ಮಹಿಳಾ ಟಿ20 ವಿಶ್ವಕಪ್: ಭರ್ಜರಿ ಪ್ರದರ್ಶನ ನೀಡಿದ ಭಾರತ, ಲಯಕ್ಕೆ ಮರಳಿದ ಸ್ಟಾರ್ ಆಟಗಾರ್ತಿಯರು
ದುಬೈ: ಮಹತ್ವದ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಭಾರತದ ವನಿತೆಯರು ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ 82 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿದೆ.
ಲೀಗ್ ಹಂತದ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 172 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಶ್ರೀಲಂಕಾ 19.5 ಓವರ್‌ಗಳಲ್ಲಿ 90 ರನ್ ಗಳಿಗೆ ಸರ್ವಪತನ ಕಂಡಿತು. ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಅಲ್ಲದೆ ತನ್ನ ನೆಟ್ ರನ್ ರೇಟ್ ಸಹ ಸುಧಾರಿಸಿಕೊಂಡಿದೆ.

ಪವರ್ ಪ್ಲೇನಲ್ಲಿ ಪವರ್ ಪ್ಯಾಕ್ ಆಟ
ಟೀಮ್ ಇಂಡಿಯಾದ ಅನುಭವಿ ಬೌಲರ್‌ಗಳು ಮಹತ್ವದ ಪಂದ್ಯದಲ್ಲಿ ಮನಮೋಹಕ ಬೌಲಿಂಗ್ ನಡೆಸಿದರು. ಶ್ರೀಲಂಕಾ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ವಿಶ್ಮಿ ಗುಣರತ್ನೆ, ಚಾಮರಿ ಅಟ್ಟಪಟ್ಟು, ಹರ್ಷಿತಾ ಸಮರವಿಕ್ರಮ ರನ್ ಕಲೆ ಹಾಕಲು ವಿಫಲರಾದರು. ಈ ಮೂವರು ಸ್ಟಾರ್ ಟಾಪ್ ಆರ್ಡರ್ ಬ್ಯಾಟರ್‌ಗಳನ್ನು ಟೀಮ್ ಇಂಡಿಯಾ ಪವರ್ ಪ್ಲೇನಲ್ಲೇ ಪೆವಿಲಿಯನ್ ಹಾದಿ ತೋರಿಸಿತು.
ಶ್ರೀಲಂಕಾ ತಂಡದ ಕವಿಶಾ ದಿಲ್ಹಾರಿ 21 ಹಾಗೂ ಅನುಷ್ಕಾ ಸಂಜೀವನಿ 20 ರನ್ ಸಿಡಿಸಿದರೂ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಅಮ ಕಾಂಚನಾ ಸಹ ಸಮಯೋಚಿತ ಆಟದ ಪ್ರದರ್ಶನ ನೀಡಿದರು. ಆದರೆ ತಂಡವನ್ನು ಗೆಲುವಿನ ಗೆರೆ ದಾಟಿಸುವಲ್ಲಿ ವಿಫಲರಾದರು.

ಆಶಾ, ಅರುಂಧತಿ ಕಮಾಲ್
ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಆಶಾ ಶೋಭನಾ ಲಂಕಾ ಬ್ಯಾಟರ್‌ಗಳನ್ನು ಕಾಡಿದರು. ಇವರು ನಾಲ್ಕು ಓವರ್‌ಗಳಲ್ಲಿ 19 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಇನ್ನು ಅರುಂಧತಿ ರೆಡ್ಡಿ ಸಹ ಮೂರು ವಿಕೆಟ್ ಉರುಳಿಸಿದರು. ವೇಗದ ಬೌಲರ್ ರೇಣುಕಾ ಸಿಂಗ್ 2 ವಿಕೆಟ್ ತಮ್ಮದಾಗಿಸಿಕೊಂಡರು. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ.
ಭರ್ಜರಿ ಆರಂಭ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಅಮೋಘವಾಗಿತ್ತು. ಟೀಮ್ ಇಂಡಿಯಾದ ಆರಂಭಿಕರಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಲಂಕಾ ಬೌಲರ್‌ಗಳನ್ನು ಕಾಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 98 ರನ್ ಕಾಣಿಕೆ ನೀಡಿತು. ಫಾರ್ಮ್ ಇಲ್ಲದೆ ಪರದಾಡುತ್ತಿದ್ದ ಸ್ಮೃತಿ ಮಂಧನಾ 38 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ 50 ರನ್ ಬಾರಿಸಿದರು. ಆರಂಭಿಕ ಶಫಾಲಿ ವರ್ಮಾ 43 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
ಟೀಮ್ ಇಂಡಿಯಾದ ನಾಯಕಿ ಹರ್ಮನ್ ಪ್ರೀತ್ ಕೌರ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಇವರು 27 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 52 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಶ್ರೀಲಂಕಾ ಪರ ಚಾಮರಿ ಅಟ್ಟಪಟ್ಟು ಹಾಗೂ ಅಮ ಕಾಂಚನಾ ತಲಾ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications