
ಭಾರತ ಈ ಬಾರಿ ಟಿ20 ವಿಶ್ವಕಪ್‌ನ ಆತಿಥ್ಯವನ್ನು ವಹಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತದ ನೆಲದಲ್ಲಿ ಕೆಲ ಪ್ರಮುಖ ದ್ವಿಪಕ್ಷೀಯ ಸರಣಿಗಳು ಆಯೋಜನೆಯಾಗುವ ಸಂಭವವಿದೆ. ಈಗಿನ ಬೆಳವಣಿಯ ಪ್ರಕಾರ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿ ಆಯೋಜನೆಯಾಗುವ ಸಾಧ್ಯತೆಗಳು ಇದೆ ಎಂದು ವರದಿಯಾಗಿದೆ.
ಮುಂಬರುವ ಅಕ್ಟೋಬರ್ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಭಾರತಕ್ಕೆ ಆಗಮಿಸಿ ದ್ವಿಪಕ್ಷೀಯ ಸರಣಿಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ವಿಶ್ವಕಪ್‌ಗೆ ತಯಾರು ನಡೆಸುವ ಹಿನ್ನೆಲೆಯಲ್ಲಿ ಈ ಸಾಲು ಸಾಲು ದ್ವಿಪಕ್ಷೀಯ ಟಿ20 ಸರಣಿಗಳತ್ತ ಚಿತ್ತ ನೆಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
"ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಭಾರತಕ್ಕೆ ಬಂದು ಟಿ20 ಸರಣಿಯಲ್ಲಿ ಪಾಲ್ಗೊಳ್ಳುವುದು ನಿರ್ಧಾರವಾಗಿದೆ. ರೂಪುರೇಶೆಗಳನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ವಿಶ್ವಕಪ್ ಆರಂಭಕ್ಕೂ ಮುನ್ನ ತಂಡ ಉತ್ತಮ ಲಯದಲ್ಲಿರಬೇಕು ಎಂಬುದು ಮಂಡಳಿಗೆ ಅರಿವಿದೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆಯನ್ನು ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿದೆ.
ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾ ತಂಡ ಪ್ರವಾಸಕ್ಕೆ ಆಗಮಿಸಿದ್ದಾಗ ಕೊರೊನಾ ವೈರಸ್ ಕಾರಣದಿಂದಾಗಿ ಅನಿರೀಕ್ಷಿತವಾಗಿ ರದ್ದಾಗಿತ್ತು. ಈ ಸರಣಿಯನ್ನು ಸರಿದೂಗಿಸಲು ಎರಡೂ ಮಂಡಳಿಗಳು ಒಪ್ಪಂದವನ್ನು ಮಾಡಿಕೊಂಡಿದೆ.
ಭಾರತ ಸದ್ಯ ಇಂಗ್ಲೆಂಡ್ ತಂಡದ ವಿರುದ್ಧ ಟಿ20 ಸರಣಿಯಲ್ಲಿ ಪಾಲ್ಗೊಂಡಿದೆ. ಈ ಸರಣಿ ಮುಂಬರುವ ವಿಶ್ವಕಪ್‌ಗೂ ಮುನ್ನ ನಿಗದಿಯಾಗಿರುವ ಏಕೈಕ ಟಿ20 ದ್ವಿಪಕ್ಷೀಯ ಸರಣಿಯಾಗಿದೆ. ಈ ಸರಣಿಯ ಬಳಿಕ ಭಾರತ ಐಪಿಎಲ್ 2021ಯಲ್ಲಿ ಪಾಲ್ಗೊಳ್ಳಲಿದೆ. ಆದರೆ ಭಾರತ ತಂಡಕ್ಕೆ ದ್ವಿಪಕ್ಷೀಯ ಸರಣಿಯ ಅಗತ್ಯವನ್ನು ಮನಗಂಡು ಮಂಡಳಿ ಈ ನಿರ್ಧಾರ ಕೈಗೊಳ್ಳುವ ಸಂಭವ ಹೆಚ್ಚಿದೆ.