ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಿರುವ ಟೀಮ್ ಇಂಡಿಯಾ ಮಹಿಳಾ ತಂಡ ಅಂಡರ್ 19 ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿತು. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಪರ ವೈಷ್ಣವಿ ಶರ್ಮಾ ಹಾಗೂ ಪರುಣಿಕಾ ಸಿಸೋಡಿಯಾ ಶಿಸ್ತು ಬದ್ಧ ದಾಳಿಯನ್ನು ಸಂಘಟಿಸಿ ಗೆಲುವಿನಲ್ಲಿ ಮಿಂಚಿದರು. ಇವರಿಬ್ಬರ ಅಮೋಘ ದಾಳಿಯ ಪರಿಣಾಮ ಟೀಮ್ ಇಂಡಿಯಾ ಪ್ರಸಕ್ತ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದೆ.
ಮಲೇಷಿಯಾದ ಕೌಲಾಲಂಪುರದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 113 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ ತಂಡ ಇನ್ನು 30 ಎಸೆತಗಳು ಬಾಕಿ ಇರುವಂತೆ 9 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದಿತು. ಸೆಮಿಫೈನಲ್ ಪಂದ್ಯದಲ್ಲಿ ಮನಮೋಹಕ ಬೌಲಿಂಗ್ ದಾಳಿಯನ್ನು ನಡೆಸಿದ ಪರುಣಿಕಾ ಸಿಸೋಡಿಯಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಂಗ್ಲೆಂಡ್ ತಂಡದ ಪರ ಟೂರ್ನಿಯಲ್ಲಿ ಗರಿಷ್ಠ ರನ್ ಕಲೆ ಹಾಕಿರುವ ಬ್ಯಾಟರ್ ಡೇವಿನಾ ಪೆರಿನ್ ಮಹತ್ವದ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಇವರು ನೆಲಕಚ್ಚಿನಿಂತು ಬ್ಯಾಟ್ ಮಾಡಿ, ಟೀಮ್ ಇಂಡಿಯಾ ಮಹಿಳಾ ತಂಡದ ರಣ ತಂತ್ರವನ್ನು ಮೆಟ್ಟಿನಿಂತರು. ಆರಂಭಿಕರಾಗಿ ಬ್ಯಾಟ್ ಮಾಡಿದ ಅವರು 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 45 ರನ್ ಬಾರಿಸಿ, ಮೂರನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿದರು.
ನಾಯಕಿ ಅಬಿ ನಾರ್ಗ್ರೋವ್ ಘನತೆಗೆ ತಕ್ಕ ಆಟವನ್ನು ಆಡಿದರು. ಇವರು 25 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 30 ರನ್ ಸಿಡಿಸಿ ಔಟ್ ಆದರು. ಕೆಳ ಕ್ರಮಾಂಕದಲ್ಲಿ ಅಮು ಸುರೇನ್‌ಕುಮಾರ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಫಲವಾಗಿ ಇಂಗ್ಲೆಂಡ್ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತು. ಉಳಿದ ಬ್ಯಾಟರ್‌ಗಳು ಜವಾಬ್ದಾರಿಯನ್ನು ಮರೆತರು.
ಭಾರತದ ಬೌಲರ್‌ಗಳು ಶಿಸ್ತು ಬದ್ಧ ದಾಳಿಯನ್ನು ಸಂಘಟಿಸಿದರು. ಟೀಮ್ ಇಂಡಿಯಾ ಪರ
ಪರುಣಿಕಾ ಸಿಸೋಡಿಯಾ ಹಾಗೂ ವೈಷ್ಣವಿ ಶರ್ಮಾ ಮಹತ್ವದ ಪಂದ್ಯದಲ್ಲಿ ಮೂರು ವಿಕೆಟ್ ಪಡೆದರು. ಆಯುಷಿ ಶುಕ್ಲಾ ಎರಡು ವಿಕೆಟ್ ಕಬಳಿಸಿದರು.
ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಗಂಗಾಡಿ ತ್ರಿಷಾ ಹಾಗೂ ಜಿ.ಕಮಲಿನಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರಿಬ್ಬರು 9 ಓವರ್‌ಗಳಲ್ಲಿ 60 ರನ್‌ಗಳ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಟೂರ್ನಿಯುದ್ಧಕ್ಕೂ ಉತ್ತಮ ಬ್ಯಾಟ್ ಮಾಡಿದ ತ್ರಿಷಾ ಸೆಮಿಫೈನಲ್ ಪಂದ್ಯದಲ್ಲಿ 35 ರನ್ ಸಿಡಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಕಮಲಿನಿ ಸ್ಥಿರ ಬ್ಯಾಟಿಂಗ್ ನಡೆಸಿದರು. ಇವರು 8 ಬೌಂಡರಿ ಸೇರಿದಂತೆ ಅಜೇಯ 56 ರನ್ ಸಿಡಿಸಿದರು. ಸನಿಕಾ ಚಲ್ಕೆ ಅಜೇಯ 11 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅಂಡರ್ 19 ಮಹಿಳಾ ತಂಡ, ಆಸ್ಟ್ರೇಲಿಯಾ ತಂಡವನ್ನು ಮಣಿಸಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 105 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 18.1 ಓವರ್‌ಗಳಲ್ಲಿ 5 ವಿಕೆಟ್‌ಗೆ 106 ರನ್ ಕಲೆ ಹಾಕಿತು.