ODI World Cup 2023: ವಿಶ್ವಕಪ್ ಗೆಲ್ಲಲು ಟೀಮ್ ಇಂಡಿಯಾ ರೆಡಿ: ಇಲ್ಲಿವೆ ನೋಡಿ ಪ್ರಮುಖ ಅಂಶಗಳು
ದ್ವೀಪ ರಾಷ್ಟ್ರದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ವಿಶ್ವಕಪ್‌ಗೆ ತಾನು ರೆಡಿ ಎಂದು ಸಾರಿ ಹೇಳಿದೆ. ಏಷ್ಯಾಕಪ್ ಫೈನಲ್‌ನಲ್ಲಿ ರೋಹಿತ್ ಪಡೆ ನೀಡಿದ ಪ್ರದರ್ಶನ ನಿಜಕ್ಕೂ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಏಷ್ಯಾ ಕಪ್ ಪ್ರದರ್ಶನ ನೋಡಿದ್ರೆ ಟೀಮ್ ಇಂಡಿಯಾ ಈ ಬಾರಿ ತವರಿನಲ್ಲಿ ನಡೆಯುವ ವಿಶ್ವಕಪ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಹಾಗಿದ್ರೆ, ಟೀಮ್ ಇಂಡಿಯಾಕ್ಕೆ ಚಾಂಪಿಯನ್ ಮುಕುಟ ತೊಡಿಸಲು ನೆರವಾಗುವ ಅಂಶಗಳು ಇಲ್ಲಿವೆ.

ಲಯಕ್ಕೆ ಮರಳಿರುವ ಬೌಲರ್ಸ್
ಏಷ್ಯಾಕಪ್‌ಗೆ ಮುನ್ನ ಜಸ್ಪ್ರೀತ್ ಬುಮ್ರಾ ಗಾಯದ ನಂತರ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬ ಪ್ರಶ್ನೆಗಳು ಇದ್ದವು. ಆದರೆ ಶ್ರೀಲಂಕಾದಲ್ಲಿ ಬುಮ್ರಾ ನೀಡಿರುವ ಪ್ರದರ್ಶನ ಅನುಮಾನಗಳಿಗೆ ಉತ್ತರ ನೀಡಿದೆ. ಪಾಕಿಸ್ತಾನದ ವಿರುದ್ಧ ಸೂಪರ್-4 ಹಂತದಲ್ಲಿ ವಿಕೆಟ್ ಕೂಡ ಪಡೆದರು. ನಂತರ ಶ್ರೀಲಂಕಾ ವಿರುದ್ಧದ ಸೂಪರ್-4 ಮತ್ತು ಫೈನಲ್ ನಲ್ಲಿ ಸೊಗಸಾದ ದಾಳಿ ಸಂಘಟಿಸಿದರು.
ಸಿರಾಜ್ ಬುಮ್ರಾಗೆ ಉತ್ತಮ ಸಾಥ್ ನೀಡಿದರು. ಫೈನಲ್ ನಲ್ಲಿ ಸಿರಾಜ್ ನೀಡಿದ ಪ್ರದರ್ಶನ ಇತಿಹಾಸದ ಪುಟ ಸೇರಿತು ಟೂರ್ನಿಯಲ್ಲಿ ಸಿರಾಜ್ ಭಾರತದ ಪರ ಗರಿಷ್ಠ 10 ವಿಕೆಟ್ ಕಬಳಿಸಿದರು. ಶಾರ್ದೂಲ್ ಅವರನ್ನು ಮೂರನೇ ವೇಗದ ಬೌಲರ್ ಆಗಿ ಬಳಸಿಕೊಂಡಿತು. ಅವರು ಪಾಕಿಸ್ತಾನ ಮತ್ತು ನೇಪಾಳ ವಿರುದ್ಧ ತಲಾ ಒಂದು ವಿಕೆಟ್ ಪಡೆದರು.
ಮಧ್ಯಮ ಓವರ್ ಗಳಲ್ಲಿ ಉತ್ತಮ ಬೌಲಿಂಗ್
ಟೀಂ ಇಂಡಿಯಾ ಮೊದಲ 10 ಓವರ್‌ಗಳಲ್ಲಿ ವಿಕೆಟ್‌ಗಳನ್ನು ಪಡೆಯುವ ಮೂಲಕ ಎದುರಾಳಿಗಳ ಮೇಲೆ ಒತ್ತಡವನ್ನು ಹೇರುತ್ತಲೇ ಇತ್ತು. ಆದರೆ ಮಧ್ಯಮ ಓವರ್‌ಗಳಲ್ಲಿ ಬೌಲರ್‌ಗಳು ಹೆಚ್ಚು ರನ್ ನೀಡುತ್ತಿದ್ದರು. ಏಷ್ಯಾಕಪ್‌ನಲ್ಲಿ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಅವರೊಂದಿಗೆ ಹಾರ್ದಿಕ್ ಪಾಂಡ್ಯ ಅವರ ಬಿಗುವಿನ ಬೌಲಿಂಗ್ ನಿರ್ವಹಣೆ ಮಾಡಿದರು. ಏಷ್ಯಾಕಪ್‌ನ 4 ಪಂದ್ಯಗಳಲ್ಲಿ ಕುಲದೀಪ್ ಬೌಲಿಂಗ್ ಮಾಡಿದ್ದಾರೆ. ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಉಳಿದ 2 ಪಂದ್ಯಗಳಲ್ಲಿ 5 ಮತ್ತು 4 ವಿಕೆಟ್ ಪಡೆದರು. ಮಧ್ಯಮ ಓವರ್‌ಗಳಲ್ಲಿ ಮತ್ತೊಮ್ಮೆ ಕುಲದೀಪ್ ತಂಡದ ಟ್ರಂಪ್ ಕಾರ್ಡ್ ಆಗಿ ಹೊರಹೊಮ್ಮಿದ್ದಾರೆ.
ಜಡೇಜಾ ಹೆಚ್ಚಾಗಿ ಸ್ಪಿನ್ ಪಿಚ್‌ಗಳ ಲಾಭ ಪಡೆದರು. ನೇಪಾಳ ವಿರುದ್ಧ 3 ವಿಕೆಟ್, ಶ್ರೀಲಂಕಾ ವಿರುದ್ಧದ ಸೂಪರ್-4 ಪಂದ್ಯದಲ್ಲಿ 2 ವಿಕೆಟ್ ಪಡೆದರು. ಫೈನಲ್ ನಲ್ಲಿ ಉಪನಾಯಕ ಹಾರ್ದಿಕ್ ಕೇವಲ 3 ರನ್ ನೀಡಿ 3 ವಿಕೆಟ್ ಪಡೆದರು. ಸೂಪರ್-4 ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧವೂ ಅವರು ಬಿಗಿಯಾಗಿ ಬೌಲಿಂಗ್ ಮಾಡಿದರು.
ಆರಂಭಿಕರ ಉತ್ತಮ ಬ್ಯಾಟಿಂಗ್
ಏಷ್ಯಾಕಪ್‌ಗೂ ಮುನ್ನ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಶುಭಮನ್ ಗಿಲ್ ನಿರಾಸೆ ಅನುಭವಿಸಿದ್ದರು. ಹೀಗಿರುವಾಗ ಅವರ ಜಾಗಕ್ಕೆ ಇಶಾನ್ ಕಿಶನ್ ಆಯ್ಕೆ ಮಾಡುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ ಶುಭಮನ್ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧ 2 ಅರ್ಧಶತಕಗಳನ್ನು ಗಳಿಸಿದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದರು.
ರೋಹಿತ್ ನೇಪಾಳ ವಿರುದ್ಧ 74 ರನ್ ಹಾಗೂ ಪಾಕಿಸ್ತಾನ ವಿರುದ್ಧ 58 ರನ್ ಗಳಿಸಿದರು. ಶ್ರೀಲಂಕಾ ವಿರುದ್ಧದ ಸೂಪರ್-4 ಹಂತದ ಪಂದ್ಯದಲ್ಲಿ ಕಠಿಣ ಪಿಚ್‌ನಲ್ಲಿ ಸತತ ಮೂರನೇ ಅರ್ಧಶತಕ ಗಳಿಸಿ ಮಿಂಚಿದರು. ರೋಹಿತ್ ಹೆಚ್ಚು ಶಾಂತ ಮತ್ತು ತಂತ್ರಗಾರಿಕೆಯನ್ನು ಮೈಗೂಡಿಸಿಕೊಂಡಂತೆ ಕಾಣುತ್ತಿತ್ತು. ಪಾಕಿಸ್ತಾನದ ವಿರುದ್ಧ 122 ರನ್ ಗಳಿಸುವ ಮೂಲಕ ವಿರಾಟ್ ಮತ್ತೊಮ್ಮೆ ತಮ್ಮ ಅತ್ಯುತ್ತಮ ಫಾರ್ಮ್ ಕಂಡು ಕೊಂಡರು.
ಮಧ್ಯಮ ಕ್ರಮಾಂಕದ ಸಮಸ್ಯೆ ದೂರ
ವಿಶ್ವಕಪ್‌ಗೂ ಮುನ್ನ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ಫಾರ್ಮ್ ಕಂಡುಕೊಂಡಿದ್ದಾರೆ. ಅನುಭವಿ ರಾಹುಲ್ ಮೊದಲ ಎರಡು ಪಂದ್ಯಗಳನ್ನು ಆಡಿರಲಿಲ್ಲ. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ತಮ್ಮ ಫಿಟ್ನೆಸ್ ಮತ್ತು ಫಾರ್ಮ್ ಎರಡನ್ನೂ ಸಾಬೀತುಪಡಿಸಿದರು. ವಿಕೆಟ್ ಕೀಪರ್ ಆಗಿ ಅದ್ಭುತ ಕ್ಯಾಚ್ ಗಳನ್ನು ಪಡೆದರು. ಇಶಾನ್ ಪಾಕಿಸ್ತಾನ ವಿರುದ್ಧದ 82 ರನ್‌ಗಳ ಇನ್ನಿಂಗ್ಸ್ ಕಟ್ಟಿ ತಂಡಕ್ಕೆ ನೆರವಾದರು. ಈ ಮೂಲಕ ನಂಬರ್-4 ಸ್ಥಾನಕ್ಕೆ ತಾವೇ ಅತ್ಯುತ್ತಮ ಆಯ್ಕೆ ಎಂದು ಸಾಬೀತು ಪಡಿಸಿದರು. ಇನ್ನು ಶ್ರೇಯಸ್ ಅಯ್ಯರ್ ಕುಡ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬುವ ಸೂಚನೆ ನೀಡಿದ್ದಾರೆ.
ಮಿಂಚುತ್ತಿರುವ ಆಲ್‌ರೌಂಡರ್ಸ್
ಟೀಮ್ ಇಂಡಿಯಾ ಈ ಬಾರಿ ವಿಶ್ವಕಪ್ ಗೆಲ್ಲ ಬೇಕು ಎಂದರೆ, ಆಲ್ ರೌಂಡರ್‌ಗಳ ಪ್ರದರ್ಶನ ಬಹು ಮುಖ್ಯ. ಏಷ್ಯಾ ಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ನೀಡಿದ ಪ್ರದರ್ಶನ ವಿಶ್ವಕಪ್ ಗೆಲುವಿನ ಆಸೆ ಚಿಗುರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications