ಬುಲವಾಯೊ: ಐಸಿಸಿ ಪುರುಷರ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ತನ್ನ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಶನಿವಾರ ಭಾರತ ಅಂಡರ್ 19 ತಂಡ ಬಿ ಗುಂಪಿನ ಎರಡನೇ ಪಂದ್ಯದಲ್ಲಿ 18 ರನ್‌ಗಳಿಂದ ಬಾಂಗ್ಲಾದೇಶ ಅಂಡರ್ 19 ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಎರಡನೇ ಗೆಲುವಿನ ನಗೆ ಬೀರಿದೆ. ಈ ಮೂಲಕ ಭಾರತ ಬಿ ಗುಂಪಿನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಮಳೆ ಬಾಧಿತ ಪಂದ್ಯವನ್ನು 29 ಓವರ್‌ಗಳಿಗೆ ಇಳಿಸಲಾಯಿತು. ಅಲ್ಲದೆ ಬಾಂಗ್ಲಾಗೆ ಡಕ್ವರ್ತ್ ಲೂಯಿಸ್ ನಿಯಮದಂತೆ 164 ರನ್ ಸೇರಿಸುವ ಗುರಿಯನ್ನು ನೀಡಲಾಯಿತು. ಆದರೆ ಬಾಂಗ್ಲಾ ಈ ಗುರಿಯನ್ನು ಮುಟ್ಟುವಲ್ಲಿ ವಿಫಲವಾಯಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ಅಂಡರ್ 19 ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ನಾಯಕ ಆಯುಷ್ ಮಾತ್ರೆ (6), ವೇದಾಂತ್ ತ್ರಿವೇದಿ (0), ವಿಹಾನ್ ಮಲೋತ್ರಾ (7) ಬಾಂಗ್ಲಾ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು. ಪರಿಣಾಮ ಭಾರತ 53 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ತಂಡಕ್ಕೆ ನೆರವಾಗಿದ್ದು ಆರಂಭಿಕ ಆಟಗಾರ್ತಿ ವೈಭವ್ ಸೂರ್ಯವಂಶಿ ಹಾಗೂ ಅಭಿಗ್ಯಾನ್ ಕುಂಡು ಜೋಡಿ.

ಸಂಕಷ್ಟದಲ್ಲಿದ್ದ ತಂಡಕ್ಕೆ ವೈಭವ್ ಹಾಗೂ ಅಭಿಗ್ಯಾನ್ ಕುಂಡು ಕೊಂಚ ಆಸರೆಯಾಯಿತು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಬಾಂಗ್ಲಾ ಬೌಲರ್‌ಗಳು ವಿಫಲರಾದರು. ಈ ಜೋಡಿ 4ನೇ ವಿಕೆಟ್‌ಗೆ 101 ಎಸೆತಗಳಲ್ಲಿ 62 ರನ್ ಸೇರಿಸಿತು. ಈ ವೇಳೆ ವೈಭವ್ ಸೂರ್ಯವಂಶಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ವೈಭವ್ ಸೂರ್ಯವಂಶಿ ಔಟ್ ಆಗುವ ಮುನ್ನ 6 ಬೌಂಡರಿ, 3 ಸಿಕ್ಸರ್ ನೆರವಿನಿಂದ 72 ರನ್ ಬಾರಿಸಿದ್ದರು.
ಆರನೇ ವಿಕೆಟ್‌ಗೆ ಅಭಿಗ್ಯಾನ್ ಕುಂಡು ಮತ್ತು ಕನಿಷ್ಕ್ ಚೌಹಾಣ್ ಜೋಡಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ನೆರವಾದರು. ಈ ಜೊಡಿ 45 ಎಸೆತಗಳಲ್ಲಿ 54 ರನ್ ಸೇರಿಸಿತು. ಕನಿಷ್ಕ್ ಚೌಹಾಣ್ 4 ಬೌಂಡರಿ ನೆರವಿನಿಂದ 28 ರನ್ ಸಿಡಿಸಿ ಔಟ್ ಆದರು. ಒಂದು ಕಡೆಯಲ್ಲಿ ವಿಕೆಟ್ ಬೀಳುತ್ತಾ ಇದ್ದರೂ ಧೃತಿ ಗೆಡದೆ ಬ್ಯಾಟ್ ಮಾಡಿದ ಅಭಿಗ್ಯಾನ್ ಕುಂಡು ಸೊಗಸಾದ ಬ್ಯಾಟಿಂಗ್ ಪ್ರದರ್ಶಿಸಿದರು. ಇವರು 112 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 80 ರನ್ ಬಾರಿಸಿದರು. ಅಂತಿಮವಾಗಿ ಭಾರತ ತಂಡ 48.4 ಓವರ್‌ಗಳಲ್ಲಿ 238 ರನ್ ಸೇರಿಸಿತು. ಬಾಂಗ್ಲಾದೇಶ ತಂಡದ ಪರ ಅಲ್ ಫಹಾದ್ 5 ವಿಕೆಟ್ ಕಬಳಿಸಿದರು.
ಗುರಿಯನ್ನು ಹಿಂಬಾಲಿಸಿದ ಬಾಂಗ್ಲಾದೇಶದ ಆರಂಭ ಕಳಪೆಯಾಗಿತ್ತು. ಎರಡನೇ ವಿಕೆಟ್‌ಗೆ ರಿಫತ್ ಬೇಗ್ ಹಾಗೂ ಅಜೀಜುಲ್ ಹಕೀಮ್ ಜೋಡಿ ಭರ್ಜರಿ ಜೊತೆಯಾಟವನ್ನು ನೀಡಿತು. ಈ ಜೋಡಿ ಎರಡನೇ ವಿಕೆಟ್‌ಗೆ 67 ಎಸೆತಗಳಲ್ಲಿ 56 ರನ್ ಸೇರಿಸಿತು. ರಿಫತ್ ಬೇಗ್ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 37 ರನ್ ಬಾರಿಸಿ ಔಟ್ ಆದರು. ಮೂರನೇ ವಿಕೆಟ್‌ಗೆ ಅಜೀಜುಲ್ ಹಕೀಮ್ ಹಾಗೂ ಕಲಾಂ ಸಿದ್ಧಿಕಿ (15) ಜೋಡಿ 44 ರನ್‌ಗಳ ಜೊತೆಯಾಟವನ್ನು ನೀಡಿತು. ಅಜೀಜುಲ್ ಹಕೀಮ್ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 51 ರನ್ ಬಾರಿಸಿ ಅಬ್ಬರಿಸಿದರು. ಮಧ್ಯಮ ಕ್ರಮಾಂಕದಲ್ಲಿ ರಿಜಾನ್ ಹೊಸನ್ (15) ಡಬಲ್ ಡಿಜಿಟ್ ಮುಟ್ಟಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ 28.3 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ವಿಹಾನ್ ಮಲೋತ್ರಾ 4 ವಿಕೆಟ್ ಉರುಳಿಸಿದರು.