
ಲೀಡ್ಸ್, ಆಗಸ್ಟ್ 23: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೆ ಭಾರತೀಯ ತಂಡದಲ್ಲಿ ಯಾವೆಲ್ಲಾ ಆಟಗಾರರು ಸ್ಥಾನವನ್ನು ಪಡೆಯಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದರೂ ಮೂರನೇ ಪಂದ್ಯದಲ್ಲಿ ಕೆಲ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಮೊದಲ ಪಂದ್ಯದಲ್ಲಿ ಆಡಿದ್ದ ಶಾರ್ದೂಲ್ ಠಾಕೂರ್ ಬಳಿಕ ಗಾಯಗೊಂಡಿದ್ದ ಕಾರಣ ಎರಡನೇ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಈಗ ಮೂರನೇ ಟೆಸ್ಟ್‌ಗೂ ಮುನ್ನ ಅವರು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಅವರು ಆಯ್ಕೆಗೆ ಲಭ್ಯವಾಗಲಿದ್ದಾರೆ.
ಎರಡನೇ ಪಂದ್ಯಕ್ಕೂ ಮುನ್ನ ಶಾರ್ದೂಲ್ ಠಾಕೂರ್ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಲಾರ್ಡ್ಸ್ ಟೆಸ್ಟ್‌ನಿಂದ ಶಾರ್ದೂಲ್ ಠಾಕೂರ್ ಹೊರಗುಳಿಸಿದ್ದರು. ಇವರ ಸ್ಥಾನದಲ್ಲಿ ಅನುಭವಿ ಇಶಾಂತ್ ಶರ್ಮಾಗೆ ಅವಕಾಶವನ್ನು ನೀಡಲಾಗಿತ್ತು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವ ಮೂಲಕ ಅತ್ಯುತ್ತಮ ರೀತಿಯಲ್ಲಿ ಬಳಸಿಕೊಂಡಿದ್ದರು ಭಾರತದ ಅನುಭವಿ ಬೌಲರ್ ಇಶಾಂತ್ ಶರ್ಮಾ. ಹೀಗಾಗಿ ಮೂರನೇ ಪಂದ್ಯದ ಆಯ್ಕೆ ಈಗ ಮತ್ತಷ್ಟು ಜಟಿಲವಾದಂತಾಗಿದೆ. ಮೊದಲ ಪಂದ್ಯದಲ್ಲಿ ಶಾರ್ದೂಲ್ ೦ಟ್ಟು ನಾಲ್ಕು ವಿಕೆಟ್ ಪಡೆದುಕೊಂಡಿದ್ದರು. ಆದರೆ ಗಾಯದ ಕಾರಣದಿಂದಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 13 ಓವರ್‌ಗಳನ್ನು ಮಾತ್ರವೇ ಎಸೆದಿದ್ದರು ಶಾರ್ದೂಲ್.
ಮೂರನೇ ಟೆಸ್ಟ್ ಪಂದ್ಯದ ಆರಂಭಕ್ಕೆ ಎರಡು ದಿನ ಮುನ್ನ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ಉಪನಾಯಕ ಅಜಿಂಕ್ಯಾ ರಹಾನೆ ಟೀಮ್ ಇಂಡಿಯಾ ವೇಗಿಗಳ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತ ತಂಡದ ಎಲ್ಲಾ ವೇಗಿಗಳು ಕೂಡ ಈಗ ಆಡಲು ಸಮರ್ಥರಾಗಿದ್ದಾರೆ. ಎಲ್ಲಾ ಆಟಗಾರರು ಕೂಡ 9 ದಿನಗಳ ವಿರಾಮದ ಬಳಿಕ ಟೆಸ್ಟ್ ಪಂದ್ಯವನ್ನಾಡಲು ಹಾತೊರೆಯುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
"ಶಾರ್ದೂಲ್ ಠಾಕೂರ್ ಸಮರ್ಥರಾಗಿದ್ದು ಮೂರನೇ ಟೆಸ್ಟ್ ಪಂದ್ಯದ ಆಯ್ಕೆಗೆ ಲಭ್ಯವಾಗಲಿದ್ದಾರೆ. ಈಗ ನಾವು ಯಾವ ಸಂಯೋಜನೆಯೊಂದಿಗೆ ಕಣಕ್ಕಿಳಿಯಬೇಕೆಂದು ಚರ್ಚಿಸುತ್ತಿದ್ದೇವೆ. ಎಲ್ಲಾ ವೇಗಿಗಳು ಕೂಡ ಆಡಲು ಸಿದ್ಧರಾಗಿದ್ದಾರೆ. ಎರಡನೇ ಪಂದ್ಯದ ನಂತರ ವಿರಾಮ ದೊರೆತಿರುವುದು ಎಲ್ಲಾ ಆಟಗಾರರಿಗೂ ಸಿದ್ಧವಾಗಲೂ ಉತ್ತಮ ಸಮಯದೊರೆತಿದೆ" ಎಂದು ರಹಾನೆ ಹೇಳಿಕೆ ನೀಡಿದ್ದಾರೆ.
