
2022ರ ಭಾರತದ ಕ್ರಿಕೆಟ್ ವೇಳಾಪಟ್ಟಿಯಲ್ಲಿ ಪ್ರಮುಖ ಸೇರ್ಪಡೆಯೊಂದು ಆಗಿದ್ದು ಈ ವರ್ಷ ಭಾರತ ಐರ್ಲೆಂಡ್ ಪ್ರವಾಸ ಕೈಗೊಳ್ಳುವುದು ಖಚಿತವಾಗಿದೆ. ಕ್ರಿಕೆಟ್ ಐರ್ಲೆಂಡ್ ಈ ವಿಚಾರವಾಗಿ ಮಂಗಖವಾರ ಅಧಿಕೃತ ಮಾಹಿತಿ ನೀಡಿದ್ದು ಭಾರತ ಹಾಗೂ ಐರ್ಲೆಂಡ್ ತಂಡಗಳು ಎರಡು ಟಿ20 ಪಂದ್ಯಗಳ ಸರಣಿಯಲ್ಲಿ ಮುಖಾಮುಖಿಯಾಗಲಿದೆ ಎಂಬುದನ್ನು ತಿಳಿಸಿದೆ. ಹೀಗಾಗಿ ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಅಂತಿಮಗೊಳಿಸಲು ಮತ್ತೊಂದು ಅವಕಾಶವಿದು.
ಜುಲೈ ತಿಂಗಳಿನಲ್ಲಿ ಭಾರತ ಇಂಗ್ಲೆಂಡ್ ಪ್ರವಾಸ ನಡೆಸಲಿದ್ದು ಈ ಪ್ರವಾಸಕ್ಕೂ ಮುನ್ನ ಭಾರತ ಐರ್ಲೆಂಡ್ ವಿರುದ್ಧ ಈ ಸರಣಿಯಲ್ಲಿ ಭಾಗಿಯಾಗಲಿದೆ. ಈ ಎರಡು ಪಂದ್ಯಗಳು ಜೂನ್ 26 ಹಾಗೂ ಜೂನ್ 28ರಂದು ನಡೆಯಲಿದ್ದು ಮೆಲಹೈಡ್ ಈ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ನಂತರ ಇಂಗ್ಲೆಂಡ್‌ಗೆ ತೆರಳಿ ರೋಹಿತ್ ಶರ್ಮಾ ಹಾಗೂ ಪಡೆ ಐದು ಏಕದಿನ ಹಾಗೂ ಒಂದು ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಸದ್ಯ ಭಾರತ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗುತ್ತಿದ್ದು ಈ ಸರಣಿಯಲ್ಲಿ ಎರಡು ಪಂದ್ಯಗಳನ್ನು ಭಾರತ ಆಡುತ್ತಿದೆ. ಮೊದಲ ಪಂದ್ಯ ಮಾರ್ಚ್ 4ರಿಂದ ಮೊಹಾಲಿಯಲ್ಲಿ ನಡೆಯಲಿದ್ದು ಈ ಪಂದ್ಯ ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯವಾಗಿರುವ ಕಾರಣ ಸಾಕಷ್ಟು ಕುತೂಹಲ ಮೂಡಿಸಿದೆ. ಅದಾದ ಬಳಿಕ ಈ ಸರಣಿಯ ಎರಡನೇ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು ಈ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ.
ಇನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ನಂತರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರಂಬವಾಗಲಿದ್ದು ಅದಕ್ಕಾಗಿ ಎಲ್ಲಾ ಆಟಗಾರರು ಕುಡ ಸಜ್ಜಾಗಲಿದ್ದಾರೆ. ಎರಡು ತಿಂಗಳಿಗೂ ಅಧಿಕ ಕಾಳ ನಡೆಯಲಿರುವ ಈ ಟೂರ್ನಿಯಲ್ಲಿ ಈ ಬಾರಿ 10 ತಂಡಗಳು ಭಾಗವಹಿಸುತ್ತಿದ್ದು ಒಟ್ಟು 74 ಪಂದ್ಯಗಳು ನಡೆಯಲಿದೆ. ಹೀಗೆ ಭಾರತದ ಆಟಗಾರರು ಒಂದಾದ ನಂತರ ಒಂದರಂತೆ ಸತತವಾಗಿ ಕ್ರಿಕೆಟ್ ಟೂರ್ನಮೆಂಟ್‌ಗಳಿಗೆ ಸಜ್ಜಾಗುತ್ತಿದ್ದಾರೆ.
ಇನ್ನು ಈ ಸರಣಿಯ ಬಗ್ಗೆ ಮಾಹಿತಿ ನೀಡಿದ ಬಳಿಕ ಮಾತನಾಡಿದ ಕ್ರಿಕೆಟ್ ಐರ್ಲೆಂಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾರೆನ್ ಡೌಟ್ರಮ್ "ಈ ವರ್ಷದ ಏಪ್ರಿಲ್‌ನಲ್ಲಿ ನಿರ್ಧರಿಸಲಾಗಿದ್ದ ಜಿಂಬಾಬ್ವೆ ಪ್ರವಾಸವನ್ನು ತವರಿನ ಬಾಂಗ್ಲಾದೇಶದ ಸರಣಿಯನ್ನು 2023ಕ್ಕೆ ಮುಂದೂಡಲು ನಾವು ನಿರ್ಧರಿಸಿದ್ದೇವೆ. ಈ ಬದಲಾವಣೆಗಳೊಂದಿಗೆ ನಾವು ಇನ್ನೂ ಈ ವರ್ಷ ವಿಶ್ವದ ಕೆಲವು ಪ್ರಮುಖ ತಂಡಗಳ ವಿರುದ್ಧ ಪುರುಷರ ಕ್ರಿಕೆಟ್‌ನಲ್ಲಿ ಪ್ರಮುಖ ಸರಣಿಗಳನ್ನು ಆಯೋಜಿಸಲಿದ್ದೇವೆ. ಇದರ ಜೊತೆಗೆ ಮಹಿಳಾ ಕ್ರಿಕೆಟ್‌ನಲ್ಲಿಯೂ ಕೆಲ ಮಹತ್ವದ ಬೆಳವಣಿಗೆಗಳ ನಿರೀಕ್ಷೆಯಲ್ಲಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