
ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಟೀಮ್ ಇಂಡಿಯಾ ಭರ್ಜರಿಯಾಗಿ ಗೆದ್ದುಕೊಂಡಿದೆ. 3-2 ಅಂತರದಿಂದ ಚುಟುಕು ಸರಣಿಯನ್ನು ತನ್ನ ಕೈವಶ ಮಾಡಿಕೊಳ್ಳುವಲ್ಲಿ ಭಾರತ ಸಫಲವಾಗಿದೆ. ಆದರೆ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣಕ್ಕೆ ದಂಡಕ್ಕೆ ಗುರಿಯಾಗಿದೆ.
ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಸರಣಿಯ ನಿರ್ಣಾಯಕ ಪಂದ್ಯದಲ್ಲಿ 36 ರನ್‌ಗಳ ಗೆಲುವನ್ನು ಸಾಧಿಸಿತ್ತು. ಆದರೆ ಬೌಲಿಂಗ್‌ನ ಸಂದರ್ಭದಲ್ಲಿ ಭಾರತ ತಂಡ ನಿಗದಿತ ಸಮಯದಲ್ಲಿ ಎರಡು ಓವರ್‌ಗಳಷ್ಟು ಹಿಂದೆ ಉಳಿದಿತ್ತು. ಹೀಗಾಗಿ ನಿಯಮದ ಪ್ರಕಾರ ಪಂದ್ಯದ ಸಂಭಾವನೆಯ 40 ಶೇಕಡಾದಷ್ಟು ದಂಡ ಪಾವತಿಸಬೇಕಿದೆ.
ಈ ಸರಣಿಯಲ್ಲಿ ಭಾರತ ಎರಡನೇ ಬಾರಿಗೆ ಹೀಗೆ ದಂಡದ ಶಿಕ್ಷೆಗೆ ಗುರಿಯಾಗಿದೆ. ಸರಣಿಯ ದ್ವಿತೀಯ ಪಂದ್ಯದಲ್ಲಿ ಒಂದು ಓವರ್‌ನಷ್ಟು ನಿಧಾವಾಗಿ ಬೌಲಿಂಗ್ ಮಾಡಿದ್ದ ಹಿನ್ನೆಲೆಯಲ್ಲಿ ಭಾರತ ತಂಡದ ಆಟಗಾರರ ಸಂಭಾವನೆಯ 20 ಶೇಕಡಾ ದಂಡಕ್ಕೆ ಗುರಿಯಾಗಿದ್ದರು.
ಇನ್ನು ಇಂಗ್ಲೆಂಡ್ ತಂಡವೂ ಕೂಡ ಈ ಸರಣಿಯಲ್ಲಿ ದಂಡದ ಶಿಕ್ಷೆಗೆ ಗುರಿಯಾಗಿದ್ದನ್ನು ನೆನಪಿಸಿಕೊಳ್ಳಬಹುದು. ಸರಣಿಯ ನಾಲ್ಕನೇ ಪಂದ್ಯದಲ್ಲಿ ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡ ಒಂದು ಓವರ್‌ಗಳಷ್ಟು ನಿಧಾನಕ್ಕೆ ಬೌಲಿಂಗ್ ಮಾಡಿತ್ತು. ಹೀಗಾಗಿ ಶೇಕಡಾ 20ರಷ್ಟು ದಂಡದ ಶಿಕ್ಷೆಗೆ ಒಳಗಾಗಿತ್ತು.
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಈಗ ಏಕದಿನ ಸರಣಿಗೆ ಸಜ್ಜಾಗಿದ್ದು ಪುಣೆಗೆ ತೆರಳಿದೆ. ಮಂಗಳವಾರ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದ್ದು ಸರಣಿ ಕುತೂಹಲ ಮೂಡಿಸಿದೆ.