ಸಿಡ್ನಿ: ಏಕದಿನ ಸರಣಿಯಲ್ಲಿ ಈಗಾಗಲೇ 2-0ಯಿಂದ ಜಯ ಸಾಧಿಸಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಅಬ್ಬರಿಸಿದೆ. ಸಿಡ್ನಿಯ ಅಂಗಳದಲ್ಲಿ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸುವ ಕನಸಿನಲ್ಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಆಸೀಸ್ ಪ್ರವಾಸದಲ್ಲಿ ಮೊದಲ ಗೆಲುವಿನ ನಗೆ ಬೀರಿ, ಏಕದಿನ ಸರಣಿಗೆ ಗುಡ್ ಬಾಯ್ ಹೇಳುವ ಪ್ಲ್ಯಾನ್ ಗಿಲ್ ಪಡೆಯದ್ದಾಗಿದೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಎರಡನೇ ಏಕದಿನ ಪಂದ್ಯದಲ್ಲಿ ಲಯಕ್ಕೆ ಮರಳಿದ್ದಾರೆ. ಆದರೆ ವಿರಾಟ್ ಕೊಹ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು, ಎಲ್ಲರ ಚಿತ್ತ ಅವರ ಮೇಲೆ ನೆಟ್ಟಿದೆ. ಭಾರತ ಈ ಮೈದಾನದಲ್ಲಿ ಕಳೆದ 11 ವರ್ಷಗಳಿಂದ ಗೆಲುವು ದಾಖಲಿಸಿಲ್ಲ. ಈ ಮೈದಾನ ಆಸೀಸ್ ಪಾಲಿಗೆ ನೆಚ್ಚಿನ ಅಂಗಳವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿ ಕ್ಲೀನ್ ಸ್ವೀಪ್ ಸೋಲು ತಪ್ಪಿಸಿಕೊಳ್ಳುವ ಕನಸು ಹೊಂದಿದೆ.

ಸಿಡ್ನಿ ಅಂಗಳದಲ್ಲಿ ರೋಹಿತ್ ಶರ್ಮಾ ಅವರ ದಾಖಲೆ ಅಮೋಘವಾಗಿದೆ. ಈ ಮೈದಾನದಲ್ಲಿ ರೋಹಿತ್ ಆಡಿದ 5 ಪಂದ್ಯಗಳಲ್ಲಿ 1 ಶತಕ, 2 ಅರ್ಧಶತಕದ ನೆರವಿನಿಂದ ರನ್ ಕಲೆ ಹಾಕಿದ್ದಾರೆ. ರೋಹಿತ್ ಶರ್ಮಾ ಈ ಮೈದಾನದಲ್ಲಿ 66ರ ಸರಾಸರಿಯಲ್ಲಿ 333 ರನ್ ಕಲೆ ಹಾಕಿದ್ದಾರೆ. ಇನ್ನು ರೋಹಿತ್ ಶರ್ಮಾ ಆಡಿಲೇಡ್ ಮೈದಾನದಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದಾರೆ. ಇವರು ಇದೇ ಫಾರ್ಮ್‌ನ್ನು ಮುಂದುವರೆಸುವ ಕನಸಿನಲ್ಲಿದ್ದಾರೆ.
ಮೂರನೇ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ ಅಬ್ಬರಿಸುವ ಅನಿವಾರ್ಯತೆ ಇದೆ. ಆಡಿದ ಎರಡೂ ಪಂದ್ಯಗಳಲ್ಲಿ ಗಿಲ್ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ಎಡವಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ವಿರಾಟ್ ಕಳೆದ ಎರಡೂ ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದರಿಂದ ಒತ್ತಡದಲ್ಲಿದ್ದಾರೆ. ಸಿಡ್ನಿ ಮೈದಾನದಲ್ಲಿ ರನ್ ಕಲೆ ಹಾಕಿ ಆರ್ಭಟಿಸುವ ಅನಿವಾರ್ಯತೆ ಇದೆ. ಇನ್ನು ಶ್ರೇಯಸ್ ಅಯ್ಯರ್ ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು. ಇದೇ ಫಾರ್ಮ್‌ನ್ನು ಸಿಡ್ನಿ ಮೈದಾನದಲ್ಲಿ ಮುಂದುವರಿಸುವ ವಿಶ್ವಾಸ ಹೊಂದಿದ್ದಾರೆ.

ಆಲ್‌ರೌಂಡರ್ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ ತಮ್ಮ ನೈಜ್ಯ ಆಟವನ್ನು ಆಡಬೇಕಿದೆ. ಇನ್ನು ಎರಡನೇ ಏಕದಿನ ಪಂದ್ಯದಲ್ಲಿ ಹರ್ಷೀತ್ ರಾಣಾ, ಅರ್ಷದೀಪ್ ಸಿಂಗ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರಿಂದ ಭರವಸೆ ಮೂಡಿದೆ. ಇನ್ನು ಹರ್ಷೀತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಬಿಗುವಿನ ದಾಳಿ ನಡೆಸ ತಂಡಕ್ಕೆ ನೆರವಾಗಬೇಕಿದೆ. ಇನ್ನು ಮೂರನೇ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು. ನಿತೀಶ್ ಕುಮಾರ್ ರೆಡ್ಡಿಯ ಬದಲಿಗೆ, ಕುಲ್‌ದೀಪ್ ಯಾದವ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರೆ ಬೆಸ್ಟ್. ರಿಸ್ಟ್ ಸ್ಪಿನ್ ಬೌಲರ್ ತಂಡಕ್ಕೆ ಸೇರುವುದರಿಂದ ತಂಡದ ಬಲ ಹೆಚ್ಚುತ್ತದೆ.
ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು 2 ವಿಕೆಟ್‌ಗಳಿಂದ ಗೆದ್ದಿರುವ ಆಸ್ಟ್ರೇಲಿಯಾ, ಸಿಡ್ನಿ ಅಂಗಳದಲ್ಲೂ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಆಸೀಸ್ ತಂಡದ ಸ್ಟಾರ್ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿದ್ದು, ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕೆ ಇಳಿದ ತಂಡವನ್ನೇ ಆಸೀಸ್ ಕಣಕ್ಕೆ ಇಳಿಸುವ ಸಾಧ್ಯತೆ ಇದೆ.