
ಶ್ರೀಲಂಕಾ ವಿರುದ್ಧ ಸದ್ಯ ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಟೀಮ್ ಇಂಡಿಯಾ ಆಟಗಾರರು ಈ ಸರಣಿಯ ಬಳಿಕ ಐಪಿಎಲ್‌ಗೆ ಸಿದ್ಧವಾಗಲಿದ್ದಾರೆ. ಐಪಿಎಲ್ 2022ರ ಟೂರ್ನಿ ಮುಕ್ತಾಯದ ಬಳಿಕ ಭಾರತೀಯ ತಂಡದ ಮತ್ತೊಂದು ಪ್ರಮುಖ ದ್ವಿಪಕ್ಷೀಯ ಟಿ20 ಸರಣಿಯನ್ನು ಆಡಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳದಿದ್ದರೂ ಬಿಸಿಸಿಐ ಅಧಿಕಾರಿಗಳು ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.
ಹೌದು, ಐಪಿಎಲ್ ಟೂರ್ನಿ ಮುಕ್ತಾಯವಾದ ಕೂಡಲೇ ಭಾರತ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧಧ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಐಪಿಎಲ್ ಆವೃತ್ತಿ ಅಂತ್ಯವಾದ 10 ದಿನಗಳಲ್ಲಿ ಈ ಸರಣಿ ಆರಂಭವಾಗಲಿದ್ದು ಐದು ಪಂದ್ಯಗಳ ಟಿ20 ಸರಣಿ ಇದಾಗಿರಲಿದೆ. ಕ್ರಿಕ್ ಬಜ್ ಮಾಹಿತಿಯ ಪ್ರಕಾರ ಈ ಪಂದ್ಯಗಳು ಕಟಕ್, ವೈಜಾಗ್, ದೆಹಲಿ, ರಾಜ್‌ಕೋಟ್ ಹಾಗೂ ಚೆನ್ನೈನಲ್ಲಿ ನಡೆಯಲಿದ್ದು ಜೂನ್ 9ರಿಂದ ಜೂನ್ 19ರ ಅವಧಿಯಲ್ಲಿ ಈ ಪಂದ್ಯಗಳು ಆಯೋಜೆನಯಾಗಲಿದೆ. ಈ ಸರಣಿಯ ಮುಕ್ತಾಯದ ಬಳಿಕ ಭಾರತ ಇಂಗ್ಲೆಂಡ್ ಪ್ರವಾಸವನ್ನು ಆರಂಭಿಸಲಿದೆ.
ಇನ್ನು ಬಿಸಿಸಿಐ ಅಧಿಕಾರಿಯೊಬ್ಬರು ಈ ಸರಣಿಯ ವಿಚಾರವಾಗಿ ಹೇಳಿಕೆಯನ್ನು ನೀಡಿದ್ದಾರೆ. "ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಬಾರಿಯ ಐಪಿಎಲ್ ಮಾರ್ಚ್ 26ರಿಂದ ಮೇ 29ರವರೆಗೆ ಪುಣೆ ಹಾಗೂ ಮುಂಬೈನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದೆ. ಈ ಟೂರ್ನಿ ಮುಕ್ತಾಯವಾದ 10 ದಿನಗಳ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ. ಇದು ಎಫ್‌ಟಿಪಿಯ ಭಾಗವಾಗಿದ್ದು ಐಪಿಎಲ್‌ನ ನಂತರವೇ ಆಡಿಸಲಾಗುತ್ತದೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮುಂದೂಡಿಕೆಯಾಗಿತ್ತು ಟಿ20 ಸರಣಿ: ಗಮನಾರ್ಹ ಸಂಗತಿಯೆಂದರೆ ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಹರಿಣಗ: ನಾಡಿನಲ್ಲಿ ಭಾರತ ಟಿ20 ಸರಣಿಯನ್ನು ಕೂಡ ಆಡಬೇಕಾಗಿತ್ತು. ಆದರೆ ಆ ಸಂದರ್ಭದಲ್ಲಿ ದಕ್ಷಿಣ ಆಪ್ರಿಕಾದಲ್ಲಿ ಕೊರೊನಾವೈರಸ್‌ನ ಹೊಸ ತಳಿ ಒಮೈಕ್ರಾನ್ ಅಬ್ಬರ ಹೆಚ್ಚಾಗಿದ್ದ ಕಾರಣ ಟಿ20 ಸರಣಿಯನ್ನು ಮುಂದೂಡಲಾಗಿತ್ತು. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಮಾತ್ರವೇ ಭಾಗಿಯಾಗಿದ್ದವು.
ಈ ದಕ್ಷಿಣ ಆಫ್ರಿಮಾ ಪ್ರವಾಸ ಭಾರತದ ಪಾಲಿಗೆ ಮಾತ್ರ ಅತ್ಯಂತ ಹೀನಾಯವಾಗಿತ್ತು. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಭಾರತ ಅದ್ಭುತವಾಗಿ ಗೆದ್ದುಕೊಂಡಿದ್ದರೂ ನಂತರ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಅದಾದ ಬಳಿಕ ನಡೆದ ಮೂರು ಪಂದ್ಯಗಳ ಏಕದಿನ ಸರನಿಯಲ್ಲಿಯೂ ಭಾರತ ಒಂದು ಪಂದ್ಯವನ್ನು ಕೂಡ ಗೆಲ್ಲು ಸಾಧ್ಯವಾಗಿರಲಿಲ್ಲ. 0-3 ಅಂತರದಿಂದ ವೈಟ್‌ವಾಶ್ ಅನುಭವಿಸಿತ್ತು. ಇದೀಗ ದಕ್ಷಿಣ ಆಫ್ರಿಕಾ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಕಾರಣ ಈ ಸೇಡಿಗೆ ಪ್ರತ್ಯುತ್ತರ ನೀಡಲು ಭಾರತಕ್ಕೆ ಉತ್ತಮ ಅವಕಾಶ ದೊರಕಿದಂತಾಗಿದೆ.