ಆಗಸ್ಟ್ 5 ಸೋಮವಾರ, ಗೌತಮ್ ಗಂಭೀರ್ ಅವರ ಕೋಚಿಂಗ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿರುವ ಭಾರತ ತಂಡ ಅಭಿಯಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಭಾರತ ಟೈ ಮಾಡಿಕೊಂಡಿತ್ತು.
ಇದಾದ ಬಳಿಕ ಎರಡನೇ ಪಂದ್ಯದಲ್ಲೂ ಭಾರತದ ಸೋಲು ಗಂಭೀರ್ ಅವರ ಕೋಚಿಂಗ್ ಮೇಲೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದೀಗ ಗಂಭೀರ್ ತಮ್ಮ ಕೋಚಿಂಗ್ ಅವಧಿಯಲ್ಲಿ ಮೊದಲ ಸರಣಿ ಸೋಲಿನ ಕಳಂಕವನ್ನು ಹೊರುವ ಮೊದಲು ತಂಡದ ಪ್ಲೇಯಿಂಗ್-11 ನಲ್ಲಿ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ.

ಮೊದಲ ಪಂದ್ಯಕ್ಕೆ ಹೋಲಿಸಿದರೆ ಎರಡನೇ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸ್ಥಾನದಲ್ಲಿ ಬದಲಾವಣೆಯಾಗಿತ್ತು. ಶಿವಂ ದುಬೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದರು.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ದುಬೆಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಇನ್ನೊಂದೆಡೆ ಕೆಎಲ್ ರಾಹುಲ್ ಕೂಡ ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಗಂಭೀರ್ ಶಿಷ್ಯ ಎಂದೇ ಹೆಸರು ಪಡೆದಿರುವ ಶ್ರೇಯಸ್ ಅಯ್ಯರ್ ಸಹಾ ಕೇವಲ 7 ರನ್ ಗಳಿಸಿ ಔಟಾದರು.
ಇದೀಗ ಈ ಮೂವರು ಬ್ಯಾಟರ್ಸ್ ಗಂಭೀರ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ಈ ಮೂವರಲ್ಲಿ ಯಾರನ್ನು ಪ್ಲೇಯಿಂಗ್-11 ನಿಂದ ಗಂಭೀರ್ ಹೊರಗೆ ಇಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಬಗ್ಗೆ ಸಹಾಯಕ ಕೋಚ್ ಅಭಿಷೇಕ್ ನಾಯರ್ ಕೂಡ ಮೌನ ಮುರಿದಿದ್ದಾರೆ.
ಟೀಮ್ ಇಂಡಿಯಾದ ಬ್ಯಾಟಿಂಗ್ ಸ್ಥಾನದ ಬಗ್ಗೆ ಮಾಹಿತಿ ನೀಡಿರುವ ಅಭಿಷೇಕ್ ನಾಯರ್, 'ನಾವು ಸುಧಾರಣೆಯ ಅಗತ್ಯವಿರುವ ವಿಷಯಗಳತ್ತ ಗಮನ ಹರಿಸಬೇಕು. ಸತತ ಎರಡನೇ ಪಂದ್ಯಕ್ಕೆ ಯಾಕೆ ಹೀಗಾಯಿತು ಎಂದು ಯೋಚಿಸಬೇಕು.
ಮೊದಲ ಪಂದ್ಯದಲ್ಲಿ ಸ್ವಲ್ಪ ಮಟ್ಟಿಗೆ ಜೊತೆಯಾಟ ಆಡುವಲ್ಲಿ ಯಶಸ್ವಿಯಾಗಿದ್ದೆವು, ಆದರೆ ಈ ಪಂದ್ಯದಲ್ಲಿ ಸತತವಾಗಿ ವಿಕೆಟ್ ಕಳೆದುಕೊಂಡೆವು. ವಿವಿಧ ಹಂತಗಳಲ್ಲಿ ಆಡುವಾಗ ಬ್ಯಾಟಿಂಗ್ ಸ್ಥಾನವು ಮುಖ್ಯವಾಗಿದೆ.
ಮಧ್ಯಮ ಓವರ್‌ಗಳಲ್ಲಿ ನಾವು ವಿಕೆಟ್ ಕಳೆದುಕೊಳ್ಳುದ್ದೇವೆ. ಈ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟರ್ಸ್ ಕ್ರೀಸ್‌ನಲ್ಲಿದ್ದು, ಬ್ಯಾಟಿಂಗ್ ಮಾಡುತ್ತಿದ್ದರೆ ಬ್ಯಾಟಿಂಗ್ ಸ್ಥಾನ ಬದಲಾವಣೆ ಮಾಡುವ ನಿರ್ಧಾರ ಸರಿಯಾಗಿದೆ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ 2025ರ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಕೆಟ್ ಕೀಪರ್ ಮತ್ತು ಬ್ಯಾಟರ್ಸ್ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಮೊದಲೆರಡು ಏಕದಿನ ಪಂದ್ಯಗಳಲ್ಲಿ ಕೆಎಲ್ ರಾಹುಲ್ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಫಿಟ್‌ನೆಸ್ ಸಮಸ್ಯೆಗಳಿಲ್ಲದಿದ್ದರೆ, ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ರಾಹುಲ್ ಬದಲಿಗೆ ರಿಷಬ್ ಪಂತ್ ಅವರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
ಮಧ್ಯಮ ಕ್ರಮಾಂಕದಲ್ಲಿ ಟೀಮ್ ಇಂಡಿಯಾ ಪರ ಪಂತ್ ಅವರ ಪುನರಾಗಮನ ಮೌಲ್ಯಯುತವಾಗಿದೆ. ಟೀಮ್ ಇಂಡಿಯಾ ಆಗಸ್ಟ್ 7 ರಂದು ಸರಣಿಯ ಮಾಡು ಇಲ್ಲವೇ ಮಡಿ ಪಂದ್ಯವನ್ನು ಆಡಲಿದೆ.