ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಸೋತ ನಂತರ ಭಾರತ ತಂಡ ಟೀಕೆಗಳನ್ನ ಎದುರಿಸುವಂತಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ಹೀನಾಯವಾಗಿ ಸೋತಿರುವುದು ಇದೇ ಮೊದಲು. ಅಲ್ಲದೆ, ರೋಹಿತ್ ಶರ್ಮ ಕೂಡ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. ರೋಹಿತ್ ಶರ್ಮಾ ಮೊದಲಿನಂತೆ ಬ್ಯಾಟಿಂಗ್ ನಲ್ಲಿ ಅಬ್ಬರಿಸುತ್ತಿಲ್ಲ.
ತವರಿನಲ್ಲಿ ನಡೆದ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ರೋಹಿತ್ ಶರ್ಮಾ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಈ ಕಳಪೆ ಪ್ರದರ್ಶನದಿಂದಾಗಿ ಭಾರತ ಉತ್ತಮ ಆರಂಭ ಪಡೆಯದೆ ಈ ಎರಡು ಟೆಸ್ಟ್ ಸರಣಿಗಳಲ್ಲಿ ಮುಗ್ಗರಿಸಿತ್ತು. ಆದರೆ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದಿದ್ದಾದರೂ, ನ್ಯೂಜಿಲೆಂಡ್ ವಿರುದ್ಧ 3-0 ಅಂತರದಲ್ಲಿ ವೈಟ್ ವಾಶ್ ಆಗಿದೆ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್ ತಲುಪುವ ಭಾರತದ ಹಾದಿ ಕಠಿಣವಾಗಿದೆ.

ಭಾರತಕ್ಕೆ ಡಬ್ಲ್ಯೂಟಿಸಿ ಫೈನಲ್ ಹಾದಿ ಸುಗಮವಾಗಬೇಕಾದರೆ, ನವೆಂಬರ್ 22 ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತವು ಕಾಂಗರೂ ತಂಡದ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-0 ಅಂತರದಲ್ಲಿ ಗೆಲ್ಲಬೇಕಾಗಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂತಹ ಸಂದರ್ಭದಲ್ಲಿ ರೋಹಿತ್ ಶರ್ಮ ನಂತರ ಭಾರತ ತಂಡವನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿವೆ. ಇತ್ತ ರೋಹಿತ್ ಶರ್ಮಾ ನಂತರ ಭಾರತ ಟೆಸ್ಟ್ ತಂಡದ ನಾಯಕರಾಗಲು ಮೂವರ ನಡುವೆ ಪೈಪೋಟಿ ಏರ್ಪಟ್ಟಿದೆ.
ಭಾರತದ ಮುಂದಿನ ಟೆಸ್ಟ್ ನಾಯಕನಾಗಲು ರಿಷಬ್ ಪಂತ್ ಮೊದಲ ಸ್ಪರ್ಧಿ ಆಗಿದ್ದಾರೆ. ರಿಷಬ್ ಪಂತ್ ಟೆಸ್ಟ್ ಮಾದರಿಯಲ್ಲಿ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಆಗಿ ಅದ್ಭುತ ದಾಖಲೆಗಳನ್ನು ಹೊಂದಿದ್ದಾರೆ. ಮೈದಾನದಲ್ಲಿ ಆಟಗಾರರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿದೆ. ರಿಷಬ್ ಪಂತ್ ಕೂಡ ಎಂಎಸ್ ಧೋನಿಯಂತೆ ನಾಯಕನಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ಅಲ್ಲದೆ, ರಿಷಬ್ ಪಂತ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ವಿದೇಶಿ ಪಿಚ್ ಗಳಲ್ಲಿ ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ ರಿಷಬ್ ಪಂತ್ ಅವರಿಗೆ ಭವಿಷ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ಅವಕಾಶವಿದೆ.

ಯುವ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ಭಾರತದ ಮುಂದಿನ ಟೆಸ್ಟ್ ನಾಯಕನಾಗುವ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು. 25 ವರ್ಷದ ಶುಭ್‌ಮನ್ ಗಿಲ್ ಅವರು ಕ್ಲಾಸಿಕ್ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಶುಭಮನ್ ಗಿಲ್ ಅವರ ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್‌ನ ಒಂದು ನೋಟವನ್ನು ಕಾಣಬಹುದು. ಶುಭಮನ್ ಗಿಲ್ ಅವರ ಪ್ರಸ್ತುತ ಪ್ರದರ್ಶನ ನೋಡಿದರೆ, ಮುಂದಿನ 10 ರಿಂದ 15 ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಬಹುದು. ಟೆಸ್ಟ್ ಕ್ರಿಕೆಟ್‌ನಲ್ಲಿ ಶುಭ್‌ಮನ್ ಗಿಲ್ ಅವರ ಭವಿಷ್ಯವು ತುಂಬಾ ಉಜ್ವಲವಾಗಿದೆ. ಇಂತಹ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾಕ್ಕೆ ನಾಯಕತ್ವದ ಪಾತ್ರವನ್ನೂ ವಹಿಸಬಹುದು. ಈಗಾಗಲೇ ಜಿಂಬಾಂಬೆ ಪ್ರವಾಸದಲ್ಲಿ ಭಾರತ ಟಿ20 ತಂಡದ ನಾಯಕತ್ವ ವಹಿಸಿದ್ದು, ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಭಾರತಕ್ಕೆ ಹೊಸ ಟೆಸ್ಟ್ ನಾಯಕನನ್ನು ಆಯ್ಕೆ ಮಾಡಬೇಕಾದರೆ ಜಸ್ಪ್ರೀತ್ ಬುಮ್ರಾ ಉತ್ತಮ ಆಯ್ಕೆ. ಜಸ್ಪ್ರೀತ್ ಬುಮ್ರಾ ಎಲ್ಲಾ ಮೂರು ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗದ ಅವಿಭಾಜ್ಯ ಅಂಗವಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಭಾರತ ಮಾತ್ರವಲ್ಲದೆ ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು. ನಾಯಕನಾಗಿ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪರ ದೊಡ್ಡ ಪಾತ್ರವನ್ನು ನಿರ್ವಹಿಸಬಲ್ಲರು. ಜಸ್ಪ್ರೀತ್ ಬುಮ್ರಾ ವಿಶ್ವದ ಯಾವುದೇ ಮೈದಾನದಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.