಿದ್ದ ಇಂಗ್ಲೆಂಡ್ ತಂಡ, ಭಾರತದ ವಿರುದ್ಧದ ಟಿ20 ಸರಣಿಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಹವಣಿಸುತ್ತಿದೆ.
ಟಿ20ರಲ್ಲಿ ಪ್ರಾಬಲ್ಯ ಸಾಧಿಸಿದ್ದರೂ ಭಾರತಕ್ಕೆ ಏಕದಿನ ಸರಣಿ ವಿಭಿನ್ನ ಸವಾಲನ್ನು ಒಡ್ಡಲಿದೆ. ಏಕೆಂದರೆ ಇಲ್ಲಿ ಇನ್ನೂ ಹೆಚ್ಚು ಜವಾಬ್ದಾರಿಯುತ ಆಟದ ಅವಶ್ಯಕತೆ ಇರುತ್ತದೆ.
ಮೂರು ಪಂದ್ಯಗಳ ಸರಣಿಯನ್ನು ಗೆದ್ದರೆ ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಬೌಲರ್‌ಗಳನ್ನು ಎದುರಿಸುವ ಆತ್ಮವಿಶ್ವಾಸ ಮೂಡುತ್ತದೆ.
ಟಿ20ಯಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗಗಳನ್ನು ನಡೆಸಿದ್ದ ನಾಯಕ ವಿರಾಟ್ ಕೊಹ್ಲಿ ಅವರು ಇಲ್ಲಿ ಯಾವ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ರಾಹುಲ್‌ಗಾಗಿ ಮತ್ತೆ ತ್ಯಾಗ ಮಾಡುತ್ತಾರಾ ಕೊಹ್ಲಿ?
ಟಿ20ಯಲ್ಲಿ ಶಿಖರ್ ಧವನ್ ವಿಫಲರಾಗಿದ್ದರೂ, ಏಕದಿನ ತಂಡದಲ್ಲಿ ಅವರು ಮುಂದುವರಿಯುವ ಸಾಧ್ಯತೆ ಹೆಚ್ಚು. ರೋಹಿತ್ ಶರ್ಮಾ ಮತ್ತು ಧವನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.
ಟಿ20ಯಲ್ಲಿ ಮೂರನೇ ಕ್ರಮಾಂಕವನ್ನು ಕೆ.ಎಲ್. ರಾಹುಲ್‌ಗೆ ಬಿಟ್ಟುಕೊಟ್ಟಿದ್ದ ಕೊಹ್ಲಿ, ಇಲ್ಲಿಯೂ ಆ ತ್ಯಾಗ ಮುಂದುವರಿಸುತ್ತಾರೆಯೇ ಅಥವಾ, ರಾಹುಲ್ ಅವರನ್ನು ನಾಲ್ಕನೆಯ ಕ್ರಮಾಂಕಕ್ಕೆ ಇಳಿಸುತ್ತಾರೆಯೇ ಎನ್ನುವುದನ್ನು ಕಾದುನೋಡಬೇಕು.
ಬಳಿಕ ಸುರೇಶ್ ರೈನಾ, ಎಂಎಸ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಬಲವನ್ನು ತುಂಬಲಿದ್ದಾರೆ.

ಕುಲದೀಪ್ ಬಂದರೆ ಬಲ
ಟಿ20ಯ ಕೊನೆಯ ಪಂದ್ಯದಲ್ಲಿ ಆಡದ ಕುಲದೀಪ್ ಯಾದವ್, ಸ್ಪಿನ್ ದಾಳಿ ಮೂಲಕ ಆಂಗ್ಲರನ್ನು ಕಟ್ಟಿಹಾಕಲು ಲೆಗ್ ಸ್ಪಿನ್ನರ್ ಯಜುರ್ವೇಂದ್ರ ಚಾಹಲ್ ಅವರನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.
ಗಾಯದ ಸಮಸ್ಯೆ ಬಳಿಕ ಮೊನಚು ಕಳೆದುಕೊಂಡಿರುವ ಭುವನೇಶ್ವರ್ ಕುಮಾರ್ ಮತ್ತೆ ತಂಡಕ್ಕೆ ಮರಳಬಹುದು. ಇನ್ನೊಂದೆಡೆ ಉಮೇಶ್ ಯಾದವ್ ಆಡುವುದು ಬಹುತೇಕ ಖಚಿತ. ಭುವನೇಶ್ವರ್ ಚೇತರಿಸಿಕೊಳ್ಳದಿದ್ದರೆ ಸಿದ್ಧಾರ್ಥ್ ಕೌಲ್ ಅಥವಾ ಶಾರ್ದೂಲ್ ಠಾಕೂರ್ ಹೊಸ ಬಾಲ್‌ನೊಂದಿಗೆ ಬೌಲಿಂಗ್ ಆರಂಭಿಸಲಿದ್ದಾರೆ.

