IND vs BAN 2nd Test: ದಕ್ಷಿಣ ಆಫ್ರಿಕಾದ ದಾಖಲೆಯನ್ನು ಅಳಿಸಿದ ಟೀಮ್ ಇಂಡಿಯಾ
ಕಾನ್ಪುರ : ಟೀಮ್ ಇಂಡಿಯಾ ಕಾನ್ಪುರ ಅಂಗಳದಲ್ಲಿ ಅಮೋಘ ಪ್ರದರ್ಶನ ನೀಡಿ, ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದೆ. ಬಾಂಗ್ಲಾದೇಶ ನೀಡಿದ್ದ 95 ರನ್‌ಗಳ ಗುರಿಯನ್ನು ಮೂರು ವಿಕೆಟ್ ಕಳೆದುಕೊಂಡು ಮುಟ್ಟಿರುವ ರೋಹಿತ್ ಪಡೆ, ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಈ ಮೂಲಕ ಭಾರತ ತಂಡ ಇತಿಹಾಸದ ಪುಟದಲ್ಲಿ ಸ್ಥಾನವನ್ನು ಪಡೆದಿದೆ.
ಕಾನ್ಪುರ ನ ಗ್ರೀನ್ ಪಾರ್ಕ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯ ಐದನೇ ದಿನವಾದ ಮಂಗಳವಾರ ಭಾರತ ಮೊದಲಾವಧಿಯಲ್ಲಿ ಬಾಂಗ್ಲಾ ತಂಡದ ಎಂಟು ವಿಕೆಟ್‌ಗಳನ್ನು ಕಬಳಿಸಿ ಅಬ್ಬರಿಸಿತು. ಅಲ್ಲದೆ ಎರಡನೇ ಅವಧಿಯ ಆಟದಲ್ಲಿ ಕೆಚ್ಚೆದೆಯ ಆಟವನ್ನು ಆಡಿ ಗಮನ ಸೆಳೆಯಿತು. ಈ ಮೂಲಕ ಕಾನ್ಪುರ ನಲ್ಲಿ ಟೀಮ್ ಇಂಡಿಯಾ ಮತ್ತೊಂದು ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದೆ.

ತವರಿನಲ್ಲಿ 18ನೇ ಟೆಸ್ಟ್ ಸರಣಿ ಗೆಲುವು
ಟೀಮ್ ಇಂಡಿಯಾ ಈ ಸರಣಿ ಗೆಲುವಿನ ಮೂಲಕ ತವರಿನಲ್ಲಿ 18ನೇ ಸರಣಿ ಗೆಲುವಿನ ನಗೆ ಬೀರಿದೆ. ಈ ಮೂಲಕ ತವರಿನಲ್ಲಿ ಭಾರತ ತಂಡವನ್ನು ಬಗ್ಗು ಬಡೆಯುವುದು ಕಷ್ಟ ಎನ್ನುವ ರೀತಿ ಆಟವನ್ನು ಆಡಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ 233 ರನ್ ಸೇರಿಸಿತು. ಮೊದಲ ದಿನದಾಟದಲ್ಲಿ ಕೇವಲ 35 ಓವರ್‌ಗಳ ಆಟ ಮಾತ್ರ ನಡೆಯಿತು. ಎರಡನೇ ಹಾಗೂ ಮೂರನೇ ದಿನದಾಟ ಮಳೆಯಿಂದಾಗಿ ರದ್ದಾಯಿತು.
