ಬೆನೋನಿ: ಯುವ ಆಟಗಾರರಾದ ಹರ್ವಂಶ್ ಪಂಗಾಲಿಯಾ ಹಾಗೂ ಆರ್.ಎಸ್. ಅಂಬರೀಶ್ ಬಾರಿಸಿದ ಅರ್ಧಶತಕದ ಬಲ ಹಾಗೂ ಮಳೆ ಬಾಧಿತ ಪಂದ್ಯದಲ್ಲಿ ಅಂಡರ್ 19 ಭಾರತ ತಂಡ 25 ರನ್ ಗಳಿಂದ ಡಕ್ ವರ್ತ್ ಲೂಯಿಸ್ ನಿಯಮದಂತೆ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಆರಂಭಿಕ ಆಟಗಾರರಾದ ಆರನ್ ಜಾರ್ಜ್ (5), ವೈಭವ್ ಸೂರ್ಯವಂಶಿ (11) ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ಕ್ರಮಾಂಕದಲ್ಲಿ ವೇದಾಂತ್ ತ್ರಿವೇದಿ (21), ಅಭಿಜ್ಞಾನ್ ಕುಂದು (21) ರನ್ ಕಲೆ ಹಾಕುವಲ್ಲಿ ವಿಫಲರಾದರು. 67 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಹರ್ವಂಶ್ ಪಂಗಾಲಿಯಾ ಹಾಗೂ ಆರ್.ಎಸ್. ಅಂಬರೀಶ್ ಜೋಡಿ ಉತ್ತಮ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಧಾರವಾದರು.

6ನೇ ವಿಕೆಟ್‌ಗೆ 137 ರನ್ ಗಳ ಜೊತೆಯಾಟದ ಕಾಣಿಕೆ ನೀಡಿ ಹರ್ವಂಶ್ ಪಂಗಾಲಿಯಾ ಹಾಗೂ ಆರ್.ಎಸ್. ಅಂಬರೀಶ್ ಜೋಡಿ ಅಬ್ಬರಿಸಿತು. ಆರ್.ಎಸ್. ಅಂಬರೀಶ್ 7 ಬೌಂಡರಿ ಸಹಾಯದಿಂದ 65 ರನ್ ಸಿಡಿಸಿದರು. ಹರ್ವಂಶ್ ಪಂಗಾಲಿಯಾ 95 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 93 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಕನಿಷ್ಕ್ ಚೌಹಾಣ್ 32, ಖಲೀನ್ ಪಟೀಲ್ 26 ರನ್ ಸಿಡಿಸಿದರು. ಅಂತಿಮವಾಗಿ ಭಾರತ ತಂಡ 301 ರನ್‌ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ತಂಡದ ಪರ ಜೆಜೆ ಬಾಸನ್ 4 ವಿಕೆಟ್ ಉರುಳಿಸಿದರು.
ದಕ್ಷಿಣ ಆಫ್ರಿಕಾ ತಂಡದ ಪರ ಅದ್ನಾನ್ ಲಗಾಡಿಯನ್ (19), ಮುಹಮ್ಮದ್ ಬಲ್ಬುಲಿಯಾ (5), ಜೇಸನ್ ರೌಲ್ಸ್ (16) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. 62 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ದಕ್ಷಿಣ ಆಫ್ರಿಕಾ ತಂಡದ ಭರವಸೆಯ ಆಟಗಾರರಾದ ಜೋರಿಚ್ ವ್ಯಾನ್ ಶಾಲ್ಕ್ವಿಕ್ ಹಾಗೂ ಅರ್ಮಾನ್ ಮನಕ್ ಜೋಡಿ 86 ರನ್ ಜೊತೆಯಾಟದ ಕಾಣಿಕೆ ನೀಡಿತು. ಅರ್ಮಾನ್ ಮನಕ್ 4 ಬೌಂಡರಿ ಸಹಾಯದಿಂದ 46 ರನ್ ಸಿಡಿಸಿದರು. ಜೋರಿಚ್ ವ್ಯಾನ್ ಶಾಲ್ಕ್ವಿಕ್ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 60 ರನ್ ಬಾರಿಸಿದರು. ದಕ್ಷಿಣ ಆಫ್ರಿಕಾ 27.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 148 ರನ್ ಸಿಡಿಸಿದ್ದಾಗ ಮಳೆ ಬಂದಿತು. ಬಳಿಕ ಡಕ್ ವರ್ತ್ ಲೂಯಿಸ್ ನಿಯಮದಂತೆ ಭಾರತವನ್ನು ವಿಜೇತ ಎಂದು ಘೋಷಿಸಲಾಯಿತು.