ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಆಂಡರ್ಸನ್, ತೆಂಡೂಲ್ಕರ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಲೀಡ್ಸ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್‌ಗಳ ಸೋಲು ಕಂಡ ಬಳಿಕ ಟೀಮ್ ಇಂಡಿಯಾ, ಎಡ್ಜ್‌ಬಸ್ಟನ್‌ನಲ್ಲಿ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಈ ಮೂಲಕ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ನಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಖಲಿಸಿದ ಮೊದಲ ಗೆಲುವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುವಂತೆ ಮಾಡಿದೆ. ಈಗಾಗಲೇ ಟೀಮ್ ಇಂಡಿಯಾ ಆಡಿದ 2 ಪಂದ್ಯಗಳಲ್ಲಿ ಒಂದು ಗೆಲುವು, ಒಂದು ಸೋಲನ್ನು ಕಂಡಿದೆ. ಈ ಮೂಲಕ 12 ಅಂಕಗಳನ್ನು ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಇನ್ನು ಇಂಗ್ಲೆಂಡ್ ತಂಡ ಸಹ ಇಷ್ಟೇ ಅಂಕ ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಸ್ಟ್ರೇಲಿಯಾ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ತಂಡವನ್ನು ಕಟ್ಟಿ ಹಾಕಿದೆ. ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ಕೇವಲ 143 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ 133 ರನ್ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಆಸೀಸ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಅಬ್ಬರಿಸಿತು. ಅಲ್ಲದೆ ಸರಣಿಯನ್ನು ವಶಕ್ಕೆ ಪಡೆಯಿತು. ಆಡಿದ 2 ಪಂದ್ಯಗಳನ್ನು ಗೆದ್ದ ಆಸ್ಟ್ರೇಲಿಯಾ 24 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.
ಅಂಕ ಪಟ್ಟಿಯಲ್ಲಿ ಶ್ರೀಲಂಕಾ ಎರಡನೇ ಸ್ಥಾನವನ್ನು ಹೊಂದಿದೆ. ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಲಂಕಾ ತಂಡ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ಬಾಂಗ್ಲಾದೇಶ ತಂಡ ಒಂದು ಡ್ರಾ ಸಾಧಿಸಿದ್ದು 4 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ತಂಡಗಳು ಈ ಚಾಂಪಿಯನ್ ಶಿಪ್ ಚಕ್ರದಲ್ಲಿ ಮೊದಲ ಗೆಲುವಿನ ಹುಡುಕಾಟ ನಡೆಸಿವೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಎರಡು ವರ್ಷಗಳ ಕಾಲ ನಡೆಯುತ್ತಿದೆ. ಈ ಚಾಂಪಿಯನ್ ಶಿಪ್ ಅಡಿಯಲ್ಲಿ ಆಡುವಾಗ ಒಂದು ಪಂದ್ಯವನ್ನು ಗೆದ್ದಲ್ಲಿ 12 ಅಂಕಗಳನ್ನು ಗಳಿಸುತ್ತದೆ. ಈ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನವನ್ನು ಪಡೆಯುವತ್ತ ಎಲ್ಲ ತಂಡಗಳು ಚಿತ್ತವನ್ನು ನೆಟ್ಟಿರಲಿವೆ. ಕಾರಣ ಅಗ್ರ ಎರಡು ಸ್ಥಾನಗಳನ್ನು ಪಡೆದ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯುತ್ತದೆ. ಭಾರತ ಈ ಟೂರ್ನಿಯ ಫೈನಲ್ ಪಂದ್ಯಕ್ಕೆ ಎರಡು ಬಾರಿ ಅರ್ಹತೆ ಪಡೆದಿತ್ತು. ಆದರೆ ಎರಡೂ ಬಾರಿ ಪ್ರಶಸ್ತಿ ಸುತ್ತಿನ ಕದಾಟದಲ್ಲಿ ನಿರಾಸೆ ಅನುಭವಿಸಿತ್ತು.