ಟೀಮ್ ಇಂಡಿಯಾ ಓವಲ್‌ನಲ್ಲಿ ಇತಿಹಾಸ ನಿರ್ಮಿಸಿದೆ. ಇಂಗ್ಲೆಂಡ್ ತಂಡವನ್ನು 6 ರನ್‌ಗಳಿಂದ ಮಣಿಸಿದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದೆ. ಈ ಮೂಲಕ ಶುಭಮನ್ ಗಿಲ್ ಪಡೆ ಇತಿಹಾಸ ನಿರ್ಮಿಸಿದೆ. ಇಂಗ್ಲೆಂಡ್ ಪ್ರವಾಸವನ್ನು ಯಂಗ್ ಟೀಮ್ ಇಂಡಿಯಾ ಸ್ಮರಣೀಯವಾಗಿಸಿದೆ. ಈ ಸರಣಿಯಲ್ಲಿ ಭಾರತದ ಭರವಸೆಯ ಬೌಲರ್ ಮೊಹಮ್ಮದ್ ಸಿರಾಜ್ ಅಬ್ಬರಿಸಿದ್ದಾರೆ. ಇವರು ಓವಲ್‌ನಲ್ಲಿ ಶಿಸ್ತು ಬದ್ಧ ದಾಳಿ ನಡೆಸಿ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಕಾಡಿದ್ದಾರೆ.
ಇಂಗ್ಲೆಂಡ್ ಕೊನೆಯ ಟೆಸ್ಟ್ ಪಂದ್ಯ ಗೆಲ್ಲಲು 35 ರನ್ ಅವಶ್ಯಕತೆ ಇತ್ತು. ಈ ವೇಳೆ ಟೀಮ್ ಇಂಡಿಯಾಕ್ಕೆ ಇನ್ನು 4 ವಿಕೆಟ್ ಅವಶ್ಯಕತೆ ಇತ್ತು. ಈ ಪಂದ್ಯವನ್ನು ಇಂಗ್ಲೆಂಡ್ ಗೆಲ್ಲಬಹುದು ಎಂದು ಆತಿಥೇಯ ತಂಡದ ಅಭಿಮಾನಿಗಳು ಲೆಕ್ಕಾಚಾರವನ್ನು ಹಾಕಿಕೊಂಡಿದ್ದರು. ಆದರೆ ಈ ಗುರಿ ಅಷ್ಟೊಂದು ಸುಲಭದಲ್ಲ ಎಂಬುದು ಅವರಿಗೂ ತಿಳಿದಿತ್ತು. ಐದನೇ ದಿನದಾಟದಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣಾ ಜೋಡಿ ಆರ್ಭಟ ನಡೆಸಿತು. ಈ ಜೋಡಿ ತಮ್ಮ ವಿಭಿನ್ನ ಎಸೆತಗಳ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಿತು.

ಸಿರಾಜ್ ಸೋಮವಾರ ಬಿದ್ದ 4 ವಿಕೆಟ್‌ಗಳಲ್ಲಿ 3 ವಿಕೆಟ್ ಪಡೆದು ಓವಲ್‌ನಲ್ಲಿ ಐದು ವಿಕೆಟ್ ಪಡೆದು ಇತಿಹಾಸ ಬರೆದರು. ಈ ಪಂದ್ಯದಲ್ಲಿ ಮೊನಚಾದ ದಾಳಿ ಸಂಘಟಿಸಿದ ಪ್ರಸಿದ್ಧ್ ಕೃಷ್ಣ 4 ವಿಕೆಟ್ ಕಬಳಿಸಿದರು. ಈ ಇಬ್ಬರು ವೇಗದ ಬೌಲರ್‌ಗಳ ಪ್ರದರ್ಶನಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಮೊಹಮ್ಮದ್ ಸಿರಾಜ್ ಅವರಿಗೆ ಈ ಶ್ರೇಷ್ಠ ಪ್ರದರ್ಶನಕ್ಕೆ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.
ಪಂದ್ಯ ಮುಗಿದ ಬಳಿಕ ಮೊಹಮ್ಮದ್ ಸಿರಾಜ್ ಅವರ ಜೊತೆಗೆ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಸಂದರ್ಶನವನ್ನು ನಡೆಸಿದರು. ಈ ವೇಳೆ ಸಿರಾಜ್ ಹಲವು ವಿಚಾರಗಳನ್ನು ಹೇಳಿದರು. ಆದರೆ ಇದೇ ವೇಳೆ ಸಿರಾಜ್ ಅವರಿಗೆ ನಿಮಗೆ ಇಷ್ಟೊಂದು ನಂಬಿಕೆ ಹೇಗೆ ಬರುತ್ತದೆ ಎಂದು ಕೇಳಿದರು. ಆಗ ಸಿರಾಜ್, ನನಗೆ ಅವಕಾಶ ಸಿಕ್ಕರೆ ನಾನು ಫುಲ್ ಎಫ್ಟರ್ಟ್ ಹಾಕಿ ಆಡುವುದಾಗಿ ತಿಳಿಸಿದರು. ಅಲ್ಲದೆ ಸೋಮವಾರ ಬೆಳಗ್ಗೆ ಎದ್ದಾಗ ನಾನು ಗೂಗಲ್‌ನಲ್ಲಿ ನಂಬಿಕೆ (BELIEVE) ಒಂದು ಪೋಸ್ಟರ್‌ನ್ನು ಡೌನ್‌ಲೋಡ್ ಮಾಡಿಕೊಂಡು ಮೊಬೈಲ್ ವಾಲ್‌ಪೇಪರ್‌ನಲ್ಲಿ ಇಟ್ಟುಕೊಂಡಿದ್ದೆ. ಇದು ನನಗೆ ಪ್ರೇರಣೆ ನೀಡಿತು ಎಂದು ತಿಳಿಸಿದ್ದಾರೆ.

ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ. ಮೊಹಮ್ಮದ್ ಸಿರಾಜ್ ಅವರಂತಹ ಬೌಲರ್ ತಮ್ಮ ತಂಡದಲ್ಲಿ ಇರಬೇಕು ಎಂಬುದೇ ಎಲ್ಲ ನಾಯಕರ ಕನಸು. ಇವರಿಗೆ ಚೆಂಡನ್ನು ಯಾವಾಗಲೂ ನೀಡಿದರೂ ಎದುರಾಳಿಗೆ ಕಾಟ ನೀಡಿದ್ದಾರೆ. ಇವರು ತಂಡದಲ್ಲಿ ಇರುವುದು ನಮ್ಮ ಅದೃಷ್ಟ ಎಂದು ಗಿಲ್ ತಿಳಿಸಿದ್ದಾರೆ. ಇನ್ನು ಪ್ರಸಿದ್ಧ್ ಕೃಷ್ಣಾ ಅವರ ಬಗ್ಗೆ ಮಾತನಾಡಿದ ಗಿಲ್, ಅವರೊಬ್ಬ ಪ್ರತಿಭಾನ್ವಿತ ಬೌಲರ್. ಇಂತಹ ಇಬ್ಬರು ಬೌಲರ್‌ಗಳು ತಂಡದಲ್ಲಿದ್ದರೆ ನಾಯಕತ್ವಕ್ಕೆ ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.