ಕೊನೆಯ ಎರಡು ದಿನ ಭಾರತದ ಮೆರೆದಾಟ
ನಾಲ್ಕನೇ ದಿನ ಪೂರ್ಣ ಆಟವಾಗಿದ್ದು, ಈ ವೇಳೆ ಬಾಂಗ್ಲಾ ಮೊದಲ ಇನಿಂಗ್ಸ್ ಪೂರ್ಣಗೊಳಿಸಿತು. ಅಲ್ಲದೆ ಟೀಮ್ ಇಂಡಿಯಾ ಟಿ20 ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ರನ್‌ಗಳನ್ನು ಗುಡ್ಡೆ ಹಾಕಿ ಅಲ್ಪ ಮುನ್ನಡೆಯೊಂದಿಗೆ 9 ವಿಕೆಟ್‌ಗೆ 285 ರನ್‌ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಬಾಂಗ್ಲಾದೇಶ ನಾಲ್ಕನೇ ದಿನ ತನ್ನ ಎರಡನೇ ಇನಿಂಗ್ಸ್ ಆರಂಭಿಸಿ 2 ವಿಕೆಟ್ ಕಳೆದುಕೊಂಡಿತು. ಮಂಗಳವಾರ ದಿನದಾಟದಲ್ಲಿ ಟೀಮ್ ಇಂಡಿಯಾ ಮೊದಲಾವಧಿಯಲ್ಲಿ ಬಾಂಗ್ಲಾ ತಂಡದ 8 ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿತು. ಭಾರತ ಪಂದ್ಯವನ್ನು ಎರಡನೇ ಅವಧಿಯಲ್ಲಿ ಗೆದ್ದು ಬೀಗಿತು.

ಗರಿಷ್ಠ ಗೆಲುವು ಸಾಧಿಸಿದ ತಂಡ ಯಾವುದು?
ಟೆಸ್ಟ್ ಕ್ರಿಕೆಟ್ ಇತಿಹಾದಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ಕೀರ್ತಿ ಆಸ್ಟ್ರೇಲಿಯಾ ತಂಡಕ್ಕೆ ಸೇರಿದೆ. ಆಸೀಸ್ ಒಟ್ಟು 866 ಪಂದ್ಯಗಳನ್ನು ಆಡಿದ್ದು, 414 ಗೆಲುವು ದಾಖಲಿಸಿದೆ. ಇನ್ನು ಕಾಂಗರೂ ಪಡೆ 232 ಸೋಲು ಕಂಡಿದ್ದು, 218 ಡ್ರಾ ಸಾಧಿಸಿ, ಅಗ್ರ ಸ್ಥಾನದಲ್ಲಿದೆ. ಅತಿ ಹೆಚ್ಚು ಟೆಸ್ಟ್ ಗೆಲುವು ದಾಖಲಿಸಿದ ತಂಡಗಳಲ್ಲಿ ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ಇದ್ದು, 1077 ಟೆಸ್ಟ್ ಪಂದ್ಯಗಳಲ್ಲಿ 397 ಗೆಲುವು ದಾಖಲಿಸಿದೆ. ಆಂಗ್ಲರ ಪಡೆ 25 ಸೋಲು ಹಾಗೂ 355 ಡ್ರಾ ಕಂಡಿದೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ತಂಡವಿದ್ದು 183 ಗೆಲುವು ದಾಖಲಿಸಿದೆ.
ದಕ್ಷಿಣ ಆಫ್ರಿಕಾ ದಾಖಲೆ ಉಡೀಸ್
ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 280 ರನ್‌ಗಳಿಂದ ಮಣಿಸಿದ್ದ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ 179 ಗೆಲುವು ದಾಖಲಿಸಿತ್ತು. ದಕ್ಷಿಣ ಆಫ್ರಿಕಾ ಸಹ ಟೆಸ್ಟ್ ಕ್ರಿಕೆಟ್‌ನಲ್ಲಿ 179 ಗೆಲುವು ದಾಖಲಿಸಿತ್ತು. ಕಾನ್ಪುರ ದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸುವ ಮೂಲಕ ದಕ್ಷಿಣ ಆಫ್ರಿಕಾ ದಾಖಲೆಯನ್ನು ಮೀರಿ ನಿಂತಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸೋಲಿಗಿಂತ, ಹೆಚ್ಚಿನ ಗೆಲುವು ದಾಖಲಿಸಿದ ಕೀರ್ತಿ ತನ್ನದಾಗಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications