ಶುಭಮನ್ ಗಿಲ್ ಪಡೆ ತವರಿನಲ್ಲಿ ಮುಗ್ಗರಿಸಿದೆ. ಕೋಲ್ಕತ್ತಾ ಟೆಸ್ಟ್ ಪಂದ್ಯವನ್ನು ಗೆಲ್ಲಲು ಪ್ರವಾಸಿ ದಕ್ಷಿಣ ಆಫ್ರಿಕಾ ನೀಡಿದ್ದ 124 ರನ್‌ಗಳ ಗುರಿಯನ್ನು ಹಿಂಬಾಲಿಸುವಲ್ಲಿ ಎಡವಿರುವ ಭಾರತ ತಂಡ, ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡ ಪ್ರವಾಸದಲ್ಲಿ ಶುಭಾರಂಭವನ್ನು ಮಾಡಿದೆ. ತೆಂಬು ಬವುಮಾ ಪಡೆಯ ಸ್ಪಿನ್ ಬೌಲರ್‌ಗಳ ಕರಾರುವಾಕ್ ದಾಳಿಯನ್ನು ಎದುರಿಸುವಲ್ಲಿ ಭಾರತ ತಂಡ ಎಡವಿದೆ.
ಭಾನುವಾರದ ಆಟವನ್ನು 7 ವಿಕೆಟ್‌ಗೆ 93 ರನ್ ಗಳಿಂದ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್ ಆರಂಭಿಸಿ, 153 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ತಂಡದ ನಾಯಕ ತೆಂಬು ಬವುಮಾ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರು 4 ಬೌಂಡರಿ ನೆರವಿನಿಂದ 55 ರನ್ ಬಾರಿಸಿದರು. ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್ ಕಬಳಿಸಿದರು. ದಕ್ಷಿಣ ಆಫ್ರಿಕಾ ನೀಡಿದ್ದ 124 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಆರಂಭ ಕಳಪೆಯಾಗಿತ್ತು.

ಆರಂಭಿಕ ಯಶಸ್ವಿ ಜೈಸ್ವಾಲ್ ಸೊನ್ನೆ ಸುತ್ತಿದ್ದರು. ಇನ್ನು ಭರವಸೆಯ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಒಂದು ರನ್ ಬಾರಿಸಿ ಪೆವಿಲಿಯನ್ ಸೇರಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ಧ್ರುವ್ ಜುರೇಲ್ ಕೊಂಚ ಎದುರಾಳಿಗಳನ್ನು ಕಾಡಿದರು. ಇವರು 13 ರನ್ ಬಾರಿಸಿದ್ದಾಗ ಸೈಮನ್ ಹಾರ್ಮರ್ ತೋಡಿದ ಖೆಡ್ಡಾಗೆ ಬಲಿಯಾದರು. ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ರಿಷಭ್ ಪಂತ್ 2 ರನ್ ಬಾರಿಸಿ ಔಟ್ ಅದರು.
ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಜೊತೆಗೂಡಿ 5ನೇ ವಿಕೆಟ್‌ಗೆ 26 ರನ್ ಸೇರಿಸಿದರು. ಜಡ್ಡು 18 ರನ್ ಬಾರಿಸಿ ಔಟ್ ಆದರು. ಕೆಳ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ 17 ಎಸೆತಗಳಲ್ಲಿ 26 ರನ್ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ವಾಷಿಂಗ್ಟನ್ ಸುಂದರ್ ಎದುರಾಳಿ ಬೌಲರ್‌ಗಳನ್ನು ಕಾಡಿದರು. ಇವರು ಭಾರತದ ಪರ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಬ್ಯಾಟರ್ ಆದರು. ಇವರು 92 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 31 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಭಾರತ 35 ಓವರ್‌ಗಳಲ್ಲಿ 93 ರನ್‌ಗಳಿಗೆ ಆಲೌಟ್ ಆಯಿತು.
ದಕ್ಷಿಣ ಆಫ್ರಿಕಾದ ಪರ ಸ್ಪಿನ್ ಬೌಲರ್ ಸೈಮನ್ ಹಾರ್ಮರ್ 21 ರನ್ ನೀಡಿ 4 ವಿಕೆಟ್ ಕಬಳಿಸಿದರು. ಮಾರ್ಕೊ ಜಾನ್ಸನ್ ಹಾಗೂ ಕೇಶವ್ ಮಹಾರಾಜ್ ತಲಾ 2 ವಿಕೆಟ್ ಕಬಳಿಸಿದರು. ದಕ್ಷಿಣ ಆಫ್ರಿಕಾದ 15 ವರ್ಷಗಳ ನಂತರ ಭಾರತದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾ ಭಾರತದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಪಂದ್ಯವನ್ನು 2010 ರಲ್ಲಿ ಗೆದ್ದಿತ್ತು.