ಟೀಮ್ ಇಂಡಿಯಾ ಸಂಭಾವ್ಯ ಆಡುವ ಬಳಗ: ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಫಾರ್ಮ್ ಬಗ್ಗೆ ಸಾಕಷ್ಟು ಪ್ರಶ್ನೆಗಳಿದ್ದರೂ ಮತ್ತೊಂದು ಅವಕಾಶ ಅವರಿಗೆ ದೊರೆಯುವ ಸಾಧ್ಯತೆ ಹೆಚ್ಚಿದೆ. ಇನ್ನು ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್ ಜೊತೆಗೆ ಕಣಕ್ಕಿಳಿಯುವ ಯೋಜನೆ ಇಂಗ್ಲೆಂಡ್ ನೆಲದಲ್ಲಿ ಯಶಸ್ಸು ನೀಡುತ್ತಿದ್ದು ಇದರಲ್ಲಿ ಬದಲಾವಣೆ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಇನ್ನು ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಈ ಇಬ್ಬರು ಸ್ಪಿನ್ನರ್‌ಗಳಲ್ಲಿ ಯಾರು ಆಡಲಿಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಆರಂಬಿಕ ಎರಡು ಪಂದ್ಯಗಳಲ್ಲಿಯೂ ಅನುಭವಿ ಆರ್ ಅಶ್ವಿನ್ ಬೆಂಚ್ ಕಾದಿದ್ದಾರೆ. ಮತ್ತೊಂದೆಡೆ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಹೆಚ್ಚಿನ ಪರಿಣಾಮಕಾರಿಯಾಗಿ ಕಂಡು ಬಾರದಿರುವ ಹಿನ್ನೆಲೆಯಲ್ಲಿ ಆರ್ ಅಶ್ವಿನ್‌ಗೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿದೆ. ಇನ್ನು ವೇಗಿಗಳ ಪೈಕಿ ಕಳೆದ ಪಂದ್ಯದಲ್ಲಿ ಆಡಿದ್ದ ಇಶಾಂತ್ ಶರ್ಮಾ ಬದಲಿಗೆ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಶಾರ್ದೂಲ್ ಠಾಕೂರ್‌ಗೆ ಅವಕಾಶ ನೀಡಿದರೂ ಅಚ್ಚರಿಯಾಗಬೇಕಿಲ್ಲ.
ಭಾರತ ಸಂಭಾವ್ಯ ತಂಡ: ಕೆಎಲ್ ರಾಹುಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ/ ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್
ಇಂಗ್ಲೆಂಡ್ ತಂಡದ ಸಂಭಾವ್ಯ ಆಡುವ ಬಳಗ: ಇಂಗ್ಲೆಂಡ್ ತಂಡದಲ್ಲಿ ಸಿಬ್ಲಿ ಹಾಗೂ ಕ್ರಾವ್ಲೆ ಮೂರನೇ ಟೆಸ್ಟ್‌ನಿಂದ ಹೊರಬಿದ್ದಿರುವ ಕಾರಣದಿಂದಾಗಿ ಆರಂಭಿಕನಾಗಿ ರೋರಿ ಬರ್ನ್ಸ್‌ಗೆ ಹಸೀಬ್ ಹಮೀದ್ ಸಾಥ್ ನೀಡುವುದು ಬಹುತೇಕ ಖಚಿತ. ಮತ್ತೊಂದೆಡೆ ಮೂರನೇ ಕ್ರಮಾಂಕಕ್ಕೂ ಒಲ್ಲೀ ಪೋಪ್ ಹಾಗೂ ಡೇವಿಡ್ ಮಲನ್ ಮಧ್ಯೆ ಯಾರಿಗೆ ಅವಕಾಶ ದೊರೆಯಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಸ್ಥಾನಕ್ಕೆ ಈ ಇಬ್ಬರು ತೀವ್ರ ಪೈಪೋಟಿ ನಡೆಸಲಿದ್ದಾರೆ. ಉಳಿದಂತೆ ಲಾರ್ಡ್ಸ್ ಟೆಸ್ಟ್‌ನಲ್ಲಿ ಭುಜದ ಗಾಯಕ್ಕೆ ಒಳಗಾಗಿರುವ ಮಾರ್ಕ್‌ವುಡ್ ಮೂರನೇ ಟೆಸ್ಟ್‌ಗೆ ಅಲಭ್ಯವಾಗಲಿದ್ದಾರೆ ಎಂಬುದು ಖಚಿತವಾಗಿದೆ. ಹೀಗಾಗಿ ಅವರ ಸ್ಥಾನಕ್ಕೆ ಸಾಕಿಬ್ ಮಹಮೂದ್‌ಗೆ ಅವಕಾಶ ದೊರೆಯುವ ಸಾಧ್ಯತೆಯಿದೆ. ಉಳಿದಂತೆ ಲಾರ್ಡ್ಸ್ ಅಂಗಳದಲ್ಲಿ ಕಣಕ್ಕಿಳಿದ ಆಟಗಾರರು ಹೆಡಿಂಗ್ಲೆಯಲ್ಲಿಯೂ ಕಣಕ್ಕಿಳಿಯಲಿದ್ದಾರೆ,
ಇಂಗ್ಲೆಂಡ್ ಸಂಭಾವ್ಯ ತಂಡ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್/ ಒಲೀ ಪೋಪ್, ಜೋ ರೂಟ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜಾನಿ ಬೈರ್‌ಸ್ಟೊ, ಮೊಯೀನ್ ಅಲಿ, ಒಲ್ಲಿ ರಾಬಿನ್ಸನ್, ಸ್ಯಾಮ್ ಕರನ್, ಸಾಕಿಬ್ ಮಹಮೂದ್ ಮತ್ತು ಜೇಮ್ಸ್ ಆಂಡರ್ಸನ್.