ಇದೇ ಡಿಸೆಂಬರ್ ಮೊದಲ ವಾರದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಕ್ರಿಕೆಟ್ ತಂಡ, ಬಹು-ಸ್ವರೂಪದ ಸರಣಿಯಲ್ಲಿ ಹರಿಣ ಪಡೆಯನ್ನು ಎದುರಿಸಲಿದೆ. ಇದೇ ವೇಳೆ ದಕ್ಷಿಣ ಆಫ್ರಿಕಾ ಸರಣಿಗೆ ಇಂದು (ನವೆಂಬರ್ 30, ಗುರುವಾರ) ಭಾರತ ತಂಡ ಪ್ರಕಟವಾಗುವ ಸಾಧ್ಯತೆ ಇದೆ.
ಮುಂಬರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿ ಗಮನದಲ್ಲಿಟ್ಟುಕೊಂಡು ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ವೈಟ್‌ಬಾಲ್ ಕ್ರಿಕೆಟ್ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧದ ವೈಟ್‌ಬಾಲ್ ಸರಣಿಯಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಬಯಸಿದ್ದಾರೆ ಎಂದು ವರದಿಯಾಗಿದ್ದು, ಟಿ20 ಸರಣಿಗೆ ನಾಯಕತ್ವ ವಹಿಸಿಕೊಳ್ಳುವಂತೆ ರೋಹಿತ್ ಶರ್ಮಾ ಅವರನ್ನು ಬಿಸಿಸಿಐ ಕೇಳಿಕೊಂಡಿದೆ ಎನ್ನಲಾಗಿದೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಮ್ ಇಂಡಿಯಾದ ಮೊದಲ ಪಂದ್ಯವು ಡಿಸೆಂಬರ್ 10ರಂದು ಪ್ರಾರಂಭವಾಗುತ್ತದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವುದರೊಂದಿಗೆ ಪ್ರವಾಸ ಪ್ರಾರಂಭಗೊಳ್ಳುತ್ತದೆ.
ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲ ಪಂದ್ಯಕ್ಕೆ ಎರಡು ವಾರಗಳು ಬಾಕಿ ಉಳಿದಿಲ್ಲ. ಹೀಗಾಗಿ ಅಜಿತ್ ಅಗರ್ಕರ್ ನೇತೃತ್ವದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯು ಒಂದು ತಿಂಗಳ ಅವಧಿಯ ಪ್ರವಾಸಕ್ಕೆ ತಂಡವನ್ನು ಒಂದೆರಡು ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಮುಂದಿನ ವರ್ಷ ಜೂನ್‌ನಲ್ಲಿ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನೊಂದಿಗೆ ಟಿ20 ಪಂದ್ಯಗಳಲ್ಲಿ ತಂಡ ಮತ್ತು ಭಾರತದ ಮಾರ್ಗಸೂಚಿಯನ್ನು ಚರ್ಚಿಸಲು ದೆಹಲಿಯಲ್ಲಿ ಗುರುವಾರ ಸಭೆ ಸೇರುವ ಸಾಧ್ಯತೆಯಿದೆ.
ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕತ್ವ ವಿಚಾರವು ಇಂದಿನ ಸಭೆಯಲ್ಲಿ ದೊಡ್ಡ ಪ್ರಶ್ನೆ ಮತ್ತು ಚರ್ಚೆಯ ವಿಷಯವಾಗಿದೆ. ಭಾರತದ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಗಾಯದಿಂದ ಬಳಲುತ್ತಿದ್ದಾರೆ. ಸದ್ಯ ಸೂರ್ಯಕುಮಾರ್ ಯಾದವ್ ತವರಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧ ಟಿ20 ತಂಡವನ್ನು ಮುನ್ನಡೆಸುತ್ತಿದ್ದಾರೆ.
ಪಿಟಿಐ ವರದಿಯ ಪ್ರಕಾರ, ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಟಿ20 ನಾಯಕನಾಗಿ ಮರಳಿಸಲು ಬಯಸುತ್ತದೆ. ಆದರೆ ಹಾರ್ದಿಕ್ ಪಾಂಡ್ಯ ಪುನರಾಗಮನ ಮಾಡಿದ ಬಳಿಕ ಏನಾಗಲಿದೆ ಎಂಬುದು ಕುತೂಹಲಕಾರಿ ಪ್ರಶ್ನೆಯಾಗಿದೆ. ಸದ್ಯಕ್ಕೆ ಸೂರ್ಯಕುಮಾರ್ ಮತ್ತು ರೋಹಿತ್ ಶರ್ಮಾ ಎರಡು ಹೆಸರುಗಳಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಯಲ್ಲಿ ನಾಯಕತ್ವದ ಬಗ್ಗೆ ಚರ್ಚಿಸಲಾಗುತ್ತದೆ.