ಬ್ಯಾಟಿಂಗ್-ಬೌಲಿಂಗ್ ಎರಡಲ್ಲೂ ಬಲ
ಟಿ20ಯಲ್ಲಿ ಸೋತರೂ ಇಂಗ್ಲೆಂಡ್ ಅತ್ಯುತ್ಸಾಹದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ ಒಂದು ಪಂದ್ಯದಲ್ಲಿ 481 ರನ್ ಪೇರಿಸಿ ವಿಶ್ವದಾಖಲೆ ನಿರ್ಮಿಸಿದ ತಂಡಕ್ಕೆ ಆಲ್‌ರೌಂಡರ್‌ಗಳ ಬಲವಿದೆ.
ಆಸ್ಟ್ರೇಲಿಯಾ ವಿರುದ್ಧದ ವಿಶ್ವದಾಖಲೆಯ ರನ್ ಸಾಧನೆಯನ್ನು ಇದೇ ಕ್ರೀಡಾಂಗಣದಲ್ಲಿ ಮಾಡಿರುವುದು ಎನ್ನುವುದು ಗಮನಾರ್ಹ.
ತಂಡದ 11 ಆಟಗಾರರೂ ಬ್ಯಾಟಿಂಗ್‌ನಲ್ಲಿ ಸಹ ಕಾಣಿಕೆ ನೀಡಬಲ್ಲರು. ತಂಡದಲ್ಲಿ ಬೌಲರ್‌ಗಳಿಗೂ ಕೊರತೆಯಿಲ್ಲ. ಹೀಗಾಗಿ ಒಟ್ಟಾರೆ ತಂಡ ತುಲನೆಯಲ್ಲಿ ಭಾರತಕ್ಕಿಂತ ಹೆಚ್ಚು ಶಕ್ತಿಯುತವಾಗಿದೆ.
ಜೋಸ್ ಬಟ್ಲರ್, ಜೇಸನ್ ರಾಯ್, ಅಲೆಕ್ಸ್ ಹೇಲ್ಸ್, ಜಾನಿ ಬೈರ್‌ಸ್ಟೊ ಮತ್ತು ಇಯಾನ್ ಮಾರ್ಗನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.

ಬೆನ್ ಸ್ಟೋಕ್ಸ್ ಬಲ
ಕಳೆದ ಪಂದ್ಯದಿಂದ ತಂಡವನ್ನು ಸೇರಿಕೊಂಡಿರುವ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಭಾರತಕ್ಕೆ ಸವಾಲೊಡ್ಡಬಲ್ಲರು.
ಬ್ಯಾಟಿಂಗ್ ಲೈನ್ ಅಪ್ ಬಲಿಷ್ಠವಾಗಿರುವುದರಿಂದ ಇಂಗ್ಲೆಂಡ್‌ನ ಟೆಸ್ಟ್ ತಂಡದ ನಾಯಕ ಜೋ ರೂಟ್ ಅವರಿಗೇ ಸ್ಥಾನ ಸಿಗುವುದು ಅನುಮಾನ.
ಬೌಲಿಂಗ್‌ನಲ್ಲಿಯೂ ಇಂಗ್ಲೆಂಡ್‌ಗೆ ಸಮಸ್ಯೆಗಳಿಲ್ಲ. ಜೇಕ್ ಬಾಲ್, ಮೊಯೀನ್ ಅಲಿ, ಆದಿಲ್ ರಶೀದ್, ಡೇವಿಡ್ ವಿಲ್ಲಿ, ಲಿಯಾಮ್ ಪ್ಲಂಕೆಟ್, ಸಾಮ್ ಕುರ್ರನ್ ಬೌಲಿಂಗ್ ಭಾರತದ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಇರುವ ಸವಾಲಾಗಿದೆ.

ಏಕದಿನ ಸರಣಿ ವಿವರ
ಮೊದಲ ಪಂದ್ಯ: ಜುಲೈ 12, ನಾಟಿಂಗ್ಹಾಮ್
ಎರಡನೆಯ ಪಂದ್ಯ: ಜುಲೈ 14, ಲಂಡನ್
ಮೂರನೇ ಪಂದ್ಯ: ಜುಲೈ 17, ಲೀಡ್ಸ್

ಗುರುವಾರದ ಪಂದ್ಯದ ವಿವರ
ಸ್ಥಳ: ಟ್ರೆಂಟ್ ಬ್ರಿಡ್ಜ್, ನಾಟಿಂಗ್‌ಹ್ಯಾಮ್
ಸಮಯ: ಸಂಜೆ 5 (ಭಾರತೀಯ ಕಾಲಮಾನ)
ನೇರಪ್ರಸಾರ: ಸೋನಿ ನೆಟ್‌ವರ್ಕ್ಸ್, ಸೋನಿ ಲೈವ್ ಆಪ್

ಟ್ರೆಂಟ್‌ಬ್ರಿಡ್ಜ್ ಮೈದಾನ
ಅತ್ಯಧಿಕ ರನ್: 481/6 (50) ಇಂಗ್ಲೆಂಡ್ Vs ಆಸ್ಟ್ರೇಲಿಯಾ
ಅತಿ ಕಡಿಮೆ ರನ್: 83/10 (23) ದಕ್ಷಿಣ ಆಫ್ರಿಕಾ Vs ಇಂಗ್ಲೆಂಡ್
ಚೇಸಿಂಗ್‌ನಲ್ಲಿ ಅಧಿಕ ರನ್: 350/3 (44) ಇಂಗ್ಲೆಂಡ್ Vs ನ್ಯೂಜಿಲೆಂಡ್
ಅತಿ ಕಡಿಮೆ ರನ್ ಗಳಿಸಿ ಗೆದ್ದಿರುವುದು: 195/9 (50) ವೆಸ್ಟ್ ಇಂಡೀಸ್ Vs ಇಂಗ್ಲೆಂಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications