ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗಿಗಳಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್ ಕೂಡ ಒಬ್ಬರು. ತಮ್ಮ ವೃತ್ತಿಜೀವನದ ನಂತರವೂ ಕ್ರಿಕೆಟ್‌ನಲ್ಲೇ ಮುಂದುವರೆದಿದ್ದಾರೆ. ಆದರೆ, ಆಟಗಾರನಾಗಿ ಅಲ್ಲ, ಐಸಿಸಿ ಮ್ಯಾಚ್ ರೆಫರಿಯಾಗಿ.
ಭಾರತ ತಂಡದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಅವರು ಸೋಮವಾರ, ಸೆಪ್ಟೆಂಬರ್ 4ರಂದು ನೇಪಾಳ ವಿರುದ್ಧದ ಭಾರತ ತಂಡದ 2023ರ ಏಷ್ಯಾ ಕಪ್ ಪಂದ್ಯದ ವೇಳೆ ಐಸಿಸಿ ಮ್ಯಾಚ್ ರೆಫರಿಯಾಗಿ ತಮ್ಮ 250ನೇ ಏಕದಿನ ಪಂದ್ಯವನ್ನು ನಿರ್ವಹಿಸಲಿದ್ದಾರೆ.

ಜಾವಗಲ್ ಶ್ರೀನಾಥ್ ಅವರು ರಂಜನ್ ಮದುಗಲೆ, ಕ್ರಿಸ್ ಬ್ರಾಡ್ ಮತ್ತು ಜೆಫ್ ಕ್ರೋವ್ ನಂತರ 250ನೇ ಏಕದಿನ ಪಂದ್ಯಗಳ ಮೈಲಿಗಲ್ಲು ಸಾಧಿಸಿದ ನಾಲ್ಕನೇ ಐಸಿಸಿ ಮ್ಯಾಚ್ ರೆಫರಿ ಎನಿಸಿಕೊಳ್ಳಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಮೈಸೂರು ಮೂಲದ ಜಾವಗಲ್ ಶ್ರೀನಾಥ್, 2003ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ರನ್ನರ್-ಅಪ್ ಸ್ಥಾನ ಪಡೆದ ತಂಡದ ಸದಸ್ಯನಾಗಿದ್ದರು.
"250ನೇ ಏಕದಿನ ಪಂದ್ಯಕ್ಕೆ ಮ್ಯಾಚ್ ರೆಫರಿಯಾಗುತ್ತಿರುವುದು ಸಂತಸ ತಂದಿದೆ. ಇದು ನನಗೆ ಐಸಿಸಿ ರೆಫರಿಯಾಗಿ 17 ವರ್ಷಗಳು ತುಂಬಿವೆ. ನಾನು ಕ್ರಿಕೆಟ್ ಆಡಿದ್ದಕ್ಕಿಂತ ಹೆಚ್ಚು ಏಕದಿನ ಪಂದ್ಯಗಳಲ್ಲಿ ನಾನು ಕಾರ್ಯನಿರ್ವಹಣೆ ಮಾಡಿದ್ದೇನೆ ಎಂಬುದು ನಂಬಲಸಾಧ್ಯವಾಗಿದೆ," ಎಂದು ಜಾವಗಲ್ ಶ್ರೀನಾಥ್ ಐಸಿಸಿ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದ್ದಾರೆ.
"ಕ್ರಿಕೆಟ್‌ನೊಂದಿಗೆ ಇನ್ನೂ ಸಂಬಂಧ ಹೊಂದಿರಲು ನಾನು ಸಂತೋಷಪಡುತ್ತೇನೆ. 2006ರಲ್ಲಿ ಕೊಲಂಬೊದಲ್ಲಿ ನಡೆದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಬಾರಿಗೆ ಮ್ಯಾಚ್ ರೆಫರಿಯಾಗಿ ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ಅಲ್ಲಿಂದ ನಾನು ಅದ್ಭುತವಾಗಿದ್ದೇನೆ ಮತ್ತು ಮುಂಬರುವ ವರ್ಷಗಳಲ್ಲಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ," ಎಂದು ಜಾವಗಲ್ ಶ್ರೀನಾಥ್ ಹೇಳಿದರು.

ಮ್ಯಾಚ್ ರೆಫರಿಯಾಗಿ ಜಾವಗಲ್ ಶ್ರೀನಾಥ್ ದಾಖಲೆ
ಜಾವಗಲ್ ಶ್ರೀನಾಥ್ ಅವರು 2006ರಲ್ಲಿ ಐಸಿಸಿ ಮ್ಯಾಚ್ ರೆಫರಿಯಾಗಿ ಆಯ್ಕೆಯಾದರು. ಅಂದಿನಿಂದ 2007ರ ಐಸಿಸಿ ಕ್ರಿಕೆಟ್ ವಿಶ್ವಕಪ್, 2009 ಮತ್ತು 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2012, 2014, 2016 ಮತ್ತು 2021ರಲ್ಲಿ ಐಸಿಸಿ ಟಿ20 ವಿಶ್ವಕಪ್‌ನ ಐಸಿಸಿ ಮ್ಯಾಚ್ ರೆಫರಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ 2023ರ ಏಷ್ಯಾ ಕಪ್‌ನಲ್ಲಿಯೂ ಐಸಿಸಿ ಮ್ಯಾಚ್ ರೆಫರಿಯಾಗಿದ್ದಾರೆ.
ಇಲ್ಲಿಯವರೆಗೆ ಜಾವಗಲ್ ಶ್ರೀನಾಥ್ 65 ಟೆಸ್ಟ್ ಪಂದ್ಯಗಳು, 118 ಪುರುಷರ ಟಿ20 ಪಂದ್ಯಗಳು ಮತ್ತು 16 ಮಹಿಳೆಯರ ಟಿ20 ಪಂದ್ಯಗಳಲ್ಲಿ ಐಸಿಸಿ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಒಟ್ಟಾರೆ 448 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಆಟಗಾರನಾಗಿ ಜಾವಗಲ್ ಶ್ರೀನಾಥ್ ಸಾಧನೆ
ಇನ್ನು ಸದ್ಯ 54 ವರ್ಷದ ಶ್ರೀನಾಥ್ ಅವರು ಭಾರತ ತಂಡಕ್ಕಾಗಿ 67 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 30.49ರ ಸರಾಸರಿಯಲ್ಲಿ 236 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ 10 ಬಾರಿ 5 ವಿಕೆಟ್ ಸಾಧನೆ ಮಾಡಿದ್ದರೆ, ಒಂದೇ ಪಂದ್ಯದಲ್ಲಿ 10 ಕಬಳಿಸಿದ್ದಾರೆ.

1999ರಲ್ಲಿ ಪಾಕಿಸ್ತಾನದ ವಿರುದ್ಧ ಇನಿಂಗ್ಸ್‌ನಲ್ಲಿ 86 ರನ್‌ಗೆ 8 ವಿಕೆಟ್ ಮತ್ತು ಪಂದ್ಯದಲ್ಲಿ 132 ರನ್‌ಗೆ 13 ವಿಕೆಟ್ ಅವರ ಅತ್ಯುತ್ತಮ ಅಂಕಿಅಂಶಗಳಾಗಿವೆ.
ಇನ್ನು ಜಾವಗಲ್ ಶ್ರೀನಾಥ್ 229 ಏಕದಿನ ಪಂದ್ಯಗಳಲ್ಲಿ 28.09ರ ಸರಾಸರಿಯಲ್ಲಿ 315 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೇ ವೇಳೆ ಏಳು ಬಾರಿ 4 ವಿಕೆಟ್ ಸಾಧನೆ ಮತ್ತು ಮೂರು ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ.
4.45ರ ಎಕಾನಮಿ ದರವನ್ನು ಗಳಿಸಿರುವ ಜಾವಗಲ್ ಶ್ರೀನಾಥ್, 1998ರಲ್ಲಿ ಬಾಂಗ್ಲಾದೇಶದ ವಿರುದ್ಧ 23 ರನ್‌ಗಳಿಗೆ ಐದು ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಅಂಕಿಅಂಶವಾಗಿದೆ.