ರೋಹಿತ್ ಶರ್ಮಾ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಪೂರ್ಣ ಸಮಯದ ನಾಯಕನಾಗಿ ಮರಳುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ವೈಟ್‌ಬಾಲ್ ಸರಣಿಯಿಂದ ವಿರಾಟ್ ಕೊಹ್ಲಿ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ. ಆದರೆ ರೋಹಿತ್ ಶರ್ಮಾ ಇನ್ನೂ ಯಾವುದನ್ನೂ ಖಚಿತಪಡಿಸಿಲ್ಲ.
ರೋಹಿತ್ ಶರ್ಮಾ ಈ ವರ್ಷ ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಅದ್ಭುತವಾಗಿ ಮುನ್ನಡೆಸಿದರು ಮತ್ತು ಬಿಸಿಸಿಐ ಅವರನ್ನು ನಾಯಕನಾಗಿ ಉಳಿಸಿಕೊಳ್ಳುವ ಸಾಧ್ಯತೆಯಿದೆ.
ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ಮತ್ತು ಫಿಟ್ ಆಗಿರುವ ಕಾರಣ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಅವರು ಟೆಸ್ಟ್ ಆಡುವ 11ರ ಬಳಗದಲ್ಲಿ ಹಿಂತಿರುಗುವ ನಿರೀಕ್ಷೆಯಿದೆ. ಟೆಸ್ಟ್ ಸರಣಿಯಲ್ಲೂ ಕೆಎಲ್ ರಾಹುಲ್‌ಗೆ ವಿಕೆಟ್ ಕೀಪಿಂಗ್ ನೀಡುವ ಸಾಧ್ಯತೆ ಇದೆ.
ಇನ್ನು ಶ್ರೇಯಸ್ ಅಯ್ಯರ್ ಹಿಂತಿರುಗಿದರೆ, ಅಜಿಂಕ್ಯ ರಹಾನೆ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಿದ ನಂತರ ಎಲ್ಲದಕ್ಕೂ ತೆರೆ ಬೀಳಲಿದೆ.
ಭಾರತ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಗುತ್ತಿಗೆಯನ್ನು ವಿಸ್ತರಿಸಲಾಗಿದೆ ಎಂದು ಬಿಸಿಸಿಐ ಖಚಿತಪಡಿಸಿದೆ. ವಿಸ್ತರಣೆಯ ವಿವರಗಳನ್ನು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿಲ್ಲ.
ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಉಳಿದುಕೊಂಡಿರುವುದರಿಂದ, ಪ್ರಸ್ತುತ ಕೋಚಿಂಗ್ ಸಿಬ್ಬಂದಿಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಅವರು ಬಯಸುವುದಿಲ್ಲ. ವಿಕ್ರಮ್ ರಾಥೋರ್ ಬ್ಯಾಟಿಂಗ್ ಕೋಚ್ ಆಗಿ, ಪಾರಸ್ ಮಾಂಬ್ರೆ ಬೌಲಿಂಗ್ ಕೋಚ್ ಮತ್ತು ಟಿ ದಿಲೀಪ್ ಅವರು ಫೀಲ್ಡಿಂಗ್ ಕೋಚ್ ಆಗಿ ಮುಂದುವರೆಯಲಿದ್ದಾರೆ.
ಭಾರತದ ಪ್ರವಾಸವು ಟಿ20 ಸರಣಿಯೊಂದಿಗೆ ಪ್ರಾರಂಭವಾಗುತ್ತದೆ. ಮೊದಲ ಪಂದ್ಯ ಡಿಸೆಂಬರ್ 10ರಂದು ಡರ್ಬನ್‌ನಲ್ಲಿ ನಡೆಯಲಿದೆ. ಎರಡನೇ ಟಿ20 ಡಿಸೆಂಬರ್ 12ರಂದು ಗ್ಕೆಬರ್ಹಾದಲ್ಲಿ ಮತ್ತು ಮೂರನೇ ಟಿ20 ಪಂದ್ಯವು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ.
ಏಕದಿನ ಪಂದ್ಯಗಳು ಡಿಸೆಂಬರ್ 17ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಮೊದಲ ಪಂದ್ಯದೊಂದಿಗೆ ಪ್ರಾರಂಭವಾಗುತ್ತದೆ. ಎರಡನೇ ಪಂದ್ಯ ಗ್ಕೆಬರ್ಹಾ ಮತ್ತು ಮೂರನೇ ಪಂದ್ಯವು ಪಾರ್ಲ್‌ನಲ್ಲಿ ನಡೆಯಲಿದೆ.
ಡಿಸೆಂಬರ್ 26ರಿಂದ 30ರವರೆಗೆ ಸೆಂಚುರಿಯನ್‌ನಲ್ಲಿ ಮತ್ತು ಜನವರಿ 3ರಿಂದ 7ರವರೆಗೆ ಕೇಪ್ ಟೌನ್‌ನಲ್ಲಿ ಟೆಸ್ಟ್ ಪಂದ್ಯಗಳು ನಡೆಯಲಿವೆ.