
ಬರ್ಮಿಂಗ್‌ಹ್ಯಾಮ್, ಜುಲೈ 01: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಜಯದ ದಡ ಮುಟ್ಟಿಸುವಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂ.ಎಸ್ ಧೋನಿ ವಿಫಲಗೊಂಡ ಬಳಿಕ ಎಂಎಸ್‌ಡಿ ಬ್ಯಾಟಿಂಗ್ ಕುರಿತಾಗಿ ಸಾಕಷ್ಟು ಚರ್ಚೆ ಆರಂಭವಾಗಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಕೊನೆಯ 10 ಓವರ್‌ಗಳಲ್ಲಿ ಭಾರತ ತಂಡದ ಗೆಲುವಿಗೆ 104 ರನ್‌ಗಳ ಅಗತ್ಯವಿತ್ತು. ಧೋನಿ ಅವರ ಸಾಮರ್ಥ್ಯಕ್ಕೆ ಈ ಗುರಿಯನ್ನು ಸುಲಭವಾಗಿ ಬೆನ್ನತ್ತಬಹುದಾಗಿತ್ತು ಎಂದು ಹಲವರು ಅಭಿಪ್ರಾಯ ಪಟ್ಟಿದ್ದರು. ಆದರೆ ಎಂಎಸ್ 31 ಎಸೆತಗಳಲ್ಲಿ 45 ರನ್‌ಗಳನ್ನು ಗಳಿಸಲಷ್ಟೇ ಶಕ್ತಗೊಂಡರು.
ಪಂದ್ಯದಲ್ಲಿ 338 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ ತನ್ನ ಪಾಲಿನ 50 ಓವರ್‌ಗಳಲ್ಲಿ ಕೇವಲ 5 ವಿಕೆಟ್ ಮಾತ್ರವೇ ಕಳೆದುಕೊಂಡು 306 ರನ್‌ಗನ್ನು ಗಳಿಸಿ 31 ರನ್‌ಗಳಿಂದ ಸೋಲುಂಡಿತು. ಇದು ಪ್ರಸಕ್ತ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಎದುರಾದ ಮೊದಲ ಸೋಲಾಗಿದೆ.
ಇದೇ ವೇಳೆ ಧೋನಿ ಅವರ ಬ್ಯಾಟಿಂಗ್ ಕುರಿಯಾಗಿ ಮಾತನಾಡಿರುವ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಸಂಜಯ್ ಮಾಂಜ್ರೆಕರ್, ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ಈಗಲಾದರೂ ಪಂದ್ಯಗಳನ್ನು ಗೆದ್ದುಕೊಡಲು ಧೋನಿ ಹೊರತಾಗಿ ಬೇರೆ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ ಎಂದಿದ್ದಾರೆ.
"ನನ್ನ ಉತ್ತರ ವಿಭಿನ್ನವಾಗಿರಲಿದೆ. ಟೀಮ್ ಇಂಡಿಯಾ ಪಂದ್ಯಗಳನ್ನು ಗೆಲ್ಲಲು ಕೇವಲ ಧೋನಿ ಕಡೆಗಷ್ಟೇ ವೀಕ್ಷಿಸಿದರೆ ಸಾಲದು. ಬೇರೆ ಆಟಗಾರರ ಕಡೆಗೂ ಗಮನ ನೀಡಬೇಕಿದೆ. ಕೆ.ಎಲ್ ರಾಹುಲ್ ಅವರಂತಹ ಆಟಗಾರರು ಉತ್ತಮ ಆರಂಭ ಪಡೆದು ವಿಕೆಟ್ ಕೈಚೆಲ್ಲುತ್ತಿರುವುದೇಕೆ ಎಂಬುದನ್ನು ಪ್ರಶಸ್ನಿಸಬೇಕಿದೆ. ಧೋನಿ ಅಭ್ಯಾಸ ಪಂದ್ಯಗಳಲ್ಲಿ ಆಡಿದ ರೀತಿಯಲ್ಲಿ ಆಡಿದರೆ ನಾನು ಅವರ ಬಹುದೊಡ್ಡ ಅಭಿಮಾನಿ,'' ಎಂದಿದ್ದಾರೆ.
"ಧೋನಿ ಮೊದಲಿಗೆ 30 ಎಸೆತಗಳಲ್ಲಿ 30 ರನ್‌ಗಳನ್ನು ಗಳಿಸುವ ಕಡೆಗೆ ಗಮನ ನೀಡಬೇಕು. ಟೀಮ್ ಮ್ಯಾನೇಜ್ಮೆಂಟ್ ಈ ವಿಚಾರವಾಗಿ ಅವರೊಂದಿಗೆ ಚರ್ಚಿಸಲಿ. ಪ್ರತಿ ಎಸೆತದಲ್ಲೂ ಧೋನಿ ರನ್ ಗಳಿಸುವಂತಾದರೆ ಇನಿಂಗ್ಸ್ ಅಂತ್ಯದಲ್ಲಿ ರನ್ ಗತಿ ಹೆಚ್ಚಿಸಲು ಸುಲಭವಾಗುತ್ತದೆ. ತಂಡ ಆರಂಭಿಕ ವಿಕೆಟ್ ಕಳೆದುಕೊಂಡಿದ್ದಾಗ ಧೋನಿ ನಿಧಾನವಾಗಿ ಆಡಿದರೆ ಅದು ಸೂಕ್ತ. ಆದರೆ, 25 ಓವರ್‌ಗಳು ಕಳೆದ ನಂತರವೂ ತಾಳ್ಮೆಯ ಆಟ ಸೂಕ್ತವಲ್ಲ,'' ಎಂದು ಭಾರತ ತಂಡದ ಪರ 37 ಟೆಸ್ಟ್ ಮತ್ತು 74 ಒಡಿಐ ಪಂದ್ಯಗಳನ್ನಾಡಿರುವ ಮಾಂಜ್ರೆಕರ್ ಅಭಿಪ್ರಾಯ ಪಟ್ಟಿದ್ದಾರೆ.