
ಇದೇ ಡಿಸೆಂಬರ್ 23ರಿಂದ ಯುಎಇನಲ್ಲಿ ಅಂಡರ್ 19 ತಂಡಗಳ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾಗವಹಿಸಲಿರುವ ಭಾರತೀಯ ಅಂಡರ್ 19 ತಂಡದ 20 ಆಟಗಾರರನ್ನು ಹೆಸರಿಲಾಗಿದೆ. ದೆಹಲಿಯ ಬ್ಯಾಟರ್ ಯಶ್ ಧುಲ್ ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ.
ಇನ್ನು ಈ ಮಹತ್ವದ ಟೂರ್ನಿಗೂ ಮುನ್ನ ಪೂರ್ವ ಸಿದ್ಧತಾ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಇದರಲ್ಲಿ ಒಟ್ಟು 25 ಆಟಗಾರರು ಭಾಗಿಯಾಗಲಿದ್ದು 20 ಸದಸ್ಯರ ಜೊತೆಗೆ ಐವರು ಮೀಸಲು ಆಟಗಾರರು ಕೂಡ ಈ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ. ಬಿಸಿಸಿಐ ಈ ಬಗ್ಗೆ ಪ್ರಕಟನೆಯಲ್ಲಿ ಮಾಹಿತಿಯನ್ನು ನೀಡಿದ್ದು ಇದರಲ್ಲಿ "ಆಲ್ ಇಂಡಿಯಾ ಜೂನಿಯರ್ ಆಯ್ಕೆ ಸಮಿತಿ ಎಸಿಸಿ ಅಂಡರ್ 19 ಏಷ್ಯಾಕಪ್‌ನಲ್ಲಿ ಭಾಗವಹಿಸಲಿರುವ 20 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ" ಎಂದು ಮಾಹಿತಿಯನ್ನು ನೀಡಿದೆ ಬಿಸಿಸಿಐ.
"ಏಷ್ಯಾ ಕ್ರಿಕೆಟ್ ಕೌನ್ಸಿಲ್ ಆಯೋಜಿಸುವ ಈ ಟೂರ್ನಿಗೂ ಮುನ್ನ ಡಿಸೆಂಬರ್ 11ರಿಂದ 19ರವರೆಗೆ ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗಿಯಾಗಲಿರುವ 25 ಸದಸ್ಯರನ್ನು ಕೂಡ ಹೆಸರಿಸಲಾಗಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ನಾಯಕನಾಗಿ ಆಯ್ಕೆಯಾಗಿರುವ ಯಶ್ ಧುಲ್ ಈ ವರ್ಷದ ಆರಂಭದಲ್ಲಿ ನಡೆದ ವಿನೂ ಮಂಕಡ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿ ಮಿಂಚಿದ್ದರು. ಡಿಡಿಸಿಎ ಪರವಾಗಿ ಆಡಿದ ಐದು ಪಂದ್ಯಗಳಲ್ಲಿ 75.50 ಸರಾಸರಿಯಲ್ಲಿ 302 ರನ್‌ಗಳಿಸಿದ್ದರು.
ಇನ್ನು ಇದೇ ಸಂದರ್ಭದಲ್ಲಿ ಬಿಸಿಸಿಐ ಮುಂದಿನ ವರ್ಷ ಜನವರಿ-ಫೆಬ್ರವರಿ ಅವಧಿಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಅಂಡರ್ 19 ವಿಶ್ವಕಪ್‌ಗೆ ತಡವಾಗಿ ತಂಡವನ್ನು ಘೋಷನೆ ಮಾಡುವುದಾಗಿ ತಿಳಿಸಿದೆ. ಏಷ್ಯಾಕಪ್‌ನ ಕಳೆದ ಎರಡು ಆವೃತ್ತಿಗಳಲ್ಲಿ ಸತತವಾಗಿ ಚಾಂಪಿಯನ್ ಆಗಿರುವ ಭಾರತ ಈ ಹಿಂದಿನ 8 ಆವೃತ್ತಿಗಳಲ್ಲಿ 6 ಆವೃತ್ತಿಗಳಲ್ಲಿ ಚಾಂಪಿಯನ್ ಆಗಿ ಮೆರೆದಿದೆ. 2012ರಲ್ಲಿ ಪಾಕಿಸ್ತಾನದ ಜೊತೆಗೆ ಟ್ರೋಫಿಯನ್ನು ಹಂಚಿಕೊಂಡಿತ್ತು.
ಭಾರತದ U-19 ಏಷ್ಯಾಕಪ್ ತಂಡ: ಹರ್ನೂರ್ ಸಿಂಗ್ ಪನ್ನು, ಆಂಗ್ಕ್ರಿಶ್ ರಘುವಂಶಿ, ಅಂಶ್ ಗೋಸಾಯಿ, ಎಸ್‌ಕೆ ರಶೀದ್, ಯಶ್ ಧುಲ್ (ನಾಯಕ), ಅನ್ನೇಶ್ವರ ಗೌತಮ್, ಸಿದ್ಧಾರ್ಥ್ ಯಾದವ್, ಕೌಶಲ್ ತಾಂಬೆ, ನಿಶಾಂತ್ ಸಿಂಧು, ದಿನೇಶ್ ಬಾನಾ (ವಿಕೆಟ್ ಕೀಪರ್), ಆರಾಧ್ಯ ಯಾದವ್ (ವಿಕೆಟ್ ಕೀಪರ್) , ರಾಜಂಗಡ್ ಬಾವಾ, ರಾಜವರ್ಧನ್ ಹಂಗರ್ಗೇಕರ್, ಗರ್ವ್ ಸಾಂಗ್ವಾನ್, ರವಿ ಕುಮಾರ್, ರಿಷಿತ್ ರೆಡ್ಡಿ, ಮಾನವ್ ಪರಾಖ್, ಅಮೃತ್ ರಾಜ್ ಉಪಾಧ್ಯಾಯ, ವಿಕ್ಕಿ ಓಸ್ತ್ವಾಲ್, ವಾಸು ವತ್ಸ
ಮೀಸಲು ಆಟಗಾರರು: ಆಯುಷ್ ಸಿಂಗ್ ಠಾಕೂರ್, ಉದಯ್ ಸಹರಾನ್, ಶಾಶ್ವತ್ ದಂಗ್ವಾಲ್, ಧನುಷ್ ಗೌಡ, ಪಿಎಂ ಸಿಂಗ್ ರಾಥೋಡ್.