ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಭರ್ಜರಿ ಆಟದ ಪ್ರದರ್ಶನ ನೀಡಿದರೆ, ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಮೂರು ವಿಕೆಟ್ ಪಡೆದು ಅಬ್ಬರಿಸಿದರು. ಈ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಹಲವು ದಾಖಲೆಗಳನ್ನು ನಿರ್ಮಿಸಿದೆ.
ಗುರುವಾರ ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಪರ ಸಂಜು ಸ್ಯಾಮ್ಸನ್ (22) ಬೇಗನೆ ಔಟ್ ಆದರು. ಇಶಾನ್ ಕಿಶನ್ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರು 254ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದರು. ಇವರು 61 ರನ್ ಇನಿಂಗ್ಸ್ ಅಭಿಮಾನಿಗಳನ್ನು ರಂಜಿಸಿತು. ಹಾರ್ದಿಕ್ ಪಾಂಡ್ಯ ಸಹ ಅರ್ಧಶತಕ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 209 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ನಮೀಬಿಯಾ 18.2 ಓವರ್‌ಗಳಲ್ಲಿ 116 ರನ್ ಸೇರಿಸಿ ಸರ್ವಪತನ ಕಂಡಿತು. ಭಾರತದ ಪರ ವರುಣ್ ಚಕ್ರವರ್ತಿ ಮೂರು, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಕಬಳಿಸಿದರು.

ಟೀಮ್ ಇಂಡಿಯಾ ಈ ಪಂದ್ಯವನ್ನು 93 ರನ್‌ಗಳಿಂದ ಗೆಲ್ಲುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ದೊಡ್ಡ ದಾಖಲೆ ನಿರ್ಮಿಸಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದು ತಂಡದ ವಿರುದ್ಧ ದಾಖಲಿಸಿದ ಅತಿ ದೊಡ್ಡ ಅಂತರದ ಗೆಲುವು ಎಂಬ ಹೆಗ್ಗಳಿಕೆ ಭಾರತದ್ದಾಗಿದೆ. ಇದಕ್ಕೂ ಮೊದಲು 2012ರಲ್ಲಿ ಇಂಗ್ಲೆಂಡ್ ವಿರುದ್ಧ 90 ರನ್‌ಗಳ ಜಯ ದಾಖಲಿಸಿತ್ತು. ಇನ್ನು ಟಿ20 ವಿಶ್ವಕಪ್‌ನಲ್ಲಿ ಸತತ 10 ಜಯವನ್ನು ದಾಖಲಿಸಿ ಅಬ್ಬರಿಸಿದೆ. ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ನಾಲ್ಕನೇ ಬಾರಿಗೆ 200ಕ್ಕೂ ಹೆಚ್ಚು ರನ್ ಕಲೆ ಹಾಕಿದ ಕೀರ್ತಿಯನ್ನು ಪಡೆದಿದೆ.
ಈ ಪಂದ್ಯದಲ್ಲಿ ಭಾರತ ತಂಡ ಕೇವಲ 41 ಎಸೆತಗಳಲ್ಲಿ 100 ರನ್ ಗಳಿಸಿತು. ಈ ಮೂಲಕ ಟೀಮ್ ಇಂಡಿಯಾ ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದು, 12 ವರ್ಷಗಳ ಹಳೆಯ ನೆದರ್ಲ್ಯಾಂಡ್ಸ್ ದಾಖಲೆ ಅಳಿಸಿ ಹಾಕಿದೆ. ನೆದರ್ಲ್ಯಾಂಡ್ಸ್ 2014 ರಲ್ಲಿ ಐರ್ಲೆಂಡ್ ವಿರುದ್ಧ 42 ಎಸೆತಗಳಲ್ಲಿ ಅಥವಾ 7 ಓವರ್‌ಗಳಲ್ಲಿ 100 ರನ್ ಗಳಿಸಿತ್ತು. ಈ ದಾಖಲೆಯನ್ನು ಟೀಮ್ ಇಂಡಿಯಾ ಅಳಿಸಿದ್ದು ಈಗ ಹೊಸ ದಾಖಲೆ ನಿರ್ಮಿಸಿದೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಒಟ್ಟು 47 ಬಾರಿ 200ಕ್ಕೂ ಹೆಚ್ಚು ರನ್ ಕಲೆ ಹಾಕಿದ ಹಿರಿಮೆ ತನ್ನದಾಗಿಸಿಕೊಂಡಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಇನ್ನು ಮೂರು ಬಾರಿ 200ಕ್ಕೂ ಹೆಚ್ಚು ರನ್ ಬಾರಿಸಿದಲ್ಲಿ, 50ಕ್ಕೂ ಹೆಚ್ಚು ಬಾರಿ ಈ ಸಾಧನೆ ಮಾಡಿದ ಹಿರಿಮೆ ತನ್ನದಾಗಿಸಿಕೊಳ್ಳಲಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಚುಟುಕು ಕ್ರಿಕೆಟ್‌ನಲ್ಲಿ 29 ಬಾರಿ 200ಕ್ಕೂ ಹೆಚ್ಚು ರನ್ ಸಿಡಿಸಿದೆ.
ಭಾರತ ತನ್ನ ಲೀಗ್ ಹಂತದ ಮುಂದಿನ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಲಿದ್ದು, ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿದೆ. ಉಭಯ ತಂಡಗಳು ತಾವಾಡಿದ ಎರಡೂ ಪಂದ್ಯಗಳನ್ನು ಗೆದ್ದಿರುವುದರಿಂದ ಪಂದ್ಯ ರೋಚಕತೆ ಹೆಚ್ಚಿಸಿದೆ.