ಸೋಮವಾರ, ಸೆಪ್ಟೆಂಬರ್ 4ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ 5ನೇ ಪಂದ್ಯದಲ್ಲಿ ನೇಪಾಳ ತಂಡದ ವಿರುದ್ಧ ಭಾರತ ತಂಡವು ಭರ್ಜರಿ ಗೆಲುವು ಸಾಧಿಸಿ ಸೂಪರ್ 4 ಹಂತಕ್ಕೆ ಅರ್ಹತೆ ಪಡೆಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಪೌಡೆಲ್ ನಾಯಕತ್ವದ ನೇಪಾಳ ತಂಡ ಆಸಿಫ್ ಶೇಖ್ ಅವರ ಅರ್ಧಶತಕದ ನೆರವಿನಿಂದ 48.2 ಓವರ್‌ಗಳಲ್ಲಿ 230 ರನ್‌ಗಳಿಗೆ ಆಲೌಟ್ ಆಗಿತ್ತು.
231 ರನ್‌ಗಳ ಗೆಲುವಿನ ಗುರಿ ಪಡೆದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ 2.1 ಓವರ್‌ಗಳಲ್ಲಿ 17 ರನ್ ಗಳಿಸಿದ್ದಾಗ ಮಳೆ ಬಂದು ಆಟ ಸ್ಥಗಿತಗೊಂಡಿತು.

ತಾತ್ಕಾಲಿಕ ಸ್ಥಗಿತದ ನಂತರ, ಡಿಎಲ್ಎಸ್ ವಿಧಾನದಡಿ ಭಾರತದ ಗೆಲುವಿಗೆ 23 ಓವರ್‌ಗಳಲ್ಲಿ 145 ರನ್‌ಗಳ ಹೊಸ ಟಾರ್ಗೆಟ್ ನೀಡಲಾಯಿತು. ಆಗ ಭಾರತ ತಂಡ 20.1 ಓವರ್‌ಗಳಲ್ಲಿ ಯಾವುದೇ ನಷ್ಟವಿಲ್ಲದೆ 147 ರನ್ ಗಳಿಸಿ ಸುಲಭವಾಗಿ ಗೆಲುವಿನ ದಡ ಸೇರಿತು.
ಕಳೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ವೈಫಲ್ಯ ಅನುಭವಿಸಿದ್ದ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರು ನೇಪಾಳ ತಂಡದ ವಿರುದ್ಧ ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ಫಾರ್ಮ್‌ಗೆ ಮರಳಿದರು.
ರೋಹಿತ್ ಶರ್ಮಾ 59 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್‌ಗಳ ಮೂಲಕ ಅಜೇಯ 74 ರನ್ ಬಾರಿಸಿದರೆ, ನಾಯಕನಿಗೆ ಸಾಥ್ ನೀಡಿದ ಶುಭ್ಮನ್ ಗಿಲ್ 62 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಮೇತ ಅಜೇಯ 67 ರನ್ ಗಳಿಸಿದರು.

ನೇಪಾಳ ತಂಡದ ಯಾವುದೇ ಬೌಲರ್‌ಗಳು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಇನ್ನು ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ನೇಪಾಳ ತಂಡದ ಕುಶಾಲ್ ಭುರ್ಟೆಲ್ ಮತ್ತು ಆಸಿಫ್ ಶೇಖ್ ಮೂರು ಜೀವದಾನ ಪಡೆದು ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 65 ರನ್ ಜೊತೆಯಾಟ ನಿರ್ಮಿಸಿದರು.
ಕುಶಾಲ್ ಭುರ್ಟೆಲ್ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ ಬಿರುಸಿನ 38 ರನ್ ಗಳಿಸಿದರೆ, ಆಸಿಫ್ ಶೇಖ್ 97 ಎಸೆತಗಳಲ್ಲಿ 8 ಬೌಂಡರಿ ಸಮೇತ 58 ರನ್ ಬಾರಿಸಿದರು. ನಂತರ ಬಂದ ಭೀಮ್ ಶಾರ್ಕಿ 7 ರನ್, ನಾಯಕ ರೋಹಿತ್ ಪೌಡೆಲ್ 5 ರನ್, ಕುಶಾಲ್ ಮಲ್ಲ 2 ರನ್, ಗುಲ್ಶಾನ್ ಜಾ 23 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಅಬ್ಬರಿಸಿದ ದೀಪೇಂದ್ರ ಸಿಂಗ್ ಐರೆ 25 ಎಸೆತಗಳಲ್ಲಿ 3 ಸಹಾಯದಿಂದ 29 ರನ್, ಸೋಂಪಾಲ್ ಕಾಮಿ 56 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 48 ರನ್ ಬಾರಿಸಿದರು.
ಭಾರತದ ಪರ ರವೀಂದ್ರ ಜಡೇಜಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದರು. ಉಳಿದಂತೆ ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಶಮಿ ತಲಾ 1 ವಿಕೆಟ್ ಕಬಳಿಸಿದರು.
ಭರ್ಜರಿ ಅರ್ಧಶತಕ ಸಿಡಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದೇ ವೇಳೆ ಏಕದಿನ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರು.
* ಏಕದಿನ ಏಷ್ಯಾ ಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರನಾದರು.
* ಆರಂಭಿಕನಾಗಿ ಏಕದಿನ ಕ್ರಿಕೆಟ್‌ನಲ್ಲಿ 250 ಸಿಕ್ಸರ್‌ಗಳನ್ನು ಪೂರೈಸಿದರು
* ಏಷ್ಯಾ ಕಪ್‌ನಲ್ಲಿ ಭಾರತೀಯ ನಾಯಕನಿಂದ ಅತಿ ಹೆಚ್ಚು ಅರ್ಧಶತಕ ದಾಖಲು
* ಏಷ್ಯಾ ಕಪ್‌ನಲ್ಲಿ 10ಕ್ಕೂ ಅಧಿಕ 50 ಪ್ಲಸ್ ಸ್ಕೋರ್‌ಗಳನ್ನು ಪೂರೈಸಿದ ಮೊದಲ ಭಾರತೀಯನಾದರು.