
2022ರ ಟಿ20 ವಿಶ್ವಕಪ್‌ನಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಟೀಂ ಇಂಡಿಯಾ, ಸೂಪರ್ 12 ಹಂತದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದರು ಕೂಡ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸುವ ಮೂಲಕ ನಿರಾಸೆ ಅನುಭವಿಸಿತು.
ಭಾರತ ತಂಡದ ಪ್ರದರ್ಶನ ನೋಡಿದ್ದ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಸಾಕಷ್ಟು ಟೀಕೆ ಮಾಡಿದರು. ಆದರೆ, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರದರ್ಶನದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಭಾರತ ತಂಡದ ಸೋಲಿನಿಂದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ ಎಂದು ಆರ್ ಅಶ್ವಿನ್ ಒಪ್ಪಿಕೊಂಡಿದ್ದಾರೆ. "ಭಾರತ ತಂಡ ವಿಶ್ವಕಪ್ ಗೆಲ್ಲುವ ಹಂತದಲ್ಲಿ ಸೆಮಿ ಫೈನಲ್‌ನಲ್ಲಿ ಸೋತು ಹೊರಬಿದ್ದದ್ದನ್ನು ನೋಡಿ ಪ್ರತಿಯೊಬ್ಬರಿಗೂ ಬೇಸರವಾಗಿದೆ. ಕ್ಷಮೆ ಕೇಳುವುದರಿಂದ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಅದು ನಿರಾಶಾದಾಯಕ ಸಮಯವಾಗಿದೆ, ಅದನ್ನು ನಾವು ಮರೆಯಬೇಕು, ಮರೆತು ಮುಂದೆ ಸಾಗಬೇಕು" ಎಂದು ಹೇಳಿದ್ದಾರೆ.
ಸೆಮಿಫೈನಲ್ ತಲುಪುವುದನ್ನು ಕೂಡ ಸಾಧನೆ ಎಂದು ಪರಿಗಣಿಸಬಹುದು ಎಂದ ಅವರು ಭಾರತ ತಂಡದ ಅಭಿಮಾನಿಗಳು ತಂಡದ ಸಾಧನೆ ಬಗ್ಗೆ ಹೆಮ್ಮೆ ಪಡಬಹುದು ಎಂದು ಹೇಳಿದರು. ಸೆಮಿಫೈನಲ್‌ನಲ್ಲಿ ಸೋತಿದ್ದು ಟೀಂ ಇಂಡಿಯಾ ಆಟಗಾರರಿಗೂ ನಿರಾಸೆ ಉಂಟುಮಾಡಿದೆ ಎಂದು ಅವರು ಹೇಳಿದರು.

ಆಟಗಾರರಿಗೂ ಕೂಡ ಹೆಚ್ಚಿನ ನಿರಾಸೆಯಾಗಿದೆ
"ಭಾರತದ ಟಿ20 ವಿಶ್ವಕಪ್ ಅಭಿಯಾನ ನಿರಾಶಾದಾಯಕವಾಗಿತ್ತು ಎಂದು ಹೇಳಲಾಗದು. ನಾವು ಸೆಮಿ-ಫೈನಲ್‌ನಲ್ಲಿ ಸೋತಿದ್ದೇವೆ. ಆದರೆ, ಸೆಮಿ-ಫೈನಲ್ ಮತ್ತು ಫೈನಲ್ ತಲುಪುವುದನ್ನು ಕೂಡ ಸಾಧನೆ ಎಂದು ಪರಿಗಣಿಸಬಹುದು. ಆದರೆ, ಟೀಂ ಇಂಡಿಯಾ ಬಗ್ಗೆ ಅಭಿಮಾನಿಗಳು ಹೊಂದಿರುವ ಅಭಿಮಾನ, ತಂಡದ ಮೇಲೆ ಅವರು ಇಟ್ಟಿರುವ ನಿರೀಕ್ಷೆಗಳು, ಸೋತಾಗ ಅವರಿಗೆ ಆದ ನಿರಾಸೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ" ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
"ಈ ಬಾರಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗದ್ದಕ್ಕೆ ಅಭಿಮಾನಿಗಳು ಎಷ್ಟು ನಿರಾಸೆ ಅನುಭವಿಸಿದ್ದಾರೋ ಅದಕ್ಕಿಂತ 200-300 ಪಟ್ಟು ಆಟಗಾರರು ನಿರಾಶೆಗೊಂಡಿದ್ದಾರೆ" ಎಂದು ಅಶ್ವಿನ್ ಹೇಳಿದ್ದಾರೆ.
ಟಿ20 ವಿಶ್ವಕಪ್ ಅಭಿಯಾನ ಮುಕ್ತಾಯವಾದ ನಂತರ ಭಾರತ ತಂಡ ನ್ಯೂಜಿಲೆಂಡ್‌ಗೆ ಪ್ರವಾಸ ಮಾಡಿದೆ ಅಲ್ಲಿ ಮೂರು ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಪ್ರವಾಸದಲ್ಲಿ ಅಶ್ವಿನ್ ಸೇರಿದಂತೆ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಟಿ20 ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕನಾಗಿದ್ದಾರೆ. ಏಕದಿನ ಸರಣಿಯಲ್ಲಿ ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದಾರೆ.
ನವೆಂಬರ್ 18ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಬೇಕಿದ್ದ ಮೊದಲನೇ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ಎರಡನೇ ಪಂದ್ಯ ನವೆಂಬರ್ 20ರ ಭಾನುವಾರ ನಡೆಯಲಿದೆ.