
ಕೇಪ್‌ಟೌನ್, ಏಪ್ರಿಲ್ 3: ಭಾರತಕ್ಕೆ ಪ್ರವಾಸ ಬಂದು ಅರ್ಧದಿಂದಲೇ ತಾಯ್ನಾಡಿಗೆ ಮರಳಿರುವ ದಕ್ಷಿಣ ಆಫ್ರಿಕಾ ಕ್ರಿಕೆಟರ್ಸ್‌ಗೆ ಕೊರೊನಾವೈರಸ್ ಸೋಂಕು ಇಲ್ಲ. ಪ್ರೋಟಿಯಾಸ್‌ಗೆ ನಡೆಸಿದ ಕೊರೊನಾವೈರಸ್ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಎಂದು ಬಂದಿದೆ. ಮೂರು ಪಂದ್ಯಗಳ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಪ್ರವಾಸ ಬಂದಿತ್ತು.
ಭಾರತದಿಂದ ಮರಳಿದ ಬಹುತೇಕ ಎಲ್ಲಾ ಆಟಗಾರರನ್ನೂ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ. ಅವರೆಲ್ಲರ ಫಲಿತಾಂಶಗಳೂ ನೆಗೆಟಿವ್ ಎಂದು ಬಂದಿದೆ. ಪರೀಕ್ಷೆಗೆ ಒಳಗಾಗದ ಕೆಲವರಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಹೇಳಿದೆ.
ಭಾರತಕ್ಕೆ ದಕ್ಷಿಣ ಆಫ್ರಿಕಾದ ಪ್ರವಾಸದ ಆರಂಭಿಕ ಏಕದಿನ ಪಂದ್ಯ ಮಳೆಯಿಂದಾಗಿ ಟಾಸ್ ಕೂಡ ನಡೆಯದೆ ರದ್ದಾಗಿತ್ತು. ಇನ್ನುಳಿದ ಎರಡು ಪಂದ್ಯಗಳು ಕೊರೊನಾವೈರಸ್ ಭೀತಿಯಿಂದಾಗಿ ರದ್ದಾಯಿತು. ಅಲ್ಲಿಗೆ ಪ್ರವಾಸದ ಒಂದೂ ಪಂದ್ಯ ಆಡದೆ ಆಫ್ರಿಕಾ ತಂಡ ತವರಿಗೆ ವಾಪಸ್ಸಾಗುವಂತಾಗಿತ್ತು.
ಭಾರತದಿಂದ ಮಾರ್ಚ್ 18ಕ್ಕೆ ದಕ್ಷಿಣ ಆಫ್ರಿಕಾಕ್ಕೆ ಬಂದಿದ್ದ ಕ್ರಿಕೆಟಿಗರು ಗುರುವಾರಕ್ಕೆ (ಏಪ್ರಿಲ್ 2) 14 ದಿನಗಳ ಸೆಲ್ಫ್ ಐಸೊಲೇಶನ್ ಮುಗಿಸಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಲಾಕ್‌ಡೌನ್ ಇರುವುದರಿಂದ ಕ್ರಿಕೆಟಿಗರು ಇನ್ನೆರಡು ವಾರ ಲಾಕ್‌ಡೌನ್‌ಗೆ ಒಳಗಾಗಬೇಕಾಗಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಮುಖ್ಯ ವೈದ್ಯಾಧಿಕಾರಿ ಡಾ. ಶುಯೈಬ್ ಮಂಜ್ರಾ ಮಾಹಿತಿ ನೀಡಿದ್ದಾರೆ.