ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಜಯ ಸಾಧಿಸಿ, ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎರಡನೇ ಟೆಸ್ಟ್‌ಗೆ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಈ ವೇಳೆ ಈ ಟೆಸ್ಟ್ ಟೀಮ್ ಇಂಡಿಯಾದ ಹಲವು ಸ್ಟಾರ್ ಆಟಗಾರರಿಗೆ ಮಹತ್ವದಾಗಿದೆ. ಹಾಗಿದ್ದರೆ, ಈ ಪಂದ್ಯ ಏಕೆ ಮಹತ್ವದಾಗಿದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಆಡಿಲೇಡ್‌ನಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾದ ಹಲವು ಆಟಗಾರರು ಎದುರು ನೋಡುತ್ತಿದ್ದಾರೆ. ಈ ಪಂದ್ಯದಲ್ಲಿ ಮಿಂಚಲು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಪಿಂಕ್ ಬಾಲ್ ಹೇಗೆ ವರ್ತನೆ ಮಾಡುತ್ತದೆ ಎಂದು ಅನುಭವಿಗಳಿಂದ ಸಲಹೆ ಪಡೆಯುತ್ತಿದ್ದಾರೆ. ಈಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಎರಡನೇ ಟೆಸ್ಟ್, ಉಭಯ ದೇಶಗಳ ನಡುವಣ ಎರಡನೇ ಟೆಸ್ಟ್ ಆಗಿದೆ. ಈ ಮೊದಲು ಇದೇ ಅಂಗಳದಲ್ಲಿ ಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ನಡೆಸಲಾಗಿತ್ತು.

ಡೇ-ಆಂಡ್ ನೈಟ್ ಟೆಸ್ಟ್ ಇತಿಹಾಸ ದೊಡ್ಡದಲ್ಲ. ಇತ್ತೀಚಿಗೆ 2015ರಲ್ಲಿ ಈ ಟೆಸ್ಟ್ ಆರಂಭಿಸಲಾಯಿತು. ಟೆಸ್ಟ್ ಕ್ರಿಕೆಟ್ ಉತ್ತೇಜಿಸಲು ಈ ಪ್ರಯೋಗ ಮಾಡಲಾಯಿತು. ಮೊದಲ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಆಸೀಸ್ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಿದ್ದವು. ಭಾರತ ಸಹ ನಾಲ್ಕು ಡೇ ಆಂಡ್ ನೈಟ್ ಟೆಸ್ಟ್ ಆಡಿದೆ. ಈ ಲೆಕ್ಕಾಚಾರದಲ್ಲಿ ಆಸೀಸ್ ಹೆಚ್ಚು ಪಂದ್ಯಗಳನ್ನು ಆಡಿದ್ದು, ಗೆಲುವಿನ ಶೇಕಡಾವಾರು ಸಹ ಹೆಚ್ಚಾಗಿದೆ.
ಟೀಮ್ ಇಂಡಿಯಾದ ಐವರು ಆಟಗಾರರಿಗೆ ಆಡಿಲೇಡ್‌ನಲ್ಲಿ ನಡೆಯಲಿರುವ ಡೇ ಆಂಡ್ ನೈಟ್ ಟೆಸ್ಟ್ ಮೊದಲ ಅನುಭವ. ಹೌದು ಟೀಮ್ ಇಂಡಿಯಾದ ಪರ ಈಗಾಗಲೇ ಭರವಸೆ ಮೂಡಿಸಿರುವ ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್ ಸಹ ಇನ್ನೂವರೆಗೂ ಒಂದೇ ಒಂದು ಡೇ-ಆಂಡ್ ನೈಟ್ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಹೀಗಾಗಿ ಈ ಆಟಗಾರರಿಗೆ ಇದು ಹೊಸ ಅನುಭವ ಆಗಿರಲಿದೆ.
ಇನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡುವ ಅವಕಾಶವನ್ನು ಪಡೆದಿರುವ ನಿತೀನ್ ಕುಮಾರ್ ರೆಡ್ಡಿ ಹಾಗೂ ಹರ್ಷಿತ್ ರಾಣಾ ಅವರಿಗೂ ಹೊಸ ಅನುಭವ. ಭಾರತ ತಂಡದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಭರವಸೆ ಮೂಡಿಸಿರುವ ಆಟಗಾರ ಯಶಸ್ವಿ ಜೈಸ್ವಾಲ್ ಗೂ ಇದು ಮೊದಲ ಡೇ-ಆಂಡ್ ನೈಟ್ ಟೆಸ್ಟ್. ಹೀಗಾಗಿ ಹೆಚ್ಚಿನ ಕುತೂಹಲ ಮನೆ ಮಾಡಿದೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಡಿಯಲ್ಲಿ ಆಡಲಾಗಿತ್ತಿರುವ ಈ ಸರಣಿ ಉಭಯ ತಂಡಗಳಿಗೂ ಮಹತ್ವದಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯುವ ಕನಸು ಕಾಣುತ್ತಿದೆ. ಇನ್ನು ಆಸೀಸ್ ಸಹ ಎರಡನೇ ಟೆಸ್ಟ್ ಗೆದ್ದು ಗೆಲುವಿನ ಟ್ರ್ಯಾಕ್‌ಗೆ ಮರಳಲು ಸಕಲ ರೀತಿಯಲ್ಲಿ ಸಿದ್ಧವಾಗಿದೆ. ಎರಡನೇ ಪಂದ್ಯದಲ್ಲಿ ವಿಜಯ ಲಕ್ಷ್ಮಿ ಯಾರತ್ತ ವಾಲುತ್ತಾಳೆ ಎಂಬುದೇ ಕುತೂಹಲ ಮೂಡಿಸಿದೆ.