ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 3-1 ಅಂತರದಲ್ಲಿ ಭಾರತವನ್ನು ಸೋಲಿಸಿದೆ. 10 ವರ್ಷಗಳಲ್ಲಿ ಮೊದಲ ಬಾರಿಗೆ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಟ್ರೋಫಿಯನ್ನು ವಶಪಡಿಸಿಕೊಂಡಿದೆ. ಈ ಕಠಿಣ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಅಜಿಂಕ್ಯ ರಹಾನೆ ಅವರಂತಹ ಸ್ಟಾರ್ ಬ್ಯಾಟರ್‌ನನ್ನು ಕಳೆದುಕೊಂಡಿತ್ತು. ಅಜಿಂಕ್ಯ ರಹಾನೆ ಇದ್ದಿದ್ದರೆ, ಆಸ್ಟ್ರೇಲಿಯಾವನ್ನು ಭಾರತ 1-3 ಅಂತರದಲ್ಲಿ ಸೋಲಬಹುದಿತ್ತು. ಅಜಿಂಕ್ಯ ರಹಾನೆ ಅವರನ್ನು ಆಯ್ಕೆ ಮಾಡದೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಟೆಸ್ಟ್ ಸರಣಿ ಸೋಲಿಗೆ ಕಾರಣವಾಗಿದೆ.
ಅಜಿಂಕ್ಯ ರಹಾನೆ ಅವರಿಗೆ ಈಗ 36 ವರ್ಷ ವಯಸ್ಸು,.ಆದರೆ ಅವರು ಇನ್ನೂ ಟೀಮ್ ಇಂಡಿಯಾಕ್ಕೆ ಪ್ರಮುಖ ಬ್ಯಾಟರ್ ಎಂಬುದರಲ್ಲಿ ಎರಡನೇ ಮಾತಿಲ್ಲ. ಆದರೆ ಅಜಿಂಕ್ಯ ರಹಾನೆ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಟ್ಟಿದ್ದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮಾಡಿದ ದೊಡ್ಡ ತಪ್ಪು. ಈ ಹಿಂದೆ ಅಜಿಂಕ್ಯ ರಹಾನೆ ಹಲವು ಸಂದರ್ಭಗಳಲ್ಲಿ ಟೀಮ್ ಇಂಡಿಯಾದ ಗೌರವವನ್ನು ಉಳಿಸಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ.

ಅಜಿಂಕ್ಯ ರಹಾನೆ 22 ಮಾರ್ಚ್ 2013 ರಂದು ನವದೆಹಲಿಯ ಫಿರೋಜ್‌ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಬಹುದಿನಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದ ರಹಾನೆ ಅದೃಷ್ಟವಶಾತ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಅವಕಾಶವನ್ನು ಅಂದು ಪಡೆದಿದ್ದರು. ಏಕೆಂದರೆ ಆ ಸಮಯದಲ್ಲಿ ಎಡಗೈ ಬ್ಯಾಟರ್ ಶಿಖರ್ ಧವನ್ ಗಾಯದ ಕಾರಣ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದರು. ಹೀಗಾಗಿ ಧವನ್ ಸ್ಥಾನದಲ್ಲಿ ರಹಾನೆ ಆಡಿದ್ದರು. ಇದಾದ ನಂತರ ಸತತ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆ ಟ್‌ನಲ್ಲಿ ಮಿಂಚಿದರು.
ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅಜಿಂಕ್ಯ ರಹಾನೆ ಟೀಮ್ ಇಂಡಿಯಾ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅಜಿಂಕ್ಯ ರಹಾನೆ ಭಾರತಕ್ಕಾಗಿ ಇದುವರೆಗೆ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 38.46 ಸರಾಸರಿಯಲ್ಲಿ 5077 ರನ್ ಗಳಿಸಿದ್ದಾರೆ. ಅಜಿಂಕ್ಯ ರಹಾನೆ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 12 ಶತಕ ಮತ್ತು 26 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇದಲ್ಲದೆ, ಟೀಮ್ ಇಂಡಿಯಾ ಪರ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಪಂದ್ಯದ ಫಲಿತಾಂಶವನ್ನೇ ಉಲ್ಟಾ ಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ವೈಫಲ್ಯದ ಹೊರತಾಗಿಯೂ, ಅಜಿಂಕ್ಯ ರಹಾನೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ (2013-14) ಕೆಳ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಡರ್ಬನ್ ಕಿಂಗ್ಸ್‌ಮೀಡ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರಹಾ 157 ಎಸೆತಗಳಲ್ಲಿ 96 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು.
ಬಾರ್ಡರ್-ಗವಾಸ್ಕರ್ ಟ್ರೋಫಿ 2014-15ರ ಸರಣಿಯಲ್ಲಿ ಅಜಿಂಕ್ಯ ರಹಾನೆ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ಮಿಚೆಲ್ ಜಾನ್ಸನ್, ಮಿಚೆಲ್ ಸ್ಟಾರ್ಕ್ ಮತ್ತು ಪೀಟರ್ ಸಿಡಲ್ ಅವರಂತಹ ಪ್ರಬಲ ಬೌಲಿಂಗ್ ದಾಳಿಯ ವಿರುದ್ಧ ಸರಣಿಯಲ್ಲಿ 3 ಅರ್ಧ-ಶತಕಗಳನ್ನು ಮತ್ತು 1 ಶತಕವನ್ನು ಗಳಿಸಿದ್ದರಯ. ಇದು ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಆಡಿದ 147 ರನ್‌ಗಳ ಅವರ ಅದ್ಭುತ ಇನ್ನಿಂಗ್‌ನ್ನೂ ಒಳಗೊಂಡಿದೆ.
2015ರಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತಕ್ಕೆ ಬಂದಾಗ ನವದೆಹಲಿಯ ಫಿರೋಜ್‌ಶಾ ಕೋಟ್ಲಾದ ಟರ್ನಿಂಗ್ ಪಿಚ್‌ನಲ್ಲಿ ರಹಾನೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಸ್ಫೋಟಕ ಶತಕಗಳನ್ನು ಸಿಡಿಸಿದ್ದರು. ಈ ಮೂಲಕ ಅವರು ವಿಜಯ್ ಹಜಾರೆ, ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿಯ ವಿಶೇಷ ಕ್ಲಬ್‌ಗೆ ಸೇರಿದ್ದರು.
ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿ ರಹಾನೆ ಸ್ಥಾನ ಪಡೆದಿದ್ದರು. 2021ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಡಿಲೇಡ್‌ನಲ್ಲಿ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಆಲೌಟ್ ಆಗಿತ್ತು. ಕಾಂಗರೂ ತಂಡ ಎರಡೂವರೆ ದಿನಗಳಲ್ಲಿ ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿಯಂತಹ ಅನುಭವಿ ಆಟಗಾರರಿಲ್ಲದೆ ಟೀಮ್ ಇಂಡಿಯಾಗೆ ಪ್ರತ್ಯುತ್ತರ ನೀಡಲು ಸಾಧ್ಯವಾಗಿಲಿಲ್ಲ.
ಆದರೆ ಕೊಹ್ಲಿ ಬದಲಿಗೆ ನಾಯಕತ್ವ ವಹಿಸಿಕೊಂಡ ಅಜಿಂಕ್ಯ ರಹಾನೆ ಆಸ್ಟ್ರೇಲಿಯಾದ ಮೈಂಡ್ ಗೇಮ್ ಅನ್ನು ಮೆಟ್ಟಿ ನಿಂತು ತಂಡಕ್ಕೆ ಮರುಜೀವ ನೀಡಿದರು. ಮೆಲ್ಬೋರ್ನ್‌ನಲ್ಲಿ ರಹಾನೆ ನಾಯಕತ್ವದಲ್ಲಿ ಟೀಮ್ ಇಂಡಿಯಾ ಬಲಿಷ್ಠ ಪುನರಾಗಮನ ಮಾಡಿತ್ತು. ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ಅಜಿಂಕ್ಯ ರಹಾನೆ ಮೆಲ್ಬೋರ್ನ್‌ನಲ್ಲಿ 112 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಕಾಂಗರೂ ಪಡೆ ವಿರುದ್ಧ ಟೀಮ್ ಇಂಡಿಯಾ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಲು ರಹಾನೆ ಪ್ರಮುಖ ಪಾತ್ರವಹಿಸಿದ್ದರು.