ಜೂನ್ 29 ಶನಿವಾರ, ಭಾರತ ಇಂದು ಟಿ20 ವಿಶ್ವಕಪ್ 2024ರ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯ ಇಂದು ರಾತ್ರಿ 8 ಗಂಟೆಗೆ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್ ಮೈದಾನದಲ್ಲಿ ಆರಂಭವಾಗಲಿದೆ.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 10 ವರ್ಷಗಳಿಂದ ಗೆಲ್ಲದ ಐಸಿಸಿ ಪ್ರಶಸ್ತಿಯನ್ನು ವಶಪಡಿಸಿಕೊಳ್ಳಲು ಸಜ್ಜಾಗಿದೆ. ಉಭಯ ತಂಡಗಳು ಟಿ20 ವಿಶ್ವಕಪ್ 2024ರಲ್ಲಿ ಫೈನಲ್ ವರೆಗೆ ಸತತವಾಗಿ ಎಲ್ಲ ಪಂದ್ಯಗಳನ್ನು ಗೆದ್ದು ಬಂದಿವೆ.

ಆದರೆ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಹೆಚ್ಚು ಫೈನಲ್ ಪಂದ್ಯಗಳನ್ನು ಆಡಿದ ಅನುಭವದಿಂದಾಗಿ ಭಾರತವು ಮೇಲುಗೈ ಸಾಧಿಸಿದೆ. ಟೀಮ್ ಇಂಡಿಯಾಗೆ 17 ವರ್ಷಗಳ ನಂತರ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ಅವಕಾಶ ಸಿಕ್ಕಿದೆ. ಭಾರತ ಕೊನೆಯ ಬಾರಿಗೆ 2007 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಿತ್ತು.
ಮತ್ತೊಂದೆಡೆ, ದಕ್ಷಿಣ ಆಫ್ರಿಕಾಕ್ಕೆ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. 1998ರ ಚಾಂಪಿಯನ್ಸ್ ಟ್ರೋಫಿ ((ಐಸಿಸಿ ನಾಕ್-ಔಟ್ ಟ್ರೋಫಿ ) ಬಳಿಕ ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಐಸಿಸಿ ಟೂರ್ನಿಯ ಫೈನಲ್ ತಲುಪಿದೆ.
ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ ಒಟ್ಟು 6 ಪಂದ್ಯಗಳು ನಡೆದಿವೆ. ಟಿ20 ವಿಶ್ವಕಪ್‌ನಲ್ಲಿ ಭಾರತ 4 ಬಾರಿ ಗೆದ್ದೆರೆ, ದಕ್ಷಿಣ ಆಫ್ರಿಕಾ 2 ಪಂದ್ಯಗಳನ್ನು ಗೆದ್ದಿದೆ.
ಟಿ20 ವಿಶ್ವಕಪ್‌ನಲ್ಲಿ ಭಾರತ 7 ನಾಕೌಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 4 ಪಂದ್ಯಗಳನ್ನು ಗೆದ್ದು, 3ರಲ್ಲಿ ಸೋತಿದೆ. ಒಟ್ಟು ಈವರೆಗೆ ಏಕದಿನ ಮತ್ತು ಟಿ20 ಮಾದರಿಯಲ್ಲಿ 18 ವಿಶ್ವಕಪ್‌ಗಳು ನಡೆದಿದ್ದು, ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಗೆದ್ದಿದೆ.
ದಕ್ಷಿಣ ಆಫ್ರಿಕಾ ಈ ಹಿಂದೆ ಎರಡು ಬಾರಿ ಸೆಮಿಫೈನಲ್ ಪಂದ್ಯಗಳಲ್ಲಿ ಸೋತಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಯಾವಾಗಲೂ ಮೇಲುಗೈ ಸಾಧಿಸಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ ಒಟ್ಟು 26 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಭಾರತ 14 ಟಿ20 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 11ರಲ್ಲಿ ಗೆದ್ದಿದೆ.
2007ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಿತ್ತು. ಇದಲ್ಲದೇ 2014ರ ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ರನ್ನರ್ ಅಪ್ ಆಗಿತ್ತು. 2016 ಮತ್ತು 2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಸೋತಿತ್ತು. ಇದಲ್ಲದೇ 2009, 2010, 2012 ಮತ್ತು 2021ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಗುಂಪು ಹಂತದಲ್ಲೇ ಹೊರಗಿತ್ತು.
ಟೀಮ್ ಇಂಡಿಯಾ ಇದೀಗ ಮೂರನೇ ಬಾರಿಗೆ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದು, ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶ ಹೊಂದಿದೆ.
2009 ಮತ್ತು 2014ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಸೋತಿತ್ತು. 2007, 2010, 2012, 2016, 2021 ಮತ್ತು 2022 ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಗುಂಪು ಹಂತದಿಂದ ಹೊರಗುಳಿದಿತ್ತು. ನಾಕೌಟ್‌ನಲ್ಲಿ ಭಾರತದ ದಾಖಲೆಗಳು ದಕ್ಷಿಣ ಆಫ್ರಿಕಾಕ್ಕಿಂತ ಬಲಷ್ಠವಾಗಿದೆ.