
ದಕ್ಷಿಣ ಆಪ್ರಿಕಾ ವಿರುದ್ಧಧ ಏಕದಿನ ಸರಣಿಯಲ್ಲಿ ಭಾರೀ ಮುಖಭಂಗವನ್ನು ಅನುಭವಿಸಿದ ಭಾರತ ಈಗ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಭಾರತ ತಂಡಕ್ಕೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸಲಹೆಯೊಂದನ್ನು ನೀಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡ ವೇಗದ ಬೌಲಿಂಗ್ ಆಲ್‌ರೌಂಡರ್‌ನ ಹುಡುಕಾಟವನ್ನು ನಿಲ್ಲಿಸಿ ಮುಂದುವರಿಯುವ ಅನಿವಾರ್ಯತೆಯಿದೆ ಎಂದಿದ್ದಾರೆ. ಅಂತಾ ಆಟಗಾರರನ್ನು ದೇಶೀಯ ಕ್ರಿಕೆಟ್‌ನಲ್ಲಿ ಬೆಳೆಸಿದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶವನ್ನು ನೀಡಬೇಕು ಎಂದಿದ್ದಾರೆ ಗೌತಮ್ ಗಂಭೀರ್.
ಭಾರತದ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿದ್ದ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ಕಳೆದ ಮೂರು ವರ್ಷಗಳಿಂದ ಬಳಲುತ್ತಿರುವ ಕಾರಣ ಭಾರತ ಸಾಕಷ್ಟು ಆಟಗಾರರನ್ನು ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿ ಕಣಕ್ಕಿಳಿಸುವ ಪ್ರಯತ್ನ ನಡೆಸಿದೆ. ಆದರೆ ಅದರಲ್ಲಿ ಭಾರತಕ್ಕೆ ಯಶಸ್ಸು ದೊರೆಯಲಿಲ್ಲ.
"ನಮ್ಮ ಬಳಿ ಏನಾದರೂ ಇಲ್ಲದಿದ್ದಾಗ ಅದಕ್ಕಾಗಿ ಹಂಬಲಿಸಬಾರದು. ಅದನ್ನು ನಾವು ಒಪ್ಪಿಕೊಳ್ಳಬೇಕು ಹಾಗೂ ಮುಂದುವರಿಯಬೇಕು. ನಮ್ಮಿಂದ ಸೃಷ್ಟಿಸಲು ಸಾಧ್ಯವಾಗದ್ದನ್ನು ಸೃಷ್ಟಿಸುವ ವ್ಯರ್ಥ ಪ್ರಯತ್ನಗಳು ಬೇಡ. ಆಗ ಅದರಿಂದಾಗಿಯೇ ಸಮಸ್ಯೆಗಳು ಉಂಟಾಗುತ್ತದೆ" ಎಂದು ಗೌತಮ್ ಗಂಭೀರ್ ಮಾರ್ಮಿಕವಾಗಿ ಹೇಳಿಕೊಂಡಿದ್ದಾರೆ. ಸ್ಪೋರ್ಟ್ಸ್ ಟುಡೇಗೆ ನೀಡಿದ ಪ್ರತಿಕ್ರಿಯೆಯಲ್ಲಿ ಗಂಭೀರ್ ಈ ಮಾತುಗಳನ್ನು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟಗಾರರನ್ನು ಪರೀಕ್ಷೆಗೆ ಒಳಪಡಿಸುವ ಬದಲಿಗೆ ಅವರನ್ನು ದೇಶಿಯ ಕ್ರಿಕೆಟ್‌ನಿಂದ ಬೆಳೆಸಬೇಕಿದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. "ನಾನು ಯಾವಾಗಲೂ ನಂಬಿಕೊಂಡಿರುವುದು ಏನೆಂದರೆ ಅಂತಾರಾಷ್ಟ್ರೀಯ ವೇದಿಕೆ ಪ್ರದರ್ಶನವನ್ನು ನೀಡಲಿಕ್ಕಾಗಿ ಇರುವ ವೇದಿಕೆ. ಅದನ್ನು ಆಟಗಾರರನ್ನು ಬೆಳೆಸುವುದಕ್ಕಾಗಿ ಬಳಸಬಾರದು. ಆಟಗಾರರನ್ನು ಬೆಳೆಸುವ ಪ್ರಕ್ರಿಯೆ ದೇಶೀಯ ಕ್ರಿಕೆಟ್ ಹಾಗೂ ಭಾರತ ಎ ತಂಡಗಳಲ್ಲಿ ನಡೆಯಬೇಕು. ಯಾವಾಗ ನೀವು ದೇಶವನ್ನು ಪ್ರತಿನಿಧಿಸುತ್ತೀರೋ ಆಗ ನೀವು ನೇರವಾಗಿ ಹೋಗಿ ಪ್ರದರ್ಶನ ನೀಡಲು ಸಿದ್ಧವಾಗಿರಬೇಕು" ಎಂದು ಗಂಭೀರ್ ಪ್ರತಿಕ್ರೀಯಿಸಿದ್ದಾರೆ.
"ಪ್ರಾ,ಆಣಿಕವಾಗಿ ಹೇಳಬೇಕೆಂದರೆ ನಾವು ಆಲ್‌ರೌಂಡರ್‌ಗಳನ್ನು ಹೊಂದಿಲ್ಲ ಎಂಬುದನ್ನು ಕಪಿಲ್‌ದೇವ್ ನಂತರದಿಂದಲೇ ಹೇಳುತ್ತಾ ಬಂದಿದ್ದೇವೆ. ಹಾಗಾಗಿ ಮುನ್ನಡೆಯಬೇಕು ಹಾಗೂ ರಣಜಿ ಟ್ರೋಫಿ ಮಟ್ಟದಿಂದ ಆಟಗಾರರನ್ನು ಬೆಳೆಸುವ ಪ್ರಯತ್ನ ನಡೆಸಬೇಕಿದೆ. ಯಾವಾಗ ಆಟಗಾರ ಅಲ್ಲಿ ಸಿದ್ಧವಾಗುತ್ತಾನೋ ಆಗ ಆತನಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅವಕಾಶ ನೀಡಬೇಕಿದೆ. ಅಂತಾ ಸಂದರ್ಭದಲ್ಲಿ ಆ ಆಟಗಾರರನ್ನು ಆಗಾಗ ಬದಲಾಯಿಸಬಾರದು" ಎಂದು ಗಂಭೀರ್ ಆಲ್‌ರೌಂಡರ್‌ಗಳ